ಮಠಕ್ಕೆ ಮುತ್ತಿಗೆ ಹಾಕಿದರೆ ಉಪವಾಸ ವ್ರತ: ಪೇಜಾವರ ಶ್ರೀ
ಮಠ ವಿರುದ್ಧ ಹೇಳಿಕೆಗೆ ಪೇಜಾವರ ಶ್ರೀಗಳ ಆಕ್ಷೇಪ

ಉಡುಪಿ, ಅ.13: ಗೋರಕ್ಷಣೆಯ ಹೆಸರಿನಲ್ಲಿ ನಡೆಯುತ್ತಿರುವ ಹಿಂಸೆಯನ್ನು ಖಂಡಿಸಿ ನಡೆಸಿದ ‘ಚಲೋ ಉಡುಪಿ’ ಕಾರ್ಯಕ್ರಮಕ್ಕೂ ಏನು ಸಂಬಂದ ?. ಕಾರ್ಯಕ್ರಮದಲ್ಲಿ ಉಡುಪಿ ಶ್ರೀಕೃಷ್ಣ ಮಠಕ್ಕೆ ಮುತ್ತಿಗೆ ಹಾಕುವ ಹಾಗೂ ನನ್ನ ವಿರುದ್ಧ ಕೇಳಿಬಂದ ಹೇಳಿಕೆಗಳಿಂದ ನನ್ನ ಮನಸ್ಸಿಗೆ ತುಂಬಾ ನೋವಾಗಿದೆ ಎಂದು ಪರ್ಯಾಯ ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಶ್ರೀಕೃಷ್ಣ ಮಠದಲ್ಲಿ ಇಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಅವರು ಗೋರಕ್ಷಣೆಯ ಹೆಸರಿನಲ್ಲಿರುವ ನಡೆಯುತ್ತಿರುವ ಹಿಂಸೆಯನ್ನು ನಾನು ಖಂಡಿಸಿದ್ದೇನೆ. ಆದರೆ ಅದಕ್ಕೂ ಮಠದಲ್ಲಿ ನಡೆಯುತ್ತಿದೆ ಎನ್ನುತ್ತಿರುವ ಪಂಕ್ತಿಬೇಧಕ್ಕೂ ಏನು ಸಂಬಂಧ. ಮಠದಿಂದ ದಲಿತರಿಗೆ ಯಾವುದೇ ಅನ್ಯಾಯವಾಗಿಲ್ಲ. ಇಲ್ಲಿ ದಲಿತರು ಹಾಗೂ ಹಿಂದುಳಿದವರ ವಿರುದ್ಧ ಯಾವುದೇ ತಾರತಮ್ಯ ನಡೆಯುತ್ತಿಲ್ಲ ಎಂದವರು ನುಡಿದರು.
ಉಡುಪಿಯಲ್ಲಿ ಅ.9ರಂದು ನಡೆದ ಚಲೋ ಉಡುಪಿಗೆ ಪ್ರತಿಯಾಗಿ ಕೆಲವರು ಅ.23ರಂದು ಕೆಲವರು ಉಡುಪಿಯಲ್ಲಿ ಸ್ವಚ್ಛತಾ ಆಂದೋಲನ ನಡೆಸುವ ಪ್ರಕಟಣೆ ಹೊರಡಿಸಿದ್ದಾರೆ. ಅದೇ ದಿನ ಕೆಲವರು ಮಠಕ್ಕೆ ಮುತ್ತಿಗೆ ಹಾಕಲು ಸಿದ್ಧತೆ ನಡೆಸಿದ್ದಾರೆ ಎಂಬ ಮಾಹಿತಿಗಳೂ ನಮಗೆ ಸಿಕ್ಕಿವೆ ಎಂದು ಸ್ವಾಮೀಜಿ ಹೇಳಿದರು.
