ಈಶ್ವರಪ್ಪವಿರುದ್ಧ ಶಿಸ್ತುಕ್ರಮಕ್ಕೆ ಬಿಎಸ್‌ವೈ ಆಗ್ರಹ

<ಬಿ. ರೇಣುಕೇಶ್
ಶಿವಮೊಗ್ಗ, ಅ. 13: ಬಿಜೆಪಿ ಪಕ್ಷದ ವರಿಷ್ಠರ ಸೂಚನೆಯ ನಂತರವೂ ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ನಿಂದ ಹೊರ ಬರಲು ನಿರಾಕರಿಸಿರುವ ಕೆ.ಎಸ್. ಈಶ್ವರಪ್ಪವಿರುದ್ಧ ಶಿಸ್ತುಕ್ರಮ ಜರಗಿಸಬೇಕೆಂದು ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪರವರು ಪಕ್ಷದ ವರಿಷ್ಠರಿಗೆ ಮನವಿ ಮಾಡಿಕೊಂಡಿದ್ದಾರೆ ಎಂಬ ಮಾತು ಬಿಜೆಪಿ ಪಾಳೆಯದಿಂದ ಕೇಳಿಬರುತ್ತಿದೆ. ಇದರಿಂದ ಬಿಎಸ್‌ವೈ ಹಾಗೂ ಈಶ್ವರಪ್ಪ ನಡುವೆ ಕಳೆದ ಕೆಲ ತಿಂಗಳುಗಳಿಂದ ನಡೆಯುತ್ತಿರುವ ಮುಸುಕಿನ ಗುದ್ದಾಟ ಇದೀಗ ಹೊಸ ತಿರುವು ಪಡೆದುಕೊಂಡಿದ್ದು, ಅಂತಿಮ ಹಂತಕ್ಕೆ ತಲುಪಿದೆ.
ದೆಹಲಿಯ ವರಿಷ್ಠರು ಇವರಿಬ್ಬರ ಕಲಹ ಶಮನಕ್ಕೆ ಯಾವ ಕ್ರಮಕೈಗೊಳ್ಳಲಿದ್ದಾರೆ ಎಂಬ ಕುತೂಹಲ ಮೂಡಿಸಿದೆ. ಈಶ್ವರಪ್ಪನವರ ವಿರುದ್ಧ ಪಕ್ಷದ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರಿಗೆ ಬಿಎಸ್‌ವೈ ದೂರು ಸಲ್ಲಿಸಿದ್ದಾರೆ. ಅಮಿತ್ ಶಾ ಅವರು ಬಿಎಸ್‌ವೈ ಹಾಗೂ ಈಶ್ವರಪ್ಪನವರೊಂದಿಗೆ ಸಮಾಲೋಚನೆ ನಡೆಸಿ ಮುಂದಿನ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ ಎಂದು ಬಿಜೆಪಿಯ ಉನ್ನತ ಮೂಲಗಳು ಮಾಹಿತಿ ನೀಡಿವೆ.
ಮುಂದುವರಿಸಲು ನಿರ್ಧಾರ: ಬಿಜೆಪಿ ಅಧಿಕಾರಕ್ಕೆ ತರಲು ಹಾಗೂ ಯಡಿಯೂರಪ್ಪರನ್ನು ಮುಖ್ಯಮಂತ್ರಿ ಮಾಡುವ ಉದ್ದೇಶದಿಂದ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಅಸ್ತಿತ್ವಕ್ಕೆ ತರಲಾಗಿದೆ ಎಂದು ಈಶ್ವರಪ್ಪ ಹೇಳಿಕೊಂಡಿದ್ದರು. ಆದರೆ, ಬ್ರಿಗೇಡ್ ಬಗ್ಗೆ ಮೊದಲಿನಿಂದಲೂ ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದ ಬಿಎಸ್‌ವೈ, ಪಕ್ಷದ ವರಿಷ್ಠರ ಮೂಲಕ ಬ್ರಿಗೇಡ್ ಕಾರ್ಯ ಚಟುವಟಿಕೆಗಳಿಗೆ ಕಡಿವಾಣ ಹಾಕುವಂತೆ ಈಶ್ವರಪ್ಪನವರಿಗೆ ಸೂಚನೆ ರವಾನಿಸುವಲ್ಲಿ ಯಶಸ್ವಿಯಾಗಿದ್ದರು. ಈಶ್ವರಪ್ಪನವರ ಈ ನಡೆ ಯಡಿಯೂರಪ್ಪನವರ ಕಣ್ಣು ಮತ್ತಷ್ಟು ಕೆಂಪಾಗುವಂತೆ ಮಾಡಿತ್ತು. ಹಿಂದುಳಿದ, ದಲಿತ ವರ್ಗಗಳ ಮುಖಂಡರನ್ನು ತಮ್ಮ ವಿರುದ್ಧ ಎತ್ತಿಕಟ್ಟುವ ವ್ಯವಸ್ಥಿತ ಕಾರ್ಯತಂತ್ರವನ್ನು ಈಶ್ವರಪ್ಪ ಮಾಡುತ್ತಿದ್ದಾರೆ. ಇದು ಪಕ್ಷ ಸಂಘಟನೆಯ ಮೇಲೆ ಪರಿಣಾಮ ಉಂಟು ಮಾಡಲಿದೆ ಎಂದು ಆರೋಪಿಸಿ ಪಕ್ಷದ ರಾಷ್ಟ್ರಾಧ್ಯಕ್ಷರಿಗೆ ಪತ್ರ ಬರೆದಿದ್ದಾರೆ ಎಂದು ಹೇಳಲಾಗಿದೆ. ದೊಡ್ಡ ಬಿರುಕು: ಯಡಿಯೂರಪ್ಪನವರು ಕೆಜೆಪಿ ತೊರೆದು ಬಿಜೆಪಿಗೆ ಮರು ಸೇರ್ಪಡೆಯಾದ ಬಳಿಕ ಈಶ್ವರಪ್ಪನವರೊಂದಿಗಿನ ಸಂಬಂಧ ಸುಧಾರಣೆಯಾಗುವ ನಿರೀಕ್ಷೆ ಪಕ್ಷದ ಮುಖಂಡರಲ್ಲಿತ್ತು. ಆದರೆ, ಈ ಹಿಂದೆ ಶಿವಮೊಗ್ಗ ಜಿಲ್ಲೆಯ ಪಕ್ಷದ ಪದಾಧಿಕಾರಿಗಳ ನೇಮಕ ವಿಚಾರದಲ್ಲಿ ಯಡಿಯೂರಪ್ಪನವರ ಬೆಂಬಲಿಗರನ್ನು ಮೂಲೆಗುಂಪು ಮಾಡುವ ಮೂಲಕ ಉದ್ದೇಶಪೂರ್ವಕವಾಗಿಯೇ ಯಡಿಯೂರಪ್ಪನವರನ್ನು ಕಡೆಗಣನೆ ಮಾಡಲಾಯಿತು ಎಂಬ ಆರೋಪ ಕೇಳಿಬಂದಿತ್ತು. ಇದರಿಂದ ಆಕ್ರೋಶಗೊಂಡಿದ್ದ ಬಿಎಸ್‌ವೈ, ಪಕ್ಷದ ರಾಜ್ಯಾಧ್ಯಕ್ಷ ಸ್ಥಾನ ಲಬಿಸಿದಂತೆಯೇ ಶಿವಮೊಗ್ಗ ಬಿಜೆಪಿಯಲ್ಲಿ ತಮ್ಮ ಪ್ರಾಬಲ್ಯ ಮರು ಸ್ಥಾಪಿಸಲು ಮುಂದಾದರು. ಅ
