ರಣಜಿ ಟ್ರೋಫಿ: ಸಮರ್ಥ್ ಶತಕ, ಕರ್ನಾಟಕ ಸುಭದ್ರ
ಯುವರಾಜ್ ಸಿಂಗ್ ಔಟಾಗದೆ 164
ನೊಯ್ಡ, ಅ.13: ಆರಂಭಿಕ ಬ್ಯಾಟ್ಸ್‌ಮನ್ ಆರ್.ಸಮರ್ಥ್ ಬಾರಿಸಿದ ಆಕರ್ಷಕ ಅಜೇಯ ಶತಕ(118)ದ ಬೆಂಬಲದಿಂದ ಕರ್ನಾಟಕ ತಂಡ ಗುರುವಾರ ಇಲ್ಲಿ ಆರಂಭವಾದ ಜಾರ್ಖಂಡ್ ವಿರುದ್ಧದ ರಣಜಿ ಪಂದ್ಯದಲ್ಲಿ ಸುಸ್ಥಿತಿಯಲ್ಲಿದೆ.
ಇಲ್ಲಿನ ಗ್ರೇಟರ್ ನೊಯ್ಡ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ಗುರುವಾರ ಆರಂಭವಾದ ರಣಜಿ ಟ್ರೋಫಿಯ ‘ಬಿ’ ಗುಂಪಿನ ಪಂದ್ಯದಲ್ಲಿ ಟಾಸ್ ಜಯಿಸಿದ ಕರ್ನಾಟಕ ತಂಡ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು.
ನಾಯಕ ವಿನಯಕುಮಾರ್ ನಿರ್ಧಾರವನ್ನು ಸಮರ್ಥಿಸಿದ ಸಮರ್ಥ್(ಔಟಾಗದೆ 118 ರನ್, 276 ಎಸೆತ, 10 ಬೌಂಡರಿ) ಹಾಗೂ ಕರುಣ್ ನಾಯರ್(74 ರನ್, 168 ಎಸೆತ, 5 ಬೌಂಡರಿ)ಕರ್ನಾಟಕ ತಂಡ ಮೊದಲ ದಿನದಾಟದಂತ್ಯಕ್ಕೆ 90 ಓವರ್‌ಗಳಲ್ಲಿ 3 ವಿಕೆಟ್‌ಗಳ ನಷ್ಟಕ್ಕೆ 248 ರನ್ ಗಳಿಸಲು ನೆರವಾದರು.
ಕರ್ನಾಟಕದ ಆರಂಭ ಉತ್ತಮವಾಗಿರಲಿಲ್ಲ. 13ನೆ ಓವರ್‌ನಲ್ಲಿ ಅಗ್ರ ಕ್ರಮಾಂಕದ ಮಾಯಾಂಕ್ ಅಗರವಾಲ್(15) ಹಾಗೂ ರಾಬಿನ್ ಉತ್ತಪ್ಪ(02) ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ತಂಡ 32 ರನ್‌ಗೆ 2 ವಿಕೆಟ್ ಕಳೆದುಕೊಂಡಿದ್ದಾಗ ಜೊತೆಯಾದ ಸಮರ್ಥ್ ಹಾಗೂ ನಾಯರ್ 3ನೆ ವಿಕೆಟ್‌ಗೆ 155 ರನ್ ಸೇರಿಸಿ ತಂಡಕ್ಕೆ ಆಸರೆಯಾದರು.
ಈ ಜೋಡಿಯನ್ನು ಆಶೀಷ್ ಕುಮಾರ್(3-47) ಬೇರ್ಪಡಿಸಿದರು. ದಿನದಾಟದಂತ್ಯಕ್ಕೆ ಸಮರ್ಥ್ ಹಾಗೂ ಕೆ.ಅಬ್ಬಾಸ್(ಔಟಾಗದೆ 28) ಕ್ರೀಸ್ ಕಾಯ್ದುಕೊಂಡಿದ್ದು, 4ನೆ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 61 ರನ್ ಸೇರಿಸಿದ್ದಾರೆ.
