ಯುವ ಸಮೂಹ ಮಾನಸಿಕ, ದೈಹಿಕ ದೃಢತೆ ಕಾಯ್ದುಕೊಳ್ಳಿ: ನಗರಸಭಾಧ್ಯಕ್ಷೆ ಉಷಾ ಎನ್.
ಸನ್ಮಾನ ಸಮಾರಂಭ
.jpg)
ಸಾಗರ, ಅ.13: ಯುವಜನರು ಮಾನಸಿಕ ಹಾಗೂ ದೈಹಿಕ ದೃಢತೆಯನ್ನು ಕಾಯ್ದುಕೊಳ್ಳಲು ಜಿಮ್‌ಗಳು ಸಹಕಾರಿಯಾಗುತ್ತದೆ ಎಂದು ನಗರಸಭಾಧ್ಯಕ್ಷೆ ಉಷಾ ಎನ್. ತಿಳಿಸಿದರು.
ಇಲ್ಲಿನ ಸಾಗರ ವ್ಯಾಯಾಮ ಶಾಲೆಯಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅವರು ಸನ್ಮಾನ ಸ್ವೀಕರಿಸಿ ಮಾತನಾಡುತ್ತಾ, ಯುವ ಸಮೂಹ ಆರೋಗ್ಯಪೂರ್ಣ ಸಮಾಜದ ಪ್ರತಿನಿಧಿಗಳು ಎಂದರು. ಸಾಗರ ವ್ಯಾಯಾಮ ಶಾಲೆ ದೇಹದಾರ್ಢ್ಯ ಚಟುವಟಿಕೆಗೆ ಸಂಬಂಧಪಟ್ಟಂತೆ ಯುವಜನರಿಗೆ ತರಬೇತಿಯನ್ನು ನೀಡುತ್ತಾ ಬರುತ್ತಿದೆ. ಇದರಿಂದ ಯುವಕರು ಬೇರೆ ಹವ್ಯಾಸಗಳತ್ತ ಹೋಗದೆ ತಮ್ಮ ಮನಸ್ಸನ್ನು ಕೇಂದ್ರೀಕರಿಸಿಕೊಂಡು ಸದ್ವಿಚಾರಗಳತ್ತ ಸಾಗಲು ಅನುಕೂಲವಾಗಿದೆ ಎಂದರು. ವ್ಯಾಯಾಮಶಾಲೆಯ ಅಭಿವೃದ್ಧಿಗೆ ನಗರಸಭೆ ಹಿಂದಿ ನಿಂದಲೂ ಎಲ್ಲ ರೀತಿಯ ಸಹಕಾರ ವನ್ನು ನೀಡುತ್ತಾ ಬರುತ್ತಿದೆ. ಮುಂದೆ ಸಹ ಅಗತ್ಯ ಸೌಲಭ್ಯಗಳನ್ನು ಹಂತಹಂತವಾಗಿ ನೀಡಲಾಗುತ್ತದೆ. ಹೆಚ್ಚುಹೆಚ್ಚು ಯುವಕರನ್ನು ಜಿಮ್‌ನಲ್ಲಿ ತರಬೇತಿಗೊಳಿಸುವ ನಿಟ್ಟಿನಲ್ಲಿ ಸಂಸ್ಥೆಯವರು ನಿಗಾವಹಿಸಬೇಕು ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವ್ಯಾಯಾಮಶಾಲೆಯ ಅಧ್ಯಕ್ಷ ವಿ.ಕೆ.ವಿಜಯಕುಮಾರ್ ಮಾತನಾಡಿ, ವ್ಯಾಯಾಮಶಾಲೆಗೆ ಹೆಚ್ಚಿನ ವಿದ್ಯಾರ್ಥಿಗಳು ಬರುತ್ತಿದ್ದು, ಹಾಲಿ ಇರುವ ಕಟ್ಟಡವನ್ನು ವಿಸ್ತರಿಸುವ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ನಗರಸಭೆ ವತಿಯಿಂದ ಅಗತ್ಯ ಸಹಕಾರ ನೀಡಬೇಕು ಎಂದು ಕೋರಿದರು. ಈ ಸಂದರ್ಭದಲ್ಲಿ ನಗರಸಭೆ ಉಪಾಧ್ಯಕ್ಷೆ ಮರಿಯಾ ಲೀಮಾ, ಸ್ಥಾಯಿ ಸಮಿತಿ ಅಧ್ಯಕ್ಷ ಮನ್ಸೂರ್ ಅಲಿ ಖಾನ್ ಅವರನ್ನು ಸನ್ಮಾನಿಸಲಾಯಿತು. ವ್ಯಾಯಾಮ ಶಾಲೆ ಆಡಳಿತ ಮಂಡಳಿಯ ಗೌರವಾಧ್ಯಕ್ಷ ಸುನೀಲ್ ಗಾಯ್‌ತೊಂಡೆ, ಕಾರ್ಯದರ್ಶಿ ರಾಘವೇಂದ್ರ ನಾಯ್ಡು, ಖಜಾಂಚಿ ಎನ್.ಐ.ಗೋಮ್ಸ್ ಮತ್ತಿತರರು ಉಪಸ್ಥಿತರಿದ್ದರು.