ಂತೆಯೇ ಜಿಲ್ಲಾಧ್ಯಕ್ಷ ಸ್ಥಾನ ಸೇರಿದಂತೆ ಪ್ರಮುಖ ಹುದ್ದೆಗಳು ತಮ್ಮ ಆಪ್ತರಿಗೆ ನೀಡುವಲ್ಲಿ ಯಶಸ್ವಿಯಾದರು. ಈಶ್ವರಪ್ಪನವರ ಮಾತಿಗೆ ಯಾವುದೇ ಮನ್ನಣೆ ಸಿಗದಂತೆ ಹಾಗೂ ಜಿಲ್ಲಾ ಬಿಜೆಪಿ ಯಲ್ಲಿ ಅವರನ್ನು ಮೂಲೆಗುಂಪು ಮಾಡುವ ಹುನ್ನಾರವನ್ನೂ ನಡೆಸಿದರು. ಜೊತೆಗೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದಿಂದ ಈಶ್ವರಪ್ಪನವರಿಗೆ ಟಿಕೆಟ್ ಸಿಗದಂತೆ ಮಾಡುವ ಕಾರ್ಯತಂತ್ರವನ್ನೂ ಯಡಿಯೂರಪ್ಪ ಮಾಡುತ್ತಿದ್ದಾರೆ ಎಂಬ ಮಾತು ಹರಿದಾಡಲಾರಂಭಿಸಿತು. ಇದರಿಂದ ಆಕ್ರೋಶಗೊಂಡ ಈಶ್ವರಪ್ಪ, ಬಿಎಸ್‌ವೈಗೆ ತಕ್ಕ ತಿರುಗೇಟು ನೀಡುವ ಉದ್ದೇಶದಿಂದಲೇ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ರೂಪಿಸಿದರು. ಇದು ಅವರಿಬ್ಬರ ನಡುವಿನ ವೈಮನಸ್ಸು ಮತ್ತಷ್ಟು ಉಲ್ಬಣಿಸುವಂತೆ ಮಾಡಿದೆ. ಒಟ್ಟಾರೆ ಬಿಎಸ್‌ವೈ ಹಾಗೂ ಕೆಎಸ್‌ಇ ನಡುವಿನ ಕಲಹ ಇದೀಗ ಪಕ್ಷದ ರಾಷ್ಟ್ರಾಧ್ಯಕ್ಷರ ಬಳಿಗೆ ತಲುಪಿದ್ದು, ಕೊನೇಯ ಹಂತಕ್ಕೆ ಬಂದಿದೆ. ಮುಂದೇನಾಗಲಿದೆ ಎಂಬುವುದನ್ನು ಇನ್ನಷ್ಟೇ ಕಾದು ನೋಡಬೇಕಾಗಿದೆ. ಬಿಜೆಪಿ ಅಧಿಕಾರಕ್ಕೆ ತರುವ ಉದ್ದೇಶ ಬ್ರಿಗೆೇಡ್‌ಗೆ ಇಲ್ಲ
ಪಕ್ಷದ ವರಿಷ್ಠರ ಸಂದೇಶದ ಹೊರತಾಗಿಯೂ ಈಶ್ವರಪ್ಪ ನವರು ಬ್ರಿಗೇಡ್ ಚಟುವಟಿಕೆಗಳನ್ನು ಸ್ಥಗಿತಗೊಳಿಸುವ ಪ್ರಮೇಯವೇ ಇಲ್ಲ. ಅಲ್ಲದೆ, ಬ್ರಿಗೇಡ್ ರಾಜಕೀಯೇತರ ಸಂಘಟನೆಯಾಗಿ ಕಾರ್ಯನಿರ್ವಹಿಸಲಿದೆ. ಬಿಜೆಪಿ ಅಧಿಕಾರಕ್ಕೆ ತರುವುದಾಗಲಿ, ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಮಾಡುವ ಉದ್ದೇಶವಾಗಲೀ ಬ್ರಿಗೇಡ್‌ಗೆ ಇಲ್ಲ ಎಂದು ಸ್ಪಷ್ಟಪಡಿಸಿರುವ ಈಶ್ವರಪ್ಪ, ಹಿಂದುಳಿದ, ದಲಿತ ಸಮುದಾಯದ ಮಠಾಧೀಶರು - ಮುಖಂಡರೊಂದಿಗೆ ಸಮಾಲೋಚನೆ ಮುಂದುವರಿಸಿದ್ದಾರೆ ಎನ್ನಲಾಗಿದೆ.
ಮಾತುಕತೆಗೆ ಬಿಎಸ್‌ವೈ ನಿರಾಕರಣೆ?
