ಮಂಗಳೂರಿನಲ್ಲಿ ಹೈಕೋರ್ಟ್ ಸಂಚಾರಿ ಪೀಠಕ್ಕೆ ವಕೀಲರ ಸಂಘಟನೆಗಳ ಆಗ್ರಹ

ಮಂಗಳೂರು, ಅ.13: ನಗರದಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯದ ಸಂಚಾರಿ ಪೀಠ ಆರಂಭಿಸಬೇಕು ಎಂದು ದಕ್ಷಿಣ ಕನ್ನಡ, ಉಡುಪಿ, ಕೊಡಗು ಜಿಲ್ಲೆಗಳ ವಕೀಲರ ಸಂಘಟನೆಗಳು ಸರಕಾರವನ್ನು ಆಗ್ರಹಿಸಿವೆ.
ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಮಂಗಳೂರು ಬಾರ್ ಅಸೋಸಿಯೇಶನ್ ಅಧ್ಯಕ್ಷ ಎಸ್.ಪಿ.ಚೆಂಗಪ್ಪ, ಸ್ಮಾರ್ಟ್ ಸಿಟಿಯಾಗಿರುವ ಮಂಗಳೂರಿಗೆ ಸಂಚಾರಿ ಪೀಠ ಅನಿವಾರ್ಯ ಎಂದು ಹೇಳಿದರು.
ಸಂಚಾರಿ ಪೀಠ ಸ್ಥಾಪನೆಗಾಗಿ ಈಗಾಗಲೇ ದೇಶದ ಮುಖ್ಯ ನ್ಯಾಯಾಧೀಶರು, ರಾಜ್ಯ ಮುಖ್ಯ ನ್ಯಾಯಾಧೀಶರು, ಸಿಎಂ ಮತ್ತಿತರರಿಗೆ ಮನವಿ ಸಲ್ಲಿಸಲಾಗಿದೆ. ವಕೀಲರೇ ಆಗಿರುವ ಐವನ್ ಡಿಸೋಜ, ಯು.ಟಿ.ಖಾದರ್, ಎಂ.ವೀರಪ್ಪ ಮೊಯ್ಲಿ, ಡಿ.ವಿ.ಸದಾನಂದ ಗೌಡ ಮೊದಲಾದ ನಾಯಕರು ತಮ್ಮ ಪರವಾಗಿದ್ದಾರೆ. ಮುಂದಿನ ದಿನಗಳಲ್ಲಿ ವಿವಿಧ ಸಂಘಟನೆಗಳ ಜತೆಗೂಡಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಚೆಂಗಪ್ಪ ಹೇಳಿದರು.
ದಕ್ಷಿಣ ಕನ್ನಡ ಜಿಲ್ಲೆಯ ಹಿಂದುಳಿದ ಪ್ರದೇಶದ ಜನರು ಮತ್ತು ನೆರೆಯ ಜಿಲ್ಲೆಗಳ ಗ್ರಾಮೀಣ ಪ್ರದೇಶದ ಜನರಿಗೆ ಕಾನೂನು ಕೈಗೆಟುಕದ ಮಾತಾಗಿದೆ. ಈ ಪ್ರದೇಶದ ಜನರು ತಾಲೂಕು ಮಟ್ಟದ ನ್ಯಾಯಾಲಯಗಳಿಂದ ಜಿಲ್ಲಾ ಮಟ್ಟಕ್ಕೆ ಬರುವುದೇ ದುಸ್ತರವಾಗಿದ್ದು, ಉಚ್ಚ ನ್ಯಾಯಾಲಯದ ಕದ ತಟ್ಟುವುದು ಕನಸಿನ ಮಾತು. ಇದರಿಂದ ನ್ಯಾಯ ಉಳ್ಳವರ ಪಾಲಾಗುವ ಸಾಧ್ಯತೆ ಹೆಚ್ಚು. ಇಲ್ಲೇ ಪೀಠ ಸ್ಥಾಪನೆಯಾದರೆ ಹೆಚ್ಚಿನ ಖರ್ಚು, ಸಮಯ, ಪ್ರಯಾಣದ ತ್ರಾಸ ಉಳಿಸಬಹುದು ಎಂದು ಅವರು ಹೇಳಿದರು.
