ಶೇರುಪೇಟೆಯಲ್ಲಿ ರಕ್ತಪಾತ 439 ಅಂಶ ಕುಸಿದ ಸೆನ್ಸೆಕ್ಸ್

ಮುಂಬೈ,ಅ.13: ವಿಜಯ ದಶಮಿ ಮತ್ತು ಮುಹರಂ ಅಂಗವಾಗಿ ಎರಡು ದಿನಗಳ ರಜೆಯ ಬಳಿಕ ಗುರುವಾರ ಪುನರಾರಂಭಗೊಂಡ ಶೇರು ಮಾರುಕಟ್ಟೆ ಆರಂಭದಿಂದಲೇ ಕುಸಿತ ಕಂಡಿದ್ದು, ದಿನದ ವಹಿವಾಟಿನಲ್ಲಿ ಹೂಡಿಕೆದಾರರ ಕೋಟ್ಯಂತರ ರೂ.ಗಳ ಸಂಪತ್ತು ಕರಗಿಹೋಗಿದೆ. ಬಾಂಬೆ ಶೇರು ವಿನಿಮಯ ಕೇಂದ್ರದ ಸೂಚ್ಯಂಕ ಸೆನ್ಸೆಕ್ಸ್ ದಿನದ ಅಂತ್ಯಕ್ಕೆ 439.23 ಅಂಶಗಳ ಕುಸಿತದೊಡನೆ 27,643.11 ಅಂಶಗಳಿಗೆ ಮುಕ್ತಾಯಗೊಂಡಿದೆ. ಅತ್ತ ರಾಷ್ಟ್ರೀಯ ಶೇರು ವಿನಿಮಯ ಕೇಂದ್ರದ ಸೂಚ್ಯಂಕ ನಿಫ್ಟಿ 135.45 ಅಂಶಗಳ ಕುಸಿತದೊಡನೆ 8753.35ಕ್ಕೆ ತನ್ನ ದಿನದ ಆಟವನ್ನು ಮುಗಿಸಿದೆ. ಏಷ್ಯಾದಾದ್ಯಂತ ಮಾರುಕಟ್ಟೆಗಳ ಕುಸಿತ, ಐರೋಪ್ಯ ಮಾರುಕಟ್ಟೆಗಳ ದುರ್ಬಲ ಆರಂಭ ಮತ್ತು ಚೀನಾದ ಆರ್ಥಿಕ ಅಂಕಿಅಂಶಗಳು ನಿರೀಕ್ಷೆಗಿಂತಲೂ ಕೆಟ್ಟದಾಗಿದ್ದು ಭಾರತೀಯ ಶೇರು ಮಾರುಕಟ್ಟೆಯಲ್ಲಿಯೂ ಪ್ರತಿಫಲಿಸಿದ್ದು, ಹೂಡಿಕೆದಾರರು ಮಾರಾಟಕ್ಕೆ ಮುಗಿಬಿದ್ದಿದ್ದರಿಂದ ಒತ್ತಡ ಹೆಚ್ಚಾಗಿತ್ತು. ಇದರೊಡನೆ ಅಮೆರಿಕದ ಫೆಡರಲ್ ರಿಸರ್ವ್‌ನ ಸೆಪ್ಟೆಂಬರ್ ಸಭೆಯ ನಡಾವಳಿಗಳು ಈ ವರ್ಷ ಸಂಭಾವ್ಯ ಬಡ್ಡಿದರದ ಸುಳಿವು ನೀಡಿದ್ದು ಕೂಡ ದೇಶಿಯ ಮಾರುಕಟ್ಟೆಯ ಮೇಲೆ ನಕಾರಾತ್ಮಕ ಪ್ರಭಾವ ಬೀರಿತ್ತು. ಅಲ್ಲದೆ ದಿನದ ವಹಿವಾಟಿನಲ್ಲಿ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್‌ನೆದುರು ರೂಪಾಯಿ 41 ಪೈಸೆಗಳಷ್ಟು ಕುಸಿದು 66.94ಕ್ಕೆ ಇಳಿದಿದ್ದು ಕೂಡ ಶೇರುಗಳ ಮಾರಾಟದ ಮೇಲೆ ಒತ್ತಡ ಹೇರಿತ್ತು.
ರಿಯಾಲ್ಟಿ,ಲೋಹ,ಗ್ರಾಹಕ ಬಳಕೆದಾರರ ವಸ್ತುಗಳು,ಆಟೋ ಮತ್ತು ಬ್ಯಾಂಕಿಂಗ್ ಸೇರಿದಂತೆ ಹೆಚ್ಚುಕಡಿಮೆ ಎಲ್ಲ ವಲಯಗಳು ಕುಸಿತವನ್ನು ಅನುಭವಿಸಿವೆ.