ಒಂದು ವೇಳೆ 23ರಂದು ಮಠಕ್ಕೆ ಮುತ್ತಿಗೆ ಹಾಕಿದರೆ ತಾವು ಅಂದು ಉಪವಾಸ ವ್ರತ ನಡೆಸುವುದಾಗಿ ಸ್ವಾಮೀಜಿ ನುಡಿದರು.ದಲಿತರು ಹಾಗೂ ಇತರರು ಮಠಕ್ಕೆ ಮುತ್ತಿಗೆ ಹಾಕಿದರೆ ಇಲ್ಲಿನ ಸೌಹಾರ್ದ ವಾತಾವರಣ ಕಲುಷಿತಗೊಳ್ಳಬಹುದು ಎಂದು ಹೇಳಿದ ಸ್ವಾಮೀಜಿ, ಇಂಥ ಸಂದರ್ಭದಲ್ಲಿ ಮಠಕ್ಕೆ ರಕ್ಷಣೆ ನೀಡುವುದು ಸರಕಾರದ ಜವಾಬ್ದಾರಿಯಾಗುತ್ತದೆ ಎಂದರು.
ಚಲೋ ಉಡುಪಿ ಜಾಥಾದ ಸಂದರ್ಭದಲ್ಲಿ ಅನಗತ್ಯವಾಗಿ ಕೃಷ್ಣ ಮಠ ಮತ್ತು ನನ್ನ ಹೆಸರನ್ನು ಎಳೆದು ತಂದು ಶ್ರೀಕೃಷ್ಣ ಮಠಕ್ಕೆ ಮುತ್ತಿಗೆ ಹಾಕುವ ಬೆದರಿಕೆ ಹಾಗೂ ನನ್ನನ್ನು ಕೆಟ್ಟದ್ದಾಗಿ ನಿಂದಿಸಿ ಭಾಷಣ ಮಾಡಿರುವುದು ನನ್ನ ಮನಸ್ಸಿಗೆ ತುಂಬಾ ನೋವಾಗಿದೆ. ಪ್ರವೀಣ ಪೂಜಾರಿ ಹತ್ಯೆಯನ್ನು ನಾನು ಬಲವಾಗಿ ಖಂಡಿಸಿದ್ದೇನೆ. ಅದೇ ರೀತಿ ಮೂಡುಬಿದ್ರೆಯ ಹತ್ಯೆಯನ್ನೂ ಖಂಡಿಸುತ್ತೇನೆ ಎಂದರು.
ಈ ಎರಡು ಹತ್ಯೆಗಳನ್ನು ಖಂಡಿಸುವ ನಾನು ಈ ಎಲ್ಲಾ ಬುದ್ಧಿಜೀವಿಗಳು ಹಾಗೂ ರಾಜಕಾರಣಿಗಳಿಗಿಂತ ಹೆಚ್ಚಿನ ಜಾತ್ಯತೀತನಾಗಿದ್ದೇನೆ. ಹಿಂದು- ಮುಸ್ಲಿಂ ಇಬ್ಬರನ್ನೂ ಸರಕಾರ ಸಮಾನವಾಗಿ ನೋಡಬೇಕೆಂದು ನಾನು ಪ್ರತಿಪಾದಿಸುತ್ತೇನೆ ಎಂದರು.
