ಸಾಗರ: ಅಂಬೇಡ್ಕರ್ ಪ್ರತಿಮೆಗೆ ಅವಮಾನ ಖಂಡಿಸಿ ಪ್ರತಿಭಟನೆ
.jpg)
ಸಾಗರ, ಅ.13: ಭದ್ರಾವತಿ ಪಟ್ಟಣದ ಬಿ.ಎಚ್.ರಸ್ತೆಯಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ಅವಮಾನ ಮಾಡಿರುವುದನ್ನು ಖಂಡಿಸಿ, ತಪ್ಪಿತಸ್ಥರ ವಿರುದ್ಧ ಕಠಿಣಕ್ರಮಕ್ಕೆ ಒತ್ತಾಯಿಸಿ ಗುರುವಾರ ದಲಿತ ಸಂಘರ್ಷ ಸಮಿತಿ (ಪ್ರೊ. ಬಿ.ಕೃಷ್ಣಪ್ಪ ಸ್ಥಾಪಿತ) ವತಿಯಿಂದ ಪ್ರತಿಭಟನೆ ನಡೆಸಿ ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಸಮಿತಿಯ ರಾಜ್ಯ ವಿಭಾಗೀಯ ಸಂಚಾಲಕ ರಾಜೇಂದ್ರ ಬಂದಗದ್ದೆ, ಡಾ. ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿರುವ ಪ್ರತಿಮೆಗೆ ಹಾಕಿದ್ದ ಹೂವಿನಹಾರವನ್ನು ಕಿತ್ತೆಸೆದು ಚಪ್ಪಲಿ ಹಾರ ಹಾಕಿ ಅವಮಾನಗೊಳಿಸಲಾಗಿದೆ. ಇದು ದೇಶದ ಸಮಸ್ತ ದಲಿತ ಸಮೂಹಕ್ಕೆ ಮಾಡಿದ ಅವಮಾನವಾಗಿದೆ. ಇದನ್ನು ದಲಿತ ಸಂಘರ್ಷ ಸಮಿತಿ ತೀವ್ರವಾಗಿ ಖಂಡಿಸುತ್ತಿದೆ ಎಂದರು. ಸರಕಾರ ಅಂಬೇಡ್ಕರ್ ಪ್ರತಿಮೆಗೆ ಅವಮಾನ ಮಾಡಿದ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು. ತಪ್ಪಿತಸ್ಥರನ್ನು ತಕ್ಷಣ ಬಂಧಿಸಿ ಅವರ ವಿರುದ್ಧ ಕಾನೂನುಕ್ರಮ ಜರಗಿಸಬೇಕು. ಜೊತೆಗೆ ಸಾಗರ ನಗರಸಭೆ ಎದುರಿನಲ್ಲಿ ಪ್ರತಿಷ್ಠಾಪಿಸಿರುವ ಅಂಬೇಡ್ಕರ್ ಪ್ರತಿಮೆ ಇರುವ ಸುತ್ತಮುತ್ತಲಿನ ಪ್ರದೇಶಕ್ಕೆ ಸಿ.ಸಿ.ಕ್ಯಾಮರಾ ಅಳವಡಿಸಬೇಕು. ಇಲ್ಲಿ ದಲಿತ ಸಂಘರ್ಷ ಸಮಿತಿಗಳು ಪ್ರತಿಭಟನೆ ನಡೆಸಲು ಅನುಕೂಲವಾಗುವಂತೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯಿಸಿದರು. ಸಮಿತಿಯ ತಾಲೂಕು ಸಂಚಾಲಕ ಎಸ್.ಲಕ್ಷ್ಮಣ ಸಾಗರ್ ಮಾತನಾಡಿ, ದೇಶದಾದ್ಯಂತ ಡಾ. ಬಿ.ಆರ್.ಅಂಬೇಡ್ಕರ್ ಅವರ 125ನೆ ಜನ್ಮದಿನಾಚರಣೆಯನ್ನು ಆಚರಿಸುತ್ತಿದ್ದೇವೆ. ಇಂತಹ ಸಂದರ್ಭದಲ್ಲಿ ಭದ್ರಾವತಿಯಲ್ಲಿ ಅಂಬೇಡ್ಕರ್ ಪ್ರತಿಮೆಗೆ ಅವಮಾನ ಮಾಡಿರುವುದು ಖಂಡನೀಯ. ಅಡಿಷನಲ್ ಎಸ್ಪಿಯವರು 24 ಗಂಟೆಯೊಳಗೆ ತಪ್ಪಿತಸ್ಥರನ್ನು ಬಂಧಿಸುವುದಾಗಿ ಹೇಳಿದ್ದರೂ, ಈ ತನಕ ಆರೋಪಿಗಳನ್ನು ಬಂಧಿಸಿಲ್ಲ. ತಕ್ಷಣ ಆರೋಪಿಗಳನ್ನು ಬಂಧಿಸಬೇಕು. ಇಲ್ಲವಾದಲ್ಲಿ ಸಮಿತಿ ವತಿಯಿಂದ ರಾಜ್ಯದಾದ್ಯಂತ ಉಗ್ರವಾದ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ದಲಿತ ಸಂಘರ್ಷ ಸಮಿತಿ ನಗರ ಸಂಚಾಲಕ ಧರ್ಮರಾಜ್ ಮಾತನಾಡಿದರು. ಈ ಸಂದರ್ಭದಲ್ಲಿ ಸಮಿತಿಯ ದೇವೇಂದ್ರಪ್ಪ, ಮಹಾದೇವಪ್ಪ, ವೆಂಕಪ್ಪ, ವಿನಾಯಕ, ಸೋಮರಾಜ ಬೆಳಲಮಕ್ಕಿ, ನಾಗರಾಜಸ್ವಾಮಿ, ಮಂಜುನಾಥ ಬೆಳಲಮಕ್ಕಿ, ಗುತ್ಯಪ್ಪ ಕಾನ್ಲೆ, ರಾಘವೇಂದ್ರ ಆವಿನಹಳ್ಳಿ, ರವೀಂದ್ರ ಕಾನ್ಲೆ, ರಮೇಶ್ ಶುಂಠಿಕೊಪ್ಪ, ಬಸವರಾಜ್, ನಾಗರಾಜ ಕಾನ್ಲೆಪುರ, ದೇವರಾಜ ಹೊಸಂತೆ, ಅಂಬಯ್ಯ ಕಾರ್ಗಲ್, ಮಂಜುನಾಥ್ ಜೋಗ್ ಇನ್ನಿತರರು ಹಾಜರಿದ್ದರು.





