ರಶ್ಯ ಕ್ಷಿಪಣಿ ಖರೀದಿಗೆ ಶೀಘ್ರವೇ ಸಹಿ

ಮಾಸ್ಕೊ, ಅ. 13: ರಶ್ಯವು ಭಾರತಕ್ಕೆ ಮೇಲ್ಮೈಯಿಂದ ಆಕಾಶಕ್ಕೆ ಜಿಗಿಯುವ ಎಸ್-400 ಕ್ಷಿಪಣಿಗಳನ್ನು ಮಾರಾಟ ಮಾಡುವುದಕ್ಕೆ ಸಂಬಂಧಿಸಿ ಉಭಯ ದೇಶಗಳು ಶನಿವಾರ 5 ಬಿಲಿಯ ಡಾಲರ್ (ಸುಮಾರು 33,450 ಕೋಟಿ ರೂಪಾಯಿ) ಮೊತ್ತದ ಒಪ್ಪಂದವೊಂದಕ್ಕೆ ಸಹಿ ಹಾಕಲಿವೆ ಎಂದು ಕ್ರೆಮ್ಲಿನ್‌ನ ಅಧಿಕಾರಿ ಯೂರಿ ಉಶಕೊವ್ ತಿಳಿಸಿದ್ದಾರೆ.
ಗೋವದಲ್ಲಿ ನಡೆಯಲಿರುವ ‘ಬ್ರಿಕ್ಸ್’ ದೇಶಗಳ ಸಮ್ಮೇಳನದಲ್ಲಿ ಒಪ್ಪಂದಕ್ಕೆ ಸಹಿ ಹಾಕಲಾಗುವುದು. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ರಶ್ಯದ ಅಧ್ಯಕ್ಷ ವ್ಲಾದಿಮರ್ ಪುಟಿನ್ ದ್ವಿಪಕ್ಷೀಯ ಮಾತುಕತೆಗಳನ್ನೂ ನಡೆಸಲಿದ್ದಾರೆ.
ಚೀನಾ, ರಶ್ಯ, ಬ್ರೆಝಿಲ್, ಭಾರತ ಮತ್ತು ದಕ್ಷಿಣ ಆಫ್ರಿಕಗಳನ್ನೊಳಗೊಂಡ ಗುಂಪೇ ‘ಬ್ರಿಕ್ಸ್’.
ಎಸ್-400 ವಿಮಾನ ನಿರೋಧಕ ಕ್ಷಿಪಣಿಗಳನ್ನು ಖರೀದಿಸಲು ರಕ್ಷಣಾ ಸಚಿವಾಲಯ ಕಳೆದ ವರ್ಷದ ಡಿಸೆಂಬರ್‌ನಲ್ಲಿ ನಿರ್ಧರಿಸಿತ್ತು.
ಭಾರತ ಪಡೆಯಲಿರುವ ಐದು ಕ್ಷಿಪಣಿಗಳು ಪರಮಾಣು ವಿದ್ಯುತ್ ಸ್ಥಾವರಗಳು ಮತ್ತು ಮಹತ್ವದ ಸರಕಾರಿ ಸಂಸ್ಥಾಪನೆಗಳಿಗೆ ರಕ್ಷಣೆಯೊದಗಿಸುತ್ತವೆ.
ಪಾಕಿಸ್ತಾನ ಅಥವಾ ಚೀನಾದ ಪರಮಾಣು ಸಮರ್ಥ ಪ್ರಕ್ಷೇಪಕ ಕ್ಷಿಪಣಿಗಳ ವಿರುದ್ಧವೂ ರಶ್ಯದ ಕ್ಷಿಪಣಿಗಳು ರಕ್ಷಣೆಯೊದಗಿಸುತ್ತವೆ.
ಎಸ್-400 ಕ್ಷಿಪಣಿಗಳು 400 ಕಿ.ಮೀ. ವ್ಯಾಪ್ತಿಯಲ್ಲಿ ಒಳಬರುತ್ತಿರುವ ವಿಮಾನಗಳು ಅಥವಾ ಕ್ಷಿಪಣಿಗಳನ್ನು ತಡೆಯಬಲ್ಲದು.
ಈ ಕ್ಷಿಪಣಿಗಳ ಸೂಕ್ಷ್ಮ ರಾಡಾರ್ ವ್ಯವಸ್ಥೆಯು ‘ಅದೃಶ್ಯ’ ವಿಮಾನಗಳನ್ನೂ ಪತ್ತೆಹಚ್ಚಬಲ್ಲದು ಎಂದು ಹೇಳಲಾಗಿದೆ. ಸಾಮಾನ್ಯವಾಗಿ ‘ಅದೃಶ್ಯ’ ವಿಮಾನಗಳನ್ನು ರಾಡಾರ್ ಅಥವಾ ಇತರ ವ್ಯವಸ್ಥೆಗಳಿಂದ ಪತ್ತೆ ಹಚ್ಚುವುದು ಅಸಾಧ್ಯ.