ದಲಿತರು ಹಾಗೂ ಮುಸ್ಲಿಂ ಇಬ್ಬರಿಗೂ ನನ್ನ ಬಗ್ಗೆ ವಿಶೇಷ ಪರೀತಿ ಅಭಿಮಾನವಿದೆ. ಕಾಸರಗೋಡು, ಮಂಗಳೂರುಗಳಲ್ಲಿ ಮುಸ್ಲಿಂ ಸಮಾವೇಶಗಳಿಗೆ ನನ್ನನ್ನು ಆಹ್ವಾನಿಸುತ್ತಾರೆ. ಈ ಪರ್ಯಾಯಾವಧಿಯಲ್ಲೂ ಮುಸ್ಲಿಂ ಮತ್ತು ಕ್ರೈಸ್ತರು ಹೆಚ್ಚಿನ ಅಭಿಮಾನ ತೋರಿಸುತಿದ್ದಾರೆ. ಇವರಿಗೆ ನನ್ನ ಬಗ್ಗೆ ಇರುವ ಆದರ ಅಭಿಮಾನಗಳನ್ನು ಸಹಿಸಲಾಗದೇ ಈ ಹಿಂದೂ ವಿರೋಧಿ ಬುದ್ಧಿಜೀವಿಗಳು ದಲಿತರನ್ನೂ, ಮುಸ್ಲಿಂರನ್ನೂ ನನ್ನಿಂದ ದೂರ ಮಾಡುವ ಪ್ರಯತ್ನ ನಡೆಸುತಿದ್ದಾರೆ ಎಂದು ಪೇಜಾವರ ಶ್ರೀಗಳು ಆರೋಪಿಸಿದರು. ಆದರೆ ಅವರ ಈ ಪ್ರಯತ್ನ ಯಾವ ರೀತಿಯಲ್ಲೂ ಸಫಲವಾಗುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಹಪಂಕ್ತಿ ಭೋಜನ:
ಶ್ರೀಕೃಷ್ಣ ಮಠದಲ್ಲಿ ಪ್ರತಿದಿನ ಸಹಸ್ರ ಸಹಸ್ರ ಜನರಿಗೆ ಸಹ ಪಂಕ್ತಿ ಭೋಜನ ನಡೆಯುತ್ತಿದೆ. ದಲಿತರೂ, ಹಿಂದುಳಿದವರು, ಮೇಲ್ಜಾತಿಯವರು ಎಲ್ಲರೂ ಸಂಕೋಚವಿಲ್ಲದೇ ಇದರಲ್ಲಿ ಭಾಗವಹಿಸುತಿದ್ದಾರೆ. ಮೊನ್ನಿನ ಜಾಥಾದಲ್ಲಿ ಭಾಗವಹಿಸಿದ ನೂರಾರು ಮಂದಿಯೂ ಇಲ್ಲಿಗೆ ಆಗಮಿಸಿ ಊಟ ಮಾಡಿ ತೆರಳಿದ್ದಾರೆ. ಆಹಾರ ನಿಯಮದಿಂದಾಗಿ ಸಂಪ್ರದಾಯಸ್ಥ ಬ್ರಾಹ್ಮಣರಿಗೆ ಮಾತ್ರ ಅವರ ಅಪೇಕ್ಷೆಯಂತೆ ಪ್ರತ್ಯೇಕ ಬೋಜನ ವ್ಯವಸ್ಥೆ ಇದೆ. ಈ ವ್ಯವಸ್ಥೆ ಇಲ್ಲಿ ಮಾತ್ರವಲ್ಲ ಧರ್ಮಸ್ಥಳ, ಸುಬ್ರಹ್ಮಣ್ಯ, ಶೃಂಗೇರಿ ಮುಂತಾದ ಕಡೆಗಳಲ್ಲೂ ಇದೆ ರೀತಿ ಪ್ರತ್ಯೇಕ ವ್ಯವಸ್ಥೆ ಇದೆ. ಇದನ್ಯಾಕೆ ಬುದ್ಧಿಜೀವಿಗಳು ಪ್ರಶ್ನಿಸೊಲ್ಲ ಎಂದವರು ಖಾರವಾಗಿ ಪ್ರಶ್ನಿಸಿದರು.
