ಜಾತ್ಯತೀತ ರಾಷ್ಟ್ರವನ್ನಾಗಿಸಲು ಯುವ ಸಮೂಹ ಪಣ ತೊಡಲಿ: ಅಬ್ದುಲ್ ಮಜೀದ್
ವೀರಾಜಪೇಟೆ ಜಾತ್ಯತೀತ ಸಮಾವೇಶ

ವೀರಾಜಪೇಟೆ,ಅ.13: ಭಾರತದಲ್ಲಿ ನಾವೆಲ್ಲರು ಶಾಂತಿ, ಸಹೋದರತ್ವ ಬಯಸಿದವರಾಗಿದ್ದರೂ ಸಮಾಜದಲ್ಲಿನ ಒಡಕುಗಳನ್ನು ಮೂಡಿಸುವ ಪ್ರಯತ್ನಗಳು ನಡೆಯುತ್ತಿದ್ದು ಇದನ್ನು ಹೋಗಲಾಡಿಸಲು ಜಾತ್ಯತೀತತೆಯಿಂದ ಯುವ ಸಮೂಹ ಮುಂದೆ ಬರಬೇಕೆಂದು ಎಸ್‌ಡಿಪಿಐನ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್ ಕೊಡ್ಲಿಪೇಟೆ ಕರೆ ನೀಡಿದರು.
ವೀರಾಜಪೇಟೆ ಎಮಿರೇಟ್ಸ್ ಸಭಾಂಗಣದಲ್ಲಿ ನಡೆದ ಜಾತ್ಯತೀತತೆಯೇ ಭಾರತದ ಜೀವದಾಳು ಸಮಾವೇಶದಲ್ಲಿ ಮಾತನಾಡಿ, ನಮ್ಮ ದೇಶದ ಸಿದ್ಧಾಂತಗಳನ್ನು ದುರುಪಯೋಗ ಪಡಿಸಿಕೊಳ್ಳುವ ಮೂಲಕ ಅಲ್ಪಸಂಖ್ಯಾತ, ದಲಿತ, ಹಿಂದುಳಿದ ವರ್ಗದವರ ಮೇಲೆ ನಿರಂತರವಾಗಿ ದಾಳಿ ಮಾಡುತ್ತಿರುವ ದುಷ್ಟ ಶಕ್ತಿಗಳ ವಿರುದ್ಧ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸುವ ಮೂಲಕ ಶಾಂತಿ ಸಹಬಾಳ್ವೆಯ ಭಾರತವನ್ನಾಗಿಸಲು ಪ್ರತಿಯೊಬ್ಬರೂ ಚಿಂತಿಸಬೇಕಾಗಿದೆ. ಇತ್ತೀಚೆಗಿನ ದಿನಗಳಲ್ಲಿ ಬದುಕುವ ಹಕ್ಕಿನ ಮೇಲೆ ಸಂಘಪರಿವಾರ ಸವಾರಿ ಮಾಡಿ ವ್ಯಕ್ತಿಯ ಸ್ವಾತಂತ್ರವನ್ನು ಕಸಿದುಕೊಳ್ಳುವ ಪ್ರಯತ್ನ ವ್ಯಾಪಕವಾಗಿ ನಡೆಯುತ್ತಿದೆ. ಗೋ ರಕ್ಷಣೆಯ ಹೆಸರಿನಲ್ಲಿ ಅಲ್ಪಸಂಖ್ಯಾತ, ದಲಿತಹಾಗೂ ಹಿಂದುಳಿದ ವರ್ಗದ ಮೇಲೆ ನಿರಂತರವಾಗಿ ಸರಕಾರಗಳ ಕುಮ್ಮಕ್ಕಿನಿಂದಲೇ ದೌರ್ಜನ್ಯ ನಡೆಯುತ್ತಿದೆ. ಇದುವರೆಗೂ ಹಲವು ಘಟನೆಗಳು ನಡೆದರೂ ಸರಕಾರಗಳು ಮೌನ ವಹಿಸಿರುವುದರಿಂದಲೇ ಘಟನೆಗಳು ಮರುಕಳಿಸುತ್ತಿವೆ. ಯಾವುದೇ ಸರಕಾರಗಳು ಬಂದರೂ ಜನಸಾಮಾನ್ಯರಿಗೆ ಸಾಮಾಜಿಕ ನ್ಯಾಯ ಸಿಗುತ್ತಿಲ್ಲ ಅಭಿವೃದ್ಧಿ ಬಗ್ಗೆ ಕಾಳಜಿ ವಹಿಸಬೇಕಾದ ಸರಕಾರಗಳು ವ್ಯೆಯಕ್ತಿಕ ಕಾರಣಗಳಿಗೆ ಹೆಚ್ಚು ಸಮಯ ವಿನಿಯೋಗಿಸುತ್ತಿದ್ದಾರೆ ಎಂದರು.
