ಹಣ ಮಂಜೂರಿಗೆ ಒತ್ತಾಯಿಸಿ ಧರಣಿ
ಕೆರೆಗಳಿಗೆ ನೀರು ತುಂಬಿಸುವ ಯೋಜನೆ

ಸೊರಬ, ಅ.13: ತಾಲೂಕಿನ ಮೂಗೂರು ಗ್ರಾಮದ ಸಮೀಪದ ವರದಾ ನದಿಯಿಂದ ಕೂಬಟೂರು ದೊಡ್ಡಕೆರೆ ಹಾಗೂ ಸಂಬಂಧಿಸಿದ 14 ಗ್ರಾಮಗಳ 87 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಹಣ ಮಂಜೂರಾತಿ ಮಾಡುವಂತೆ ಒತ್ತಾಯಿಸಿ ಆನವಟ್ಟಿ ಹೋಬಳಿ ರೈತರು ಗುರುವಾರ ಪಟ್ಟಣದಲ್ಲಿ ಧರಣಿ ನಡೆಸಿ ತಹಶೀಲ್ದಾರ್ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು.
ತಾಲೂಕಿನಲ್ಲಿ ತೀವ್ರ ಬರಗಾಲ ಎದುರಾಗಿದ್ದು, ಕುಡಿಯುವ ನೀರಿಗೆ ಹಾಗೂ ಬೆಳೆಗಳಿಗೆ ನೀರಿನ ಸಮಸ್ಯೆ ಎದುರಾಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ನನೆಗುದಿಯಲ್ಲಿರುವ ಮೂಗೂರು ಏತ ನೀರಾವರಿ ಯೋಜನೆ ಅನುಷ್ಠಾನ ಮಾಡಬೇಕು. ಈಯೋಜನೆಯಡಿಯಲ್ಲಿ ಸಂಬಂಧಿಸಿದ 14 ಗ್ರಾಮಗಳ 87 ಕೆರೆಗಳಿಗೆ ನೀರು ತುಂಬಿಸುವ ಮಹತ್ವದ ಯೋಜನೆಗೆ 1991ರಲ್ಲಿ ಅಂದಾಜು ವೆಚ್ಚ 8.62 ಕೋಟಿ ರೂ. ಸರಕಾರದಿಂದ ಅನುಮೋದನೆ ನೀಡಲಾಗಿದ್ದರೂ ವಿವಿಧ ಕಾರಣಗಳಿಂದ ಯೋಜನೆ ಸ್ಥಗಿತಗೊಂಡಿದೆ. ವರ್ಷದಿಂದ ವರ್ಷಕ್ಕೆ ನೀರಿನ ಸಮಸ್ಯೆ ಉಲ್ಬಣಗೊಂಡ ಹಿನ್ನೆಲೆಯಲ್ಲಿ ಈ ಭಾಗದ ರೈತರು 2001ರಲ್ಲಿ 18ಕೋಟಿ ರೂ. ಪರಿಷ್ಕೃತ ಅಂದಾಜು ಮೊತ್ತದಲ್ಲಿ ಯೋಜನೆಯನ್ನು ಪುನಃ ಪ್ರಾರಂಭಿಸುವುದಕ್ಕೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ ಇದುವರೆಗೂ ಸರಕಾರ ಯೋಜನೆಗೆ ಚಾಲನೆ ನೀಡದಿರುವುದು ರೈತರ ಮೇಲೆ ಮರಣ ಶಾಸನ ಬರೆದಂತಾಗಿದೆ ಎಂದು ಧರಣಿ ನಿರತ ರೈತರು ಆಕ್ರೋಶ ವ್ಯಕ್ತಪಡಿಸಿದರು.
ಸರಕಾರದ ತಟಸ್ಥ ನೀತಿಯಿಂದ ಈ ಯೋಜನೆಗೆ ಇಂದು ತಗಲುವ ವೆಚ್ಚ ಸುಮಾರು 50ಕೋಟಿಯಾಗಲಿದೆ. ಕಳೆದ 4ವರ್ಷಗಳಿಂದ ಬರಗಾಲ ಎದುರಾಗಿದ್ದು, ಸರಕಾರ ಸಮಸ್ಯೆ ಮನಗಂಡು ಯೋಜನೆಗೆ ಮರು ಚಾಲನೆ ನೀಡಿದರೆ ಜನ, ಜಾನುವಾರುಗಳು ಸೇರಿದಂತೆ ಸುಮಾರು 5,500 ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯವನ್ನು ಕಲ್ಪಿಸಬಹುದಾಗಿದೆ. ಕೂಡಲೇ ವರದಾ ನದಿಗೆ ಬ್ಯಾರೇಜ್ ನಿರ್ಮಾಣದ ಯೋಜನೆಯನ್ನು ಪ್ರಸ್ತುತ ಸರಕಾರದ ಬಜೆಟ್‌ನಲ್ಲಿ ಸೇರಿಸಿ ರೈತರ ಹಿತ ದೃಷ್ಟಿಯಿಂದ ಯೋಜನೆ ಪ್ರಾರಂಭಿಸುವಂತೆ ಒತ್ತಾಯಿಸಿದರು.
ಧರಣಿಯಲ್ಲ್ಲಿ ರುದ್ರಗೌಡ ಮಲ್ಲಾಪುರ, ಮಂಜಣ್ಣ ನೇರಲಗಿ, ಬಸವರಾಜಪ್ಪ ಮಲ್ಲಾಪುರ, ಚೌಟಿ ಚಂದ್ರಶೇಖರ ಗೌಡ, ಉಮೇಶ್ ಉಡುಗಣಿ, ಶಿವಪ್ಪವಕೀಲ ಸೇರಿದಂತೆ ಆನವಟ್ಟಿ ಹೋಬಳಿಯ ಕುಬಟೂರು, ಹೊಸಳ್ಳಿ, ಸಮನವಳ್ಳಿ, ನೇರಲಿಗಿ, ಮಲ್ಲಾಪುರ, ವಿಠ್ಠಲಪುರ, ಲಕ್ಕವಳ್ಳಿ, ಮೂಗೂರು, ವೆಂಕಟಪುರ, ದ್ವಾರಹಳ್ಳಿ, ಅಗಸನಹಳ್ಳಿ, ತೊರವಂದ, ನೆಲ್ಲಿಕೊಪ್ಪ, ಮೂಡಿ, ದೊಡ್ಡಿಕೊಪ್ಪ, ಕೋಡಿಹಳ್ಳಿ, ಕೋಟೆಕೊಪ್ಪ, ಬೆನ್ನೂರು, ಕೋಟಿಪುರ ಗ್ರಾಮಗಳ ನೊಂದ ನೂರಾರು ರೈತರು ಪಾಲ್ಗೊಂಡಿದ್ದರು.