ಅಸ್ಪಶ್ಯತೆಯನ್ನು ವಿರೋಧಿಸಿದ, ಅದರ ವಿರುದ್ಧ ಮಾತನಾಡಿದ ಪ್ರಥಮ ಬ್ರಾಹ್ಮಣ ಪೀಠಾಧಿಪತಿ ನಾನು. 1975ರಲ್ಲೇ ನಾನು ಅಸ್ಪಶ್ಯತೆ ವಿರುದ್ಧ ಹೋರಾಟ ನಡೆಸಿದ್ದೆ. ದಲಿತರ ಕೇರಿಗಳಿಗೆ ಮೊದಲ ಬಾರಿ ತೆರಳಿದ್ದೆ. ಯಾವುದೇ ಬ್ರಾಹ್ಮಣ ಅಥವಾ ಉಳಿದ ಸ್ವಾಮೀಜಿ ಇದನ್ನು ಮಾಡಿಲ್ಲ. ಇದಕ್ಕೂ ನನ್ನನ್ನು ಟೀಕಿಸುವುದು ಯಾವ ನ್ಯಾಯ ಎಂದರು.
ಕೋಮು ಸೌಹಾರ್ದದ ನೆಪದಲ್ಲಿ ಹಿಂದೂ ಧರ್ಮದ ಟೀಕೆ ನಡೆಯುತ್ತಿದೆ. ಎಲ್ಲದಕ್ಕೂ ಬ್ರಾಹ್ಮಣರು ಕಾರಣವೆಂಬಂತೆ ಬಿಂಬಿಸಲಾಗುತ್ತಿದೆ. ಬ್ರಾಹ್ಮಣ ಮತ್ತು ಅಬ್ರಾಹ್ಮಣರನ್ನು ಪರಸ್ಪರರ ವಿರುದ್ಧ ಎತ್ತಿ ಕಟ್ಟಲಾಗುತ್ತಿದೆ. ದ್ವೇಷವನ್ನು ಹಬ್ಬಿಸಲಾಗುತ್ತಿದೆ ಎಂದವರು ಪ್ರಗತಿಪರರನ್ನು ಕಟುವಾಗಿ ಟೀಕಿಸಿದರು.
ಬಸವಣ್ಣ ಹೊರತಲ್ಲ: ಪ್ರಗತಿಪರರು ಸದಾ ಪ್ರಸ್ತಾಪಿಸುವ ಬಸವಣ್ಣನವರು ಸಹ ಲಿಂಗ ದೀಕ್ಷೆಯನ್ನು ಪಡೆಯದವರ ಜೊತೆಗೆ ಬೋಜನವನ್ನು ಸ್ವೀಕರಿಸಿದರೆ ನಾಯಿ ಜನ್ಮ ಪ್ರಾಪ್ತಿಯಾಗುವುದು ಎಂದಿದ್ದರು. ಇದು ಸಹ ಭೋಜನವನ್ನವರು ನಿಷೇಧಿಸಿದ್ದಲ್ಲವೇ. ಇದಕ್ಕೆ ಅವರ ಸ್ಪಷ್ಟವಾದ ವಚನಗಳನ್ನು ನಾನು ಉದಾಹರಿಸಬಲ್ಲೆ. ಭಕ್ತಿಯ ನೆಲೆಯಲ್ಲಿ ಸಮಾನತೆಯನ್ನು ಬೋಧಿಸಿದ ಬಸವಣ್ಣ ರನ್ನು ನಿಂದಿಸಲು ಈ ಬುದ್ದಿಜೀವಿಗಳು ಸಿದ್ಧರಿದ್ದಾರಾ ಎಂದು ಕೇಳಿದರು.
ಜಾತಿ ವ್ಯವಸ್ಥೆ, ಅಸ್ಪಶ್ಯತೆಗಳು ಬ್ರಾಹ್ಮಣರು ಉತ್ತರ ದೇಶದಿಂದ ದಕ್ಷಿಣಕ್ಕೆ ಬರುವ ಮೊದಲೇ ಇತ್ತು ಎಂಬುದನ್ನು ನಾನು ಸಮರ್ಥಿಸಿ ತೋರಿಸಬಲ್ಲೆ. ಇಲ್ಲಿಯ ಆದಿ ದ್ರಾವಿಡರು ಹಾಗೂ ಆದಿ ಕರ್ನಾಟಕರೆನಿಸಿದ ದಲಿತರನ್ನು ತುಳಿದವರು ಯಾರು. ಅವರನ್ನು ಗುಲಾಮರನ್ನಾಗಿ ಮಾಡಿಕೊಂಡವರು ಯಾರು ಎಂಬುದನ್ನು ಬುದ್ಧಿಜೀವಿಗಳು ಅರ್ಥ ಮಾಡಿಕೊಳ್ಳಲಿ ಎಂದು ಸವಾಲು ಹಾಕಿದರು.
