ಉಗ್ರರ ವಿರುದ್ಧದ ಕ್ರಮ ರಾಷ್ಟ್ರೀಯ ಭದ್ರತೆಗೆ ಅಪಾಯ ಹೇಗೆ?
ಪಾಕ್ ದೈನಿಕ ‘ದ ನೇಶನ್’ ಪ್ರಶ್ನೆ

ಇಸ್ಲಾಮಾಬಾದ್, ಅ. 13: ಜೈಶೆ ಮುಹಮ್ಮದ್ ಸಂಘಟನೆಯ ಮುಖ್ಯಸ್ಥ ಮಸೂದ್ ಅಝರ್ ಮತ್ತು ಜೆಯುಡಿ ಮುಖ್ಯಸ್ಥ ಹಫೀಝ್ ಸಯೀದ್ ವಿರುದ್ಧ ಕ್ರಮ ತೆಗೆದುಕೊಂಡರೆ ದೇಶದ ರಾಷ್ಟ್ರೀಯ ಭದ್ರತೆಗೆ ಹೇಗೆ ‘ಅಪಾಯ’ವಾಗುತ್ತದೆ ಎಂಬುದಾಗಿ ಪಾಕಿಸ್ತಾನದ ಪ್ರಮುಖ ಪತ್ರಿಕೆ ‘ದ ನೇಶನ್’ ದೇಶದ ನಾಗರಿಕ ಮತ್ತು ಸೇನಾ ಅಧಿಕಾರಿಗಳನ್ನು ಪ್ರಶ್ನಿಸಿದೆ.
ದೇಶದ ಇನ್ನೊಂದು ಪ್ರಮುಖ ಪತ್ರಿಕೆ ‘ಡಾನ್’ನ ಪತ್ರಕರ್ತ ಸಿರಿಲ್ ಅಲ್ಮೇಡರನ್ನು ಸರಕಾರ ವಿದೇಶ ಪ್ರಯಾಣ ನಿರ್ಬಂಧ ಪಟ್ಟಿಗೆ ಸೇರಿಸಿದ ಬೆನ್ನಿಗೇ, ‘ದ ನೇಶನ್’ ಪತ್ರಿಕೆಯಲ್ಲಿ ಈ ತೀಕ್ಷ್ಣ ಸಂಪಾದಕೀಯ ಪ್ರಕಟಗೊಂಡಿದೆ.
ಹಕ್ಕಾನಿ ನೆಟ್‌ವರ್ಕ್, ತಾಲಿಬಾನ್ ಮತ್ತು ಲಷ್ಕರೆ ತಯ್ಯಬ ಮುಂತಾದ ಭಯೋತ್ಪಾದಕ ಸಂಘಟನೆಗಳಿಗೆ ರಹಸ್ಯ ಬೆಂಬಲ ನೀಡುವ ವಿಚಾರದಲ್ಲಿ ದೇಶದ ನಾಗರಿಕ ಮತ್ತು ಸೇನಾ ಅಧಿಕಾರಿಗಳ ನಡುವೆ ಸಂಘರ್ಷ ಏರ್ಪಟ್ಟಿದೆ ಎಂಬ ವರದಿಯನ್ನು ಸಿರಿಲ್ ಅಲ್ಮೇಡ ಸಿದ್ಧಪಡಿಸಿರುವ ಹಿನ್ನೆಲೆಯಲ್ಲಿ ಅವರ ವಿರುದ್ಧ ಈ ದಂಡನಾ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಲಾಗಿದೆ.
‘ಸ್ನೇಹಿತರನ್ನು ಕಳೆದುಕೊಳ್ಳುವುದು ಮತ್ತು ಜನರನ್ನು ಪರಕೀಯರನ್ನಾಗಿಸುವುದು ಹೇಗೆ?’ ಎಂಬ ತಲೆಬರಹದ ಸಂಪಾದಕೀಯವು, ಅಝರ್ ಮತ್ತು ಸಯೀದ್ ವಿರುದ್ಧ ಕ್ರಮ ತೆಗೆದುಕೊಳ್ಳುವುದನ್ನು ಬಿಟ್ಟು ಸರಕಾರ ಮತ್ತು ಸೇನೆ ಪತ್ರಿಕೆಗಳಿಗೆ ಭಾಷಣ ಮಾಡುತ್ತಿದೆ ಎಂದು ಹೇಳಿದೆ.
ಜೈಶೆ ಮುಹಮ್ಮದ್ ಮುಖ್ಯಸ್ಥ ಹಾಗೂ ಪಠಾಣ್‌ಕೋಟ್ ಭಯೋತ್ಪಾದನಾ ದಾಳಿಯ ಸೂತ್ರಧಾರಿ ಅಝರ್ ಮತ್ತು ಜಮಾತ್-ಉದ್-ದಾವ ಮುಖ್ಯಸ್ಥ ಹಾಗೂ 2008ರ ಮುಂಬೈ ದಾಳಿಯ ಸೂತ್ರಧಾರಿ ಸಯೀದ್ ಪಾಕಿಸ್ತಾನದಲ್ಲಿ ಮುಕ್ತವಾಗಿ ಓಡಾಡುತ್ತಿದ್ದಾರೆ ಹಾಗೂ ಅವರಿಗೆ ಪಾಕಿಸ್ತಾನಿ ಸೇನೆಯ ರಕ್ಷಣೆಯಿದೆ ಎಂದು ಭಾವಿಸಲಾಗಿದೆ.
‘‘ಪತ್ರಿಕೆಗಳು ತಮ್ಮ ಕೆಲಸವನ್ನು ಹೇಗೆ ಮಾಡಬೇಕು ಎಂಬುದಾಗಿ ಭಾಷಣ ಮಾಡಲು ನಾಗರಿಕ ಮತ್ತು ಸೇನಾ ನಾಯಕತ್ವ ಒಟ್ಟು ಸೇರಿರುವುದು ಆತಂಕಕಾರಿಯಾಗಿದೆ’’ ಎಂದು ಪತ್ರಿಕೆ ಹೇಳಿದೆ.







