ಇನ್ನೊಂದು ಸ್ವಾತಂತ್ರ ಜನಮತಗಣನೆಗೆ ಸ್ಕಾಟ್‌ಲ್ಯಾಂಡ್ ಒಲವು

ಲಂಡನ್, ಅ. 13: ನೂತನ ಸ್ವಾತಂತ್ರ ಜನಮತಗಣನೆಯೊಂದಕ್ಕೆ ಅವಕಾಶ ನೀಡುವ ಮಸೂದೆಯೊಂದನ್ನು ಮುಂದಿನ ವಾರ ಪ್ರಕಟಿಸುವುದಾಗಿ ಸ್ಕಾಟ್‌ಲ್ಯಾಂಡ್‌ನ ನಾಯಕಿ ನಿಕೋಲಾ ಸ್ಟರ್ಜನ್ ಹೇಳಿದ್ದಾರೆ. ಬ್ರಿಟನ್‌ನಿಂದ ಸ್ಕಾಟ್‌ಲ್ಯಾಂಡ್ ಹೊರಬರಬೇಕೆ ಎನ್ನುವುದನ್ನು ನಿರ್ಧರಿಸುವ ನೂತನ ಜನಮತಗಣನೆಗೆ ಇದು ಮೊದಲ ಹೆಜ್ಜೆಯಾಗಲಿದೆ.
ಬ್ರಿಟನ್‌ನಿಂದ ಸ್ವತಂತ್ರಗೊಳ್ಳುವುದನ್ನು ಸ್ಕಾಟ್‌ಲ್ಯಾಂಡ್‌ನ ಮತದಾರರು 2014ರಲ್ಲಿ ತಿರಸ್ಕರಿಸಿದ್ದರು. ಆದರೆ, ಜೂನ್ 23ರಂದು ನಡೆದ ಜನಮತಗಣನೆಯಲ್ಲಿ, ಐರೋಪ್ಯ ಒಕ್ಕೂಟದಿಂದ ಹೊರಬರುವ ಪರವಾಗಿ ಬ್ರಿಟನ್ ಮತ ಹಾಕಿದ ಬಳಿಕ ಪರಿಸ್ಥಿತಿ ಬದಲಾಗಿದೆ.
ಬ್ರಿಟನ್ ಐರೋಪ್ಯ ಒಕ್ಕೂಟದಲ್ಲೇ ಉಳಿಯುವ ಪರವಾಗಿ ಸ್ಕಾಟ್‌ಲ್ಯಾಂಡಿಗರು ಭಾರೀ ಬಹುಮತದಿಂದ ಮತ ಹಾಕಿದ್ದರು. ಆದರೆ, ಇಂಗ್ಲೆಂಡಿಗರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಒಕ್ಕೂಟದಿಂದ ಹೊರಬರುವ ಪರವಾಗಿ ಮತ ಚಲಾಯಿಸಿದ್ದರು.
‘‘ಐರೋಪ್ಯ ಒಕ್ಕೂಟದ ಬೃಹತ್ ಏಕ ಮಾರುಕಟ್ಟೆಯಿಂದ ಬ್ರಿಟನ್ ಹೊರಬಂದರೆ, ತನಗೆ ಅದರಲ್ಲೇ ಉಳಿಯುವ ಇಚ್ಛೆ ಇದೆಯೇ ಎಂಬುದನ್ನು ನಿರ್ಧರಿಸುವ ಹಕ್ಕು ಸ್ಕಾಟ್‌ಲ್ಯಾಂಡ್‌ಗಿದೆ’’ ಎಂದು ನಿಕೋಲಾ ಹೇಳಿದ್ದಾರೆ.