ಜಾತಿ ದ್ವೇಷವನ್ನು ಬೆಳೆಸುವ ಬುದ್ಧಿಜೀವಿಗಳ ಪ್ರಯತ್ನವನ್ನು ತಾವು ಖಂಡಿಸುವುದಾಗಿ ಹೇಳಿದ ಸ್ವಾಮೀಜಿ, ಒಂದು ಕಡೆ ಹಿಂದು-ಮುಸ್ಲಿಂ ನಡುವೆ ಸೌಹಾರ್ದತೆ ಬೆಳೆಯಬೇಕೆಂದು ಹೇಳುವ ಇವರು ಹಿಂದೂಗಳಲ್ಲಿಯೇ ಬ್ರಾಹ್ಮಣ ಮತ್ತು ಬ್ರಾಹ್ಮಣೇತರರಲ್ಲಿ ದ್ವೇಷವನ್ನು ಹುಟ್ಟಿಸುವುದು ಸರಿಯೇ ಎಂದು ಪ್ರಶ್ನಿಸಿದರು.
ನಾನು ಬ್ರಾಹ್ಮಣರಿಂದಾರಂಭಿಸಿ ದಲಿತರವರೆಗೆ ಎಲ್ಲಾ ಹಿಂದುಗಳನ್ನೂ ಪ್ರೀತಿಸುತ್ತೇನೆ. ಹಿಂದು, ಮುಸ್ಲಿಂ, ಕ್ರೈಸ್ತ ಎಲ್ಲರನ್ನೂ ಪ್ರೀತಿಸುತ್ತೆನೆ. ಮಧ್ವ, ಶಂಕರ, ರಾಮಾನುಜ, ಬುದ್ಧ, ಬಸವ, ಗಾಂಧಿ ತೋರಿದ ಹಾದಿಯಲ್ಲೇ ನಡೆಯುತ್ತಿರುವ ನನ್ನ ಮೆದುಳು ಸ್ವಚ್ಛವಾಗಿದೆ. ಆದರೆ ನನ್ನನ್ನು ದೂಷಿಸುವ ಬುದ್ಧಿಜೀವಿಗಳು ಆತ್ಮನಿರೀಕ್ಷಣೆ ಮಾಡಿಕೊಳ್ಳಲಿ ಎಂದು ಸವಾಲು ಹಾಕಿದರು.
ದಲಿತರು ಮತ್ತು ಬ್ರಾಹ್ಮಣರು ಒಂದಾದರೆ ಹಿಂದು ಧರ್ಮಕ್ಕೆ ಒಳ್ಳೆಯದಾಗುತ್ತದೆ. ಆದರೆ ಹಿಂದು ಧರ್ಮದ ಮೇಲಿನ ದ್ವೇಷದಿಂದ ಈ ಬುದ್ಧಿಜೀವಿಗಳು ದಲಿತರು, ಹಿಂದುಳಿದವರು ಬೇರೆ ಧರ್ಮಗಳಿಗೆ ಮತಾಂತರವಾಗಬೇಕೆಂಬ ಉದ್ದೇಶದಿಂದ ಹಿಂದು ಧರ್ಮದ ಬಗ್ಗೆ ಅವರಲ್ಲಿ ದ್ವೇಷ ಹುಟ್ಟಿಸುತಿದ್ದಾರೆ.
ಶ್ರೀವಿಶ್ವೇಶತೀರ್ಥ ಸ್ವಾಮೀಜಿ







