ಶಿವಮೊಗ್ಗದಲ್ಲಿ ಡಿಎಸ್‌ಎಸ್‌ನಿಂದ ಧರಣಿ
ಅಂಬೇಡ್ಕರ್ ಪ್ರತಿಮೆಗೆ ಅಪಮಾನ

ಶಿವಮೊಗ್ಗ, ಅ.13: ಭದ್ರಾವತಿ ಪಟ್ಟಣದಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಅಪಮಾನ ಮಾಡಿದ ಕಿಡಿಗೇಡಿಗಳನ್ನು ಪತ್ತೆ ಹಚ್ಚಿ ಅವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರಗಿಸಬೇಕೆಂದು ಆಗ್ರಹಿಸಿ, ಗುರುವಾರ ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಧರಣಿ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಪತ್ರ ಸಲ್ಲಿಸಿದರು. ಮಹಾನ್ ಮಾನವತಾವಾದಿ, ಸಂವಿಧಾನ ಶಿಲ್ಪಿ, ಶೋಷಿತರ ಧ್ವನಿಯಾಗಿದ್ದ ಅಂಬೇಡ್ಕರ್‌ಗೆ ಅಪಮಾನ ಮಾಡಿದ ಕೃತ್ಯವು ಅಕ್ಷಮ್ಯ ಅಪರಾಧವಾಗಿದೆ. ಇದು ಅಂಬೇಡ್ಕರ್‌ರವರ ಅನುಯಾಯಿಗಳಲ್ಲಿ ತೀವ್ರ ನೋವುಂಟು ಮಾಡಿದೆ. ನಾಗರಿಕ ಸಮಾಜ ತಲೆತಗ್ಗಿಸುವಂತದ್ದಾಗಿದೆ ಎಂದು ಧರಣಿ ನಿರತರು ದೂರಿದ್ದಾರೆ. ನಮ್ಮ ಸಮಾಜದಲ್ಲಿ ಜಾತೀಯತೆ ಹಾಗೂ ಮಡಿವಂತಿಕೆಯ ಸಾಮಾಜಿಕ ಪಿಡುಗುಗಳಿಂದ ಇನ್ನೂ ಕೆಲ ಸಣ್ಣ ಮನಸ್ಸಿನವರು ಹೊರಬಂದಿಲ್ಲವೆಂಬುವುದಕ್ಕೆ ಈ ಘಟನೆ ಸಾಕ್ಷಿಯಾಗಿದೆ ಎಂದು ಧರಣಿನಿರತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಂಬೇಡ್ಕರ್ ಪ್ರತಿಮೆ ಅಪಮಾನಗೊಳಿಸಿದ ಆರೋಪಿಗಳನ್ನು ತ್ವರಿತಗತಿಯಲ್ಲಿ ಪತ್ತೆ ಹಚ್ಚಿ ಬಂಧಿಸಬೇಕು. ಅವರ ವಿರುದ್ಧ ಗೂಂಡಾ ಕಾಯ್ದೆ ಹಾಕುವುದರ ಜೊತೆಗೆ ಗಡಿಪಾರು ಮಾಡಬೇಕು. ಅಂಬೇಡ್ಕರ್ ಪ್ರತಿಮೆಗೆ ಸೂಕ್ತ ರಕ್ಷಣೆ ನೀಡಬೇಕು. ಸಿ.ಸಿ.ಕ್ಯಾಮರ ಅಳವಡಿಸಬೇಕು. ಮುಂದೆ ಈ ರೀತಿಯ ಅಹಿತಕರ ಘಟನೆಗಳಿಗೆ ಆಸ್ಪದವಾಗದಂತೆ ಎಚ್ಚರವಹಿಸಬೇಕು ಎಂದು ಧರಣಿನಿರತರು ಆಗ್ರಹಿಸಿದ್ದಾರೆ. ಧರಣಿಯಲ್ಲಿ ಸಂಘಟನೆಯ ಮುಖಂಡರಾದ ಪ್ರಕಾಶ್ ಲಿಗಾಡಿ, ಕೆ.ಎ.ರಾಜಕುಮಾರ್, ಹರಮಘಟ್ಟ ರಂಗಪ್ಪ, ನರಸಿಂಹಮೂರ್ತಿ, ಗುರುರಾಜ್, ರಂಗಸ್ವಾಮಿ, ಮುರುಳೀಧರ್ ಮತ್ತಿತರರಿದ್ದರು.