ಕೊಡಗು ಜಿಲ್ಲೆಯಲ್ಲಿ ಬೆಳೆಗಾರರ ಬೆಳೆ ನಷ್ಟದೊಂದಿಗೆ ಕಾರ್ಮಿಕರ ಜೀವದೊಂದಿಗೆ ಚೆಲ್ಲಾಟವಾಡುತ್ತಿರುವ ಕಾಡಾನೆ ಹಾವಳಿಯನ್ನು ತಡೆಗಟ್ಟಲು ಜನಪ್ರತಿನಿಧಿಗಳು ಮುಂದಾಗಿಲ್ಲ. ಜ್ವಲಂತ ಸಮಸ್ಯೆಗಳ ಬಗ್ಗೆ ಮಾತನಾಡಬೇಕಾದವರು ಮೌನವಾಗಿಯೇ ಮುಂದುವರಿಯುತ್ತಿದ್ದಾರೆ. ಅಭಿವೃದ್ಧಿ ಹೆಸರಿನಲ್ಲಿ ಕೋಟಿಗಟ್ಟಲೆ ಹಣ ಬಂದರೂ ಕುಟುಂಬ ಅಭಿವೃದ್ಧಿ ಆಗುತ್ತಿದೆ ಹೊರತು ಗ್ರಾಮ ಅಭಿವೃದ್ಧಿ ಕಾಣುತ್ತಿಲ್ಲ ಎಂದು ಆರೋಪಿಸಿದರು.
ಎಸ್‌ಡಿಪಿಐನ ರಾಜ್ಯ ಕಾರ್ಯದರ್ಶಿ ಕೆ.ಬಿ ಅಫ್ಸರ್ ಮಾತನಾಡಿ, ಇಡೀ ವಿಶ್ವದಲ್ಲೇ ಮಾದರಿ ಸಂವಿಧಾನವನ್ನು ಡಾ.ಅಂಬೇಡ್ಕರ್ ಅವರು ಭಾರತಕ್ಕೆ ನೀಡಿದ್ದಾರೆ. ಆದರೆ, ಕೇಂದ್ರ ಸರಕಾರದ ಸಂಸದರಾದ ಯೋಗಿ ಆದಿತ್ಯನಾಥ್, ಸಾಕ್ಷಿ ಮಹಾರಾಜ್, ಸಾಧ್ವಿ ಪ್ರಾಚಿ ಮುಂತಾದವರು ಬಹಿರಂಗವಾಗಿ ಸಂವಿಧಾನ ವಿರೋಧಿ ಹೇಳಿಕೆಗಳನ್ನು ನೀಡುವ ಮೂಲಕ ಜಾತ್ಯತೀತ ಹಾಗೂ ಪ್ರಜಾಪ್ರಭುತ್ವ ರಾಷ್ಟ್ರಕ್ಕೆ ಧಕ್ಕೆ ತರುವ ಕೆಲಸ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎಸ್‌ಡಿಪಿಐ ಪಕ್ಷದ ವೀರಾಜಪೇಟೆ ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಶೌಕತ್ ಅಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧ್ಯಕ್ಷ ಅಮೀನ್ ಮೊಹಿಸಿನ್, ಉಪಾಧ್ಯಕ್ಷ ಲಿಯಾಕತ್‌ಅಲಿ, ಪ್ರಧಾನ ಕಾರ್ಯದರ್ಶಿ ಮಡಿಕೇರಿ ನಗರಸಭಾ ಸದಸ್ಯ ಪೀಟರ್ ಮತ್ತು ಮನ್ಸೂರ್ ಉಪಸ್ಥಿತರಿದ್ದರು. ವೀರಾಜಪೇಟೆ ಘಟಕದ ಅಧ್ಯಕ್ಷ ಸಾಬಿತ್ ಸ್ವಾಗತಿಸಿ ಶಹದೀರ್ ಅಲಿ ವಂದಿಸಿ ಶರೀಫ್ ನಿರೂಪಿಸಿದರು.







