ಅಧಿಕಾರಿಗಳು ಜನಪ್ರತಿನಿಧಿಗಳ ವಿಶ್ವಾಸಕ್ಕೆ ಪಡೆಯಲಿ: ಶಾಸಕ ಬಿ.ಬಿ. ನಿಂಗಯ್ಯ
ಕುಡಿಯುವ ನೀರು ಸಮಸ್ಯೆ

ಮೂಡಿಗೆರೆ, ಅ.13: ಕುಡಿ ಯುವ ನೀರಿನ ಸಮಸ್ಯೆ ನಿವಾರಣೆಗೆ ಅಧಿಕಾರಿಗಳು ಜನಪ್ರತಿ ನಿಧಿಗಳ ಅಭಿಪ್ರಾಯ ಪಡೆದು, ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜನರಿಗೆ ಉತ್ತಮ ಸೇವೆ ನೀಡಬೇಕು ಎಂದು ಶಾಸಕ ಬಿ.ಬಿ. ನಿಂಗಯ್ಯ ಸೂಚಿಸಿದ್ದಾರೆ.
ಅವರು ಪಟ್ಟಣದ ತಾಪಂ ಸಭಾಂಗಣದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಜಿಪಂ, ತಾಪಂ ಸದಸ್ಯರು, ಗ್ರಾಪಂಗಳ ಪಿಡಿಒಗಳು ಹಾಗೂ ನೀರಾವರಿ ಇಲಾಖೆಯ ಅಧಿಕಾರಿಗಳ ಸಭೆ ನಡೆಸಿ ಮಾತನಾಡುತ್ತಿದ್ದರು.
ಗುತ್ತಿಗೆದಾರರು, ಇಂಜಿನಿಯರ್‌ಗಳು ಶಾಮೀಲಾಗಿ ಅನೇಕ ಕಾಮಗಾರಿಗಳನ್ನು ಜನಪ್ರತಿನಿಧಿಗಳ ಗಮನಕ್ಕೆ ತರದೇ ಏಕಪಕ್ಷೀಯವಾಗಿ ಕೆಲಸ ಮಾಡುತ್ತಿದ್ದಾರೆ. ಇದರಿಂದ ಜನಪ್ರತಿನಿಧಿಗಳು ಜನರಿಂದ ನಿಂದನೆಗೆ ಒಳಗಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಹೊಲಸು ವ್ಯವಹಾರ ಇಂದಿನಿಂದಲೇ ನಿಲ್ಲಬೇಕು. ಯಾವುದೇ ಕಾಮಗಾರಿ ಮಾಡುವಾಗ ಜನಪ್ರತಿನಿಧಿಗಳ ಅಭಿಪ್ರಾಯ ಪಡೆಯದೆ ಮಾಡಬಾರದು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಮೂಡಿಗೆರೆ ತಾಲೂಕನ್ನು ಬರಪೀಡಿತ ಪ್ರದೇಶ ಎಂದು ಸರಕಾರ ಘೋಷಣೆ ಮಾಡಿದೆ. ಪ್ರಕೃತಿಯಲ್ಲಿ ಆಗಿರುವ ಬದಲಾವಣೆಗೆ ಪರಿಹಾರ ಕಂಡುಕೊಳ್ಳುವ ಜೊತೆಗೆ ಪ್ರಮುಖವಾಗಿ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಾಗಿ
ದೆ. ತಾಲೂಕಿನ 4 ಹೋಬಳಿ ಕೇಂದ್ರಗಳಲ್ಲಿ ಆಯಾ ಭಾಗದ ಗ್ರಾಪಂ ಗಳಿಗೆ ಸಂಬಂಧಿಸಿದಂತೆ ಮುಂಬರುವ ದಿನಗಳಲ್ಲೂ ಕುಡಿಯುವ ನೀರಿನ ಸಮಸ್ಯೆ ನಿವಾರಣೆ ಮಾಡಲು ಪಟ್ಟಿ ತಯಾರು ಮಾಡಬೇಕು. ಇದಕ್ಕೆ ಸಂಬಂಧಿಸಿದ ಇಂಜಿನಿಯರ್‌ಗಳು ಮತ್ತು ಟಾಸ್ಕ್‌ಪೋರ್ಸ್ ನೋಡಲ್ ಅಧಿಕಾರಿಗಳು ಪಕ್ಕಾ ಪಟ್ಟಿ ಮಾಡಿದರೆ ಅದಕ್ಕೆ ಅಂದಾಜು ಪಟ್ಟಿ ಮಾಡಿ ಸರಕಾರಕ್ಕೆ ನೀಡಲು ಅನುಕೂಲವಾಗುವುದು ಎಂದು ಹೇಳಿದರು. ತಾ.ಪಂ. ಅಧ್ಯಕ್ಷ ಕೆ.ಸಿ.ರತನ್ ಮಾತನಾಡಿ, ಮೂಡಿಗೆರೆ ತಾಲೂಕನ್ನು ಬರ ಪೀಡಿತ ಪ್ರದೇಶವೆಂದು ಸರಕಾರ ಘೋಷಣೆ ಮಾಡಿದ್ದರಿಂದ ಹೆಚ್ಚಿನ ಅನುದಾನ ಬರಲಿದೆ. ಇದರಿಂದ ತಾಲೂಕಿಗೆ ಅನುಕೂಲವಾಗಲಿದ್ದು ಇದಕ್ಕೆ ಸಹಕರಿಸಿದ ಶಾಸಕ ಬಿ.ಬಿ. ನಿಂಗಯ್ಯ ಮತ್ತು ಜಿಲ್ಲಾಧಿಕಾರಿಯವರಿಗೆ ಅಭಿನಂದನೆ ತಿಳಿಸಿದರು.
ಈ ಸಂದರ್ಭದಲ್ಲಿ ತಾಲೂಕಿನ ಬಿದರಹಳ್ಳಿ, ತರುವೆ, ಚಕ್ಕೋಡು ಗ್ರಾಮದ ಆತ್ಮಹತ್ಯೆ ಮಾಡಿಕೊಂಡ ಮೂವರು ರೈತರ ಕುಟುಂಬಕ್ಕೆ ಕೃಷಿ ಇಲಾಖೆಯಿಂದ ತಲಾ 5.ಲಕ್ಷ ರೂ. ಪರಿಹಾರದ ಚೆಕ್ ವಿತರಣೆ ಮಾಡಲಾಯಿತು. ಸಭೆಯಲ್ಲಿ ಜಿಪಂ ಸದಸ್ಯರಾದ ಅಮಿತಾ ಮುತ್ತಪ್ಪ, ಪ್ರಭಾಕರ್, ಶಾಮಣ್ಣ, ತಾಪಂ ಉಪಾಧ್ಯಕ್ಷೆ ಸವಿತಾ ರಮೇಶ್, ದೇವರಾಜು, ಭಾರತೀ ರವೀಂದ್ರ, ವೀಣಾ, ಹಿತ್ತಲಮಕ್ಕಿ ರಾಜೇಂದ್ರ, ಉಪವಿಭಾಗಾಧಿಕಾರಿ ಸಂಗಪ್ಪ, ತಹಶೀಲ್ದಾರ್ ಡಿ.ನಾಗೇಶ್, ಆಡಳಿತ ಉಪ ಕಾರ್ಯದರ್ಶಿ ರಾಜಗೋಪಾಲ್, ತಾಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎನ್.ಗುರುದತ್ ಮತ್ತಿತರರು ಉಪಸ್ಥಿತರಿದ್ದರು.