ಕಲ್ಯಾಣ ನಿಧಿ ಹೆಚ್ಚಿಸಲು ಮನವಿ
ಕರ್ನಾಟಕ ನ್ಯಾಯವಾದಿಗಳ ಕಲ್ಯಾಣ ಅಧಿನಿಯಮ 1983ಕ್ಕೆ ತಿದ್ದುಪಡಿ ತರುವ ಮೂಲಕ ವಕೀಲರಿಗೆ ಅನ್ಯಾಯವಾಗಿದೆ. ಈ ವಿಧೇಯಕದಲ್ಲಿ ತಂದಿರುವ ವೈದ್ಯಕೀಯ ವೆಚ್ಚಕ್ಕೆ ಸಂಬಂಧಿಸಿ ತಿದ್ದುಪಡಿಯು ವಕೀಲರ ಸ್ವಾಸ್ಥ್ಯ ಹದಗೆಡಿಸುವಂತಿದೆ. ಈ ಸಮಸ್ಯೆ ಪರಿಹರಿಸಿ ರಾಜ್ಯ ವಕೀಲರ ಪರಿಷತ್ ಸದಸ್ಯರಿಗೆ ಸಮಾನವಾಗಿ ಕನಿಷ್ಠ 10 ಲಕ್ಷ ರೂ. ಪರಿಹಾರ ನಿಧಿ ಕೊಡಬೇಕು.
15 ವರ್ಷ ವೃತ್ತಿ ಪೂರೈಸಿರುವ ಸದಸ್ಯ ಪ್ರತಿವರ್ಷ ಡಿಸೆಂಬರ್‌ನಲ್ಲಿ ಒಂದು ಸಾವಿರ ರೂ. ಹಾಗೂ ಅವಧಿ ಪೂರ್ಣಗೊಳಿಸಿದ ವಕೀಲ ಡಿಸೆಂಬರ್‌ನಲ್ಲಿ 500 ರೂ. ಸಂದಾಯ ಮಾಡಬೇಕು ಎನ್ನುವ ಕ್ರಮವನ್ನು ಕೈಬಿಡಬೇಕು. ಅತ್ಯಂತ ಕ್ಲಪ್ತ ಸಮಯದಲ್ಲಿ ಪರಿಹಾರ ಬಿಡುಗಡೆ ಮಾಡಬೇಕು ಎಂದು ಅವರು ಮನವಿ ಮಾಡಿದರು.
ಸರಕಾರ ಯುವ ವಕೀಲರಿಗೆ ನೀಡುವ ಪ್ರೋತ್ಸಾಹ ಧನವನ್ನು 24 ತಿಂಗಳಿಗೆ ಮಾತ್ರ ಮೀಸಲಿರಿಸದೆ, ಕನಿಷ್ಠ 36 ತಿಂಗಳಿಗೆ ವಿಸ್ತರಿಸಬೇಕು. ಕಾನೂನು ಪದವೀಧರರಿಗೆ ಪ್ರೋತ್ಸಾಹ ಧನ, ಅವಧಿ ಹೆಚ್ಚಿಸಬೇಕು ಮತ್ತು ಪ್ರೋತ್ಸಾಹ ಧನ ಕೊಡಲು ನಿಗದಿತ 40 ಸಾವಿರ ರೂ. ಆದಾಯ ಮಿತಿ ತೆಗೆದು ಹಾಕಬೇಕು ಎಂದು ಅವರು ಈ ಸಂದರ್ಭ ಒತ್ತಾಯಿಸಿದರು.
ಗೋಷ್ಠಿಯಲ್ಲಿ ಮಂಗಳೂರು ವಕೀಲರ ಸಂಘದ ಉಪಾಧ್ಯಕ್ಷ ಯಶೋದರ ಕರ್ಕೇರ, ಪ್ರಧಾನ ಕಾರ್ಯದರ್ಶಿ ರಾಘವೆಂದ್ರ ಎಚ್.ವಿ., ಕಾರ್ಯಕಾರಿ ಸಮಿತಿ ಸದಸ್ಯರಾದ ಸುಂದರ ಗೌಡ, ಶ್ರೀಧರ ಶೆಟ್ಟಿ ಪುಳಿಂಚ, ರವೀಂದ್ರ ಮನ್ನಿಪ್ಪಾಡಿ, ಮೂಡುಬಿದಿರೆ ವಕೀಲರ ಸಂಘದ ಬಾಹುಬಲಿ ಪ್ರಸಾದ್ ಅಲ್ಲದೆ, ಉಡುಪಿ, ಕೊಡಗು ಜಿಲ್ಲೆಯ ವಿವಿಧ ತಾಲೂಕು ವಕೀಲರ ಸಂಘಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.







