ಟಿಪ್ಪು ಜಯಂತಿ ಆಚರಣೆ ಕೈಬಿಡಲು ಆಗ್ರಹ
ಮಂಗಳೂರು, ಅ.13: ರಾಜ್ಯ ಸರ್ಕಾರ ನ.10 ರಂದು ನಡೆಸಲುದ್ದೇಶಿಸಿದ ಟಿಪ್ಪು ಜಯಂತಿ ಆಚರಣೆ ವೈಭವೀಕರಣವಾಗಿದ್ದು ಜನವಿರೋಧಿ ನೀತಿಯಾಗಿದೆ. ಸರ್ಕಾರ ಈ ತೀರ್ಮಾನವನ್ನು ಹಿಂಪಡೆಯಬೇಕು ಎಂದು ದ.ಕ. ಜಿಲ್ಲಾ ಟಿಪ್ಪು ಜಯಂತಿ ವಿರೋಧಿ ಹೋರಾಟ ಸಮಿತಿ ಆಗ್ರಹಿಸಿದೆ.
ಸುದ್ದಿಗೋಷ್ಠಿಯಲ್ಲಿಂದು ಸಮಿತಿಯ ಸಂಚಾಲಕ ಕಿಶೋರ್ ಕುಮಾರ್ ಮಾತನಾಡಿ, ಟಿಪ್ಪು ಕನ್ನಡ ವಿರೋಧಿ. ತನ್ನ ಆಡಳಿತಾವಧಿಯಲ್ಲಿ ಪರ್ಷಿಯನ್ ಹಾಗೂ ಉರ್ದು ಭಾಷೆಯನ್ನು ಅಳವಡಿಸಿದ್ದ. ಕೊಡವರ ಸಹಿತ ಹಿಂದುಗಳ ಮತಾಂತರ ಮತ್ತು ಹತ್ಯೆ ನಡೆಸಿದಲ್ಲದೇ ದ.ಕ. ಜಿಲ್ಲೆಯಲ್ಲಿ ಅನೇಕ ಚರ್ಚ್‌ಗಳಿಗೆ ದಾಳಿ ನಡೆಸಿ ಕ್ರೈಸ್ತರನ್ನು ಕೈದಿಯನ್ನಾಗಿಸಿ ಇಸ್ಲಾಂಗೆ ಮತಾಂತರಗೊಳಿಸುವ ಮೂಲಕ ಹಿಂದು, ಕ್ರೈಸ್ತ ವಿರೋಧಿಯಾಗಿದ್ದನು. ದ.ಕ. ಕೊಡಗು, ಕಾಸರಗೋಡು ಸಹಿತ ಮಲಬಾರ್ ಪ್ರಾಂತಗಳಲ್ಲಿ ಮತಾಂಧನಾಗಿ ಕ್ರೂರ ಆಡಳಿತ ನಡೆಸಿರುವ ಆತನ ಜಯಂತಿ ಆಚರಣೆಗೆ ವಿರೋಧವಿದೆ ಎಂದರು.
ರಾಜ್ಯ ಸರ್ಕಾರದ ಜಯಂತಿ ಆಚರಣೆ ನಡೆಸುವ ತೀರ್ಮಾನದನ್ವಯ ತಮ್ಮ ಹೋರಾಟ ತೀವ್ರಗೊಳಿಸಲಾಗುವುದು. ಮೊದಲ ಹಂತದಲ್ಲಿ ಎಲ್ಲಾ ತಾಲೂಕು ತಹಶೀಲ್ದಾರ್ ಮೂಲಕ ಹಾಗೂ ಅಕ್ಟೋಬರ್ 17 ರಂದು ದ.ಕ. ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು. ನವೆಂಬರ್ 1ರಿಂದ ಜಿಲ್ಲೆಯಾದ್ಯಂತ ಬೃಹತ್ ಪ್ರತಿಭಟನೆ, ಟಿಪ್ಪು ಆಡಳಿತದ ಅಧ್ಯಯನ ನಡೆಸಿರುವ ೆ್ರೂೆಸರ್‌ಗಳಿಂದ ವಿಚಾರಗೋಷ್ಠಿಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ವಿವರಿಸಿದರು.
ಕನ್ನಡ ವಿರೋಧಿಯಾಗಿರುವ ಆತನ ಕುರಿತಾಗಿ ಶಾಲಾ ಪುಸ್ತಕಗಳಲ್ಲಿ ಪಠ್ಯಕ್ರಮಗಳನ್ನು ಬರಬಾರದು ಎಂದ ಅವರು, ತನ್ನ ಆಡಳಿತ ಉಳಿಸಿಕೊಳ್ಳುವ ಅಂಗವಾಗಿ ಹಿಂದು ವಿರೋಧಿ ಭಾವನೆ ಮರೆಮಾಚಲು ಶೃಂಗೇರಿ ದೇಗುಲಕ್ಕೆ ಸಹಾಯ ಮಾಡಿದ್ದ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿ ಸಹಸಂಚಾಲಕರುಗಳಾದ ಭುಜಂಗ ಕುಲಾಲ್, ಹರೀಶ್ ಪೂಂಜ, ಅಮಿತ್ ಗುಂಡಳಿಕೆ ಉಪಸ್ಥಿತರಿದ್ದರು.







