ಅಮೆರಿಕ ಸಂಸ್ಕೃತಿ ಅನುಕರಣೀಯ: ಮಹೇಶ್
ಪ್ರವಾಸ ಅನುಭವ ಕಾರ್ಯಕ್ರಮ

ಚಿಕ್ಕಮಗಳೂರು, ಅ.13: ಅಮೆರಿಕನ್ನರ ಶಿಸ್ತು, ಸಹಜ ಬದುಕು, ಸ್ವಾವಲಂಬನೆ ಮತ್ತು ಶ್ರಮ ಸಂಸ್ಕೃತಿ ಅನುಕರಣೀಯ. ಆದರೆ ಅವರ ವ್ಯಕ್ತಿಗತ ಬದುಕು, ಅತಿಯಾದ ಸ್ವೇಚ್ಛತೆ ಒಪ್ಪತಕ್ಕದ್ದಲ್ಲ ಎಂದು ಸಾಹಿತಿ ಚಟ್ನಳ್ಳಿ ಮಹೇಶ್ ನುಡಿದರು.
ಮಾಧ್ಯಮ ಸಂಸ್ಕೃತಿ ಪ್ರತಿಷ್ಠಾನ, ಅಜ್ಜಂಪುರ ಜಿ.ಸೂರಿ ಟ್ರಸ್ಟ್ ಹಾಗೂ ಕ್ಯಾತನಬೀಡು ಪ್ರತಿಷ್ಠಾನಗಳ ಸಂಯುಕ್ತಾಶ್ರಯದಲ್ಲಿ ಸುವರ್ಣ ಮಾಧ್ಯಮ ಭವನದ ಚಿಕ್ಕೊಳಲೆ ಸದಾಶಿವಶಾಸ್ತ್ರಿ ಸಭಾಂಗಣದಲ್ಲಿ ಆಯೋಜಿಸಿದ ಪ್ರವಾಸ ಅನುಭವ ಕಾರ್ಯಕ್ರಮದಲ್ಲಿ 9ನೆಯಬಾರಿ ಅಮೆರಿಕಾಕ್ಕೆ ಸಾಂಸ್ಕೃತಿಕ ಪ್ರವಾಸ ಕೈಗೊಂಡಿದ್ದ ಅವರು, ಅನುಭವಗಳನ್ನು ಹಂಚಿಕೊಂಡರು. ಡೌನ್‌ಟೌನ್ ಸಂಕ್ಷಿಪ್ತ ಭಾರತವನ್ನು ನೆನಪಿಸುತ್ತದೆ. ಇಲ್ಲಿಯ ಕಿರಾಣಿ ಅಂಗಡಿಗಳು, ಬ್ಯಾಡಗಿ ಮೆಣಸಿನಕಾಯಿ, ತಿಪಟೂರು ತೆಂಗು, ಮಲೆನಾಡಿನ ಕಾಫಿ ಜೊತೆಗೆ ಮಹಾತ್ಮಾಗಾಂಧಿ, ನೆಹರೂ ಹೆಸರಿನ ರಸ್ತೆಗಳು ಭಾರತದೊಂದಿಗಿನ ಭಾವನಾತ್ಮಕ ಸಂಬಂಧವನ್ನು ಹಸಿರಾಗಿಸಿವೆ. ಅಲ್ಲಿರುವ ಸರ್‌ಎಂ.ವಿ.ಪ್ರತಿಮೆ ಧ್ಯಾನ ಪಾರಂಪರಿಕತೆಯನ್ನು ಬಿಂಬಿಸುತ್ತದೆ ಎಂದರು. ಅಮೆರಿಕಾದಲ್ಲಿ ಕರಿಯರನ್ನು ಇನ್ನೂ ನಿಕೃಷ್ಣವಾಗಿ ಕಾಣಲಾಗುತ್ತಿದೆ. ಈವರೆಗೂ ಯಾವ ಮಹಿಳೆಯೂ ಅಮೆರಿಕಾದ ಅಧ್ಯಕ್ಷರಾಗಲು ಸಾಧ್ಯವಾಗಿಲ್ಲ. ಅಲ್ಲಿಯ ಸ್ವೇಚ್ಛತೆ, ಉಡುಗೆ, ತೊಡುಗೆ, ಆಹಾರ, ವಿಹಾರವನ್ನಷ್ಟೇ ಅನುಸರಿಸುವ ನಾವು ಅವರ ಸ್ವಚ್ಛತೆ, ಶಿಸ್ತು, ಬದ್ಧತೆ, ಸಮಯಪಾಲನೆ, ಪ್ರಾಮಾಣಿಕತೆ, ನಿಯಮ ಪಾಲನೆಗಳನ್ನು ಅನುಸರಿಸಿದರೆ ಜಗತ್ತಿನಲ್ಲಿ ಬಲಾಢ್ಯ ರಾಷ್ಟ್ರವೆನಿಸಿಕೊಳ್ಳಬಹುದೆಂದು ನುಡಿದರು.
ಶಿಕ್ಷಣತಜ್ಞ ಪರಿಸರವಾದಿ ಎಂ.ಎನ್. ಷಡಕ್ಷರಿ ಅಧ್ಯಕ್ಷತೆ ವಹಿಸಿದ್ದರು. ದಲಿತಹೋರಾಟಗಾರ ಕೆ.ಟಿ. ರಾಧಾಕೃಷ್ಣ ಮಾತನಾಡಿದರು.
ಈ ಸಮಯದಲ್ಲಿ ಮಾ.ಸಂ.ಪ್ರ. ಕಾರ್ಯಾಧ್ಯಕ್ಷ ಪ್ರಭುಲಿಂಗಶಾಸ್ತ್ರಿ, ಕ್ಯಾತನಬೀಡು ಪ್ರತಿಷ್ಠಾನದ ರವೀಶ್ ಕ್ಯಾತನಬೀಡು, ಅಜ್ಜಂಪುರ ಜಿ.ಸೂರಿ, ಕಾರ್ಯದರ್ಶಿ ಎಸ್.ಪ್ರಭು, ಮಂಜುನಾಥ್ ಕಾಮತ್, ಮೇಕನಗದ್ದೆ ಲಕ್ಷ್ಮಣಗೌಡ, ಸಿಂಗಟಗೆರೆ ಸಿದ್ದಪ್ಪ, ಸೋಮಶೇಖರ್, ಸೂರಿ ಶ್ರೀನಿವಾಸ್, ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು





