ಮರಾಠಾ ಮೀಸಲಾತಿ:ಪ್ರಮಾಣಪತ್ರ ಸಲ್ಲಿಸಲು ಸರಕಾರಕ್ಕೆ ಹೈಕೋರ್ಟ್‌ನ ಕೊನೆಯ ಅವಕಾಶ

ಮುಂಬೈ,ಅ.13: ರಾಜ್ಯದಲ್ಲಿ ಸರಕಾರಿ ಉದ್ಯೋಗಗಳು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಮರಾಠಾ ಸಮುದಾಯಕ್ಕೆ ಮೀಸಲಾತಿಗೆ ಸಂಬಂಧಿಸಿದ ವಿಷಯದಲ್ಲಿ ಪ್ರಮಾಣಪತ್ರ ಮತ್ತು ಇತರ ಹೇಳಿಕೆಗಳನ್ನು ಸಲ್ಲಿಸುವಲ್ಲಿ ಮಹಾರಾಷ್ಟ್ರ ಸರಕಾರದ ವಿಳಂಬದ ಕುರಿತು ಬಾಂಬೆ ಉಚ್ಚ ನ್ಯಾಯಾಲಯವು ಗುರುವಾರ ತೀವ್ರ ಅತೃಪ್ತಿಯನ್ನು ವ್ಯಕ್ತಪಡಿಸಿತು.
ಗುರುವಾರದೊಳಗೆ ತಮ್ಮ ಪ್ರಮಾಣಪತ್ರಗಳು,ಉತ್ತರಗಳು ಮತ್ತು ಲಿಖಿತ ಹೇಳಿಕೆಗಳನ್ನು ಸಲ್ಲಿಸುವಂತೆ ನ್ಯಾಯಮೂರ್ತಿಗಳಾದ ಅನೂಪ್ ಮೊಹ್ತಾ ಮತ್ತು ಜಿ.ಎಸ್.ಕುಲಕರ್ಣಿ ಅವರ ವಿಭಾಗೀಯ ಪೀಠವು ಕಳೆದ ತಿಂಗಳು ಎಲ್ಲ ಪ್ರತಿವಾದಿಗಳಿಗೆ ನಿರ್ದೇಶ ನೀಡಿತ್ತು ಮತ್ತು ಇಂದು ಪ್ರಕರಣದ ವಿಚಾರಣೆಗೆ ದಿನಾಂಕವನ್ನು ನಿಗದಿ ಮಾಡಲು ಅದು ಉದ್ದೇಶಿಸಿತ್ತು.
ಪ್ರಮಾಣಪತ್ರವು ಸಿದ್ಧವಾಗಿದೆಯಾದರೂ ವಾದವನ್ನು ಸಮರ್ಥಿಸಿಕೊಳ್ಳಲು ದತ್ತಾಂಶ ಗಳು ಮತ್ತು ಮಾಹಿತಿಗಳನ್ನು ಸಂಗ್ರಹಿಸಲು ಕಾಲಾವಕಾಶ ಅಗತ್ಯವಿದೆ ಎಂದು ಸರಕಾರದ ಪರ ಹಿರಿಯ ವಕೀಲ ವಿ.ಎ.ಥೋರಾತ್ ಅವರು ನಿವೇದಿಸಿಕೊಂಡರು.
ಡಿ.7ರವರೆಗೆ ಪ್ರಕರಣದ ಕಲಾಪವನ್ನು ಮುಂದೂಡಿದ ನ್ಯಾಯಾಲಯವು, ಇದು ತಾನು ಸರಕಾರಕ್ಕೆ ನೀಡುತ್ತಿರುವ ಕೊನೆಯ ಅವಕಾಶವಾಗಿದೆ ಎಂದು ಸ್ಪಷ್ಟಪಡಿಸಿತು.