ವ ರಿಷ್ಠರ ಸಲಹೆಯಂತೆ ದಸರಾ ಹಬ್ಬದಂದು ಬಿಎಸ್‌ವೈ ಹಾಗೂ ಕೆಎಸ್‌ಇ ಮುಖಾಮುಖಿಯಾಗಿ ಮಾತುಕತೆ ನಡೆಸಿ, ತಮ್ಮಿಬ್ಬರಲ್ಲಿ ಮನೆ ಮಾಡಿರುವ ಗೊಂದಲ ಪರಿಹರಿಸಿಕೊಳ್ಳಬೇಕಾಗಿತ್ತು. ಲಭ್ಯ ಮಾಹಿತಿಯ ಪ್ರಕಾರ ಶಿವಮೊಗ್ಗ ನಗರದಲ್ಲಿಯೇ ಇವರಿಬ್ಬರ ಮಾತುಕತೆಗೆ ವೇದಿಕೆ ಕೂಡ ಸಿದ್ಧವಾಗಿತ್ತು. ಆದರೆ, ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಕಾರ್ಯ ಚಟುವಟಿಕೆ ಸ್ಥಗಿತಗೊಳಿಸುವುದಿಲ್ಲ ಎಂಬ ಕೆಎಸ್‌ಇ ಹೇಳಿಕೆಯಿಂದ ಆಕ್ರೋಶಗೊಂಡ ಬಿಎಸ್‌ವೈ, ಮಾತುಕತೆ ನಡೆಸದಿರುವ ನಿರ್ಧಾರ ಮಾಡಿದ್ದಾರೆ. ಈ ಕಾರಣದಿಂದಲೇ ದಸರಾ ಹಬ್ಬದಂದು ಈ ಇಬ್ಬರು ಮುಖಂಡರ ನಡುವೆ ನಿಗದಿಯಾಗಿದ್ದ ಮುಖಾಮುಖಿ ಭೇಟಿ ಸಾಧ್ಯವಾಗಿಲ್ಲ. ಭೇಟಿಗೆ ಕೆಎಸ್‌ಇ ಸಿದ್ಧರಾಗಿದ್ದರೂ ಯಡಿಯೂರಪ್ಪನವರು ಮಾತುಕತೆಗೆ ಮುಂದಾಗುತ್ತಿಲ್ಲ ಎಂದು ಬಿಜೆಪಿ ಮೂಲಗಳು ಮಾಹಿತಿ ನೀಡಿವೆ.
ಶಿವಮೊಗ್ಗದಿಂದ ಟಿಕೆಟ್ ಕೈ ತಪ್ಪುವ ಆತಂಕ?!
ಕಳೆದ ಹಲವು ಚುನಾವಣೆಗಳಿಂದ ಶಿವಮೊಗ್ಗ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಯಾಗಿ ಕಣದಲ್ಲಿದ್ದ ಕೆ.ಎಸ್.ಈಶ್ವರಪ್ಪನವರಿಗೆ, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಟಿಕೆಟ್ ಸಿಗದಂತೆ ಮಾಡುವ ವ್ಯವಸ್ಥಿತ ಕಾರ್ಯತಂತ್ರಗಳನ್ನು ಬಿಎಸ್‌ವೈ ಬೆಂಬಲಿಗರು ನಡೆಸುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿವೆ. ಸ್ವತಃ ಬಿಎಸ್‌ವೈ ಶಿವಮೊಗ್ಗದಿಂದ ಈಶ್ವರಪ್ಪ ನವರು ಕಣಕ್ಕಿಳಿಯಬಾರದು ಎಂಬ ನಿರ್ಧಾರ ಮಾಡಿದ್ದಾರೆನ್ನಲಾಗಿದೆ. ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ಕೆಜೆಪಿಯಿಂದ ಸ್ಪರ್ಧಿಸಿದ್ದ, ಮತ್ತು ಹಾಲಿ ಪಕ್ಷದ ಜಿಲ್ಲಾಧ್ಯಕ್ಷ ರುದ್ರೇಗೌಡ ಅಥವಾ ಹಾಲಿ ಶಿಕಾರಿಪುರ ಕ್ಷೇತ್ರದ ಶಾಸಕ ತಮ್ಮ ಪುತ್ರ ಬಿ.ವೈ.ರಾಘವೇಂದ್ರ ಅವರನ್ನು ಶಿವಮೊಗ್ಗ ಕ್ಷೇತ್ರದಿಂದ ಅಖಾಡಕ್ಕಿಳಿಸುವ ಚಿಂತನೆ ಬಿಎಸ್‌ವೈ ಅರವರದ್ದಾಗಿದೆ ಎಂದು ಹೇಳಲಾಗುತ್ತಿದೆ. ಮತ್ತೊಂದೆಡೆ ಶಿವಮೊಗ್ಗ ಕ್ಷೇತ್ರದಿಂದ ಈಶ್ವರಪ್ಪನವರೇ ಕಣಕ್ಕಿಳಿಯುವುದು ಖಚಿತ. ಈ ಬಗ್ಗೆ ಯಾವುದೇ ಅನುಮಾನ ಬೇಡ ಎಂದು ಬೆಂಬಲಿಗರು ಆತ್ಮವಿಶ್ವಾಸ ವ್ಯಕ್ತಪಡಿಸುತ್ತಾರೆ.







