ಅಪಾಯಕ್ಕೆ ಸಿಲುಕಿದ್ದ 33 ಮೀನುಗಾರರ ರಕ್ಷಣೆ
ಬೋಟ್‌ನೊಳಗಡೆ ನುಗ್ಗಿದ ನೀರು
ಕಾರವಾರ, ಅ.13: ಇಲ್ಲಿನ ಆಳ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಬೋಟ್‌ನೊಳಗಡೆ ನೀರು ನುಗ್ಗಿದ ಪರಿಣಾಮ ಅಪಾಯಕ್ಕೆ ಸಿಲುಕಿದ್ದ 33 ಮೀನುಗಾರರನ್ನು ಕರಾವಳಿ ಕಾವಲು ಪಡೆ ಪೊಲೀಸರು ರಕ್ಷಿಸಿದ ಘಟನೆ ವರದಿಯಾಗಿದೆ.
ಜಿಲ್ಲೆಯ ಕಾರವಾರ ಬಂದರಿನಿಂದ ರಾಮೇಶ್ವರ ಕೃಪಾ ಎನ್ನುವ ಬೋಟ್ ಮೂಲಕ ಮೀನುಗಾರಿಕೆಗೆ ತೆರಳಿದ್ದ ಮೀನುಗಾರರು ಬಂದರಿನಿಂದ ಸುಮಾರು 13 ನಾಟಿಕಲ್ ಮೈಲು ದೂರ ತೆರಳಿ ಮೀನುಗಾರಿಕೆ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ಬೋಟ್‌ನೊಳಗಡೆ ನೀರು ನುಗ್ಗಲು ಆರಂಭಿಸಿದ್ದು, ಮೀನುಗಾರರು ಆತಂಕಗೊಂಡು ತಕ್ಷಣ ನೀರು ಹೊರ ಹಾಕಲು ಪ್ರಯತ್ನಿಸಿದರಾದರು ಪ್ರಯೋಜನವಾಗಿರಲಿಲ್ಲ.
ನಂತರ ಕರಾವಳಿ ಕಾವಲು ಪಡೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ತಕ್ಷಣ ಸ್ಪಂದಿಸಿದ ಕರಾವಳಿ ಕಾವಲು ಪಡೆಯವರು ಇನ್‌ಸ್ಪೆಕ್ಟರ್ ಎಸ್.ಎಮ್. ರಾಣೆ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ. ಬೋಟ್ ಮುಳುಗುವ ಹಂತದಲ್ಲಿದ್ದುದರಿಂದ ಮೀನುಗಾರಿಕೆ ವೇಳೆ ಹಿಡಿಯಲಾಗಿದ್ದ ಸುಮಾರು 15 ಟನ್ ಮೀನನ್ನು ನೀರಿಗೆಸೆದು ಬೋಟ್‌ನ್ನು ಮುಳುಗದಂತೆ ರಕ್ಷಿಸಿಕೊಂಡಿದ್ದಾರೆ. ಕಾವಲು ಪಡೆಯ ಸ್ಪೀಡ್ ಬೋಟ್ ಸಹಾಯದಿಂದ ಬೋಟನ್ನು ಮೀನುಗಾರರ ಸಮೇತ ದಡಕ್ಕೆ ತಂದು ರಕ್ಷಣೆ ಮಾಡಿದರು.