ಸಂಕ್ಷಿಪ್ತ ಸ್ಕೋರ್
ಕರ್ನಾಟಕ: 90 ಓವರ್‌ಗಳಲ್ಲಿ 248/3
(ಸಮರ್ಥ್ ಔಟಾಗದೆ 118, ಕರುಣ್ ನಾಯರ್ 74, ಕೆ.ಅಬ್ಬಾಸ್ ಔಟಾಗದೆ 28, ಆಶೀಷ್ ಕುಮಾರ್ ಔಟಾಗದೆ 3-47)
ರಣಜಿ ಟ್ರೋಫಿ ಮೊದಲ ದಿನದ ಫಲಿತಾಂಶ
ಕಲ್ಯಾಣಿ: ಆಂಧ್ರ ವಿರುದ್ಧ ಛತ್ತೀಸ್‌ಗಡ 261/4
ವಿಶಾಖಪಟ್ಟಣ: ರಾಜಸ್ಥಾನ ವಿರುದ್ಧ ಅಸ್ಸಾಂ 195
ದಿಲ್ಲಿ: ಮುಂಬೈ ವಿರುದ್ಧ ಬರೋಡ 286/9
ಜೈಪುರ: ಉತ್ತರ ಪ್ರದೇಶ ವಿರುದ್ಧ ಬಂಗಾಳ 288/3
ಸೂರತ್: ಜಮ್ಮು-ಕಾಶ್ಮೀರ 227, ಗೋವಾ 43/5
ಜೆಮ್ಶೆಡ್‌ಪುರ: ಹರ್ಯಾಣ ವಿರುದ್ಧ ಹೈದರಾಬಾದ್ 191
ನೊಯ್ಡ: ಜಾರ್ಖಂಡ್ ವಿರುದ್ಧ ಕರ್ನಾಟಕ 248/3
ಕೋಲ್ಕತಾ: ಹಿಮಾಚಲ ಪ್ರದೇಶದ ವಿರುದ್ಧ ಕೇರಳ 163/4
ರೋಹ್ಟಕ್: ಮಧ್ಯಪ್ರದೇಶದ ವಿರುದ್ಧ ಪಂಜಾಬ್ 347/3
ಮುಂಬೈ: ದಿಲ್ಲಿ ವಿರುದ್ಧ ಮಹಾರಾಷ್ಟ್ರ 290/2
ಹೈದರಾಬಾದ್: ಒಡಿಶಾ 228, ಸೌರಾಷ್ಟ್ರ 4/0
ಬಿಲಾಸ್‌ಪುರ: ತಮಿಳುನಾಡು 121, ರೈಲ್ವೇಸ್ 87/3
ಗುವಾಹಟಿ: ಸರ್ವಿಸಸ್ ವಿರುದ್ಧ ತ್ರಿಪುರಾ 228/7
ಅಸ್ಸಾಂ, ತಮಿಳುನಾಡು, ಹೈದರಾಬಾದ್ ಆಲೌಟ್
ಎರಡನೆ ಸುತ್ತಿನ ರಣಜಿ ಟ್ರೋಫಿಯ ಮೊದಲ ದಿನವಾದ ಗುರುವಾರ ಅಸ್ಸಾಂ, ಜಮ್ಮು-ಕಾಶ್ಮೀರ,ಹೈದರಾಬಾದ್, ಒಡಿಶಾ ಹಾಗು ತಮಿಳುನಾಡು ತಂಡಗಳು ಆಲೌಟಾಗಿವೆ.
ವಿಶಾಖಪಟ್ಟಣದಲ್ಲಿ ನಡೆದ ಬಿ ಗುಂಪಿನ ಪಂದ್ಯದಲ್ಲಿ ರಾಜಸ್ಥಾನದ ವೇಗಿ ಪಂಕಜ್ ಸಿಂಗ್(5-39) ದಾಳಿಗೆ ತತ್ತರಿಸಿದ ಅಸ್ಸಾಂ ತಂಡ 195 ರನ್‌ಗೆ ಆಲೌಟಾಗಿದೆ.
ಜೆಮ್ಶೆಡ್‌ಪುರದಲ್ಲಿ ನಡೆದ ಸಿ ಗುಂಪಿನ ಪಂದ್ಯದಲ್ಲಿ ಸ್ಪಿನ್ನರ್ ಯುಜ್ವೇಂದ್ರ ಚಾಹಲ್(6-44) ಸ್ಪಿನ್ ಮೋಡಿಗೆ ತತ್ತರಿಸಿದ ಹೈದರಾಬಾದ್ ಮೊದಲ ಇನಿಂಗ್ಸ್‌ನಲ್ಲಿ 191 ರನ್‌ಗೆ ಆಲೌಟಾಗಿದೆ.
ಬಿಲಾಸ್‌ಪುರದಲ್ಲಿ ನಡೆದ ಎ ಗುಂಪಿನ ಪಂದ್ಯದಲ್ಲಿ ಬನ್ಸಾಲ್(4-48) ದಾಳಿಗೆ ನಿರುತ್ತರವಾದ ತಮಿಳುನಾಡು ಕೇವಲ 121 ರನ್‌ಗೆ ಸರ್ವಪತನಗೊಂಡಿದೆ.
ಮೊದಲ ದಿನದಾಟದಲ್ಲಿ ಪಂಜಾಬ್ ತಂಡ ಮಧ್ಯಪ್ರದೇಶದ ವಿರುದ್ಧ ರೋಹ್ಟಕ್‌ನಲ್ಲಿ ನಡೆದ ಎ ಗುಂಪಿನ ಪಂದ್ಯದಲ್ಲಿ 3 ವಿಕೆಟ್ ನಷ್ಟಕ್ಕೆ 347 ರನ್ ಗಳಿಸಿ ಬೃಹತ್ ಮೊತ್ತದತ್ತ ಸಾಗಿದೆ.
ಯುವರಾಜ್ ಸಿಂಗ್ ಔಟಾಗದೆ 164
ಎಡಗೈ ದಾಂಡಿಗ ಯುವರಾಜ್ ಸಿಂಗ್ ಔಟಾಗದೆ ಗಳಿಸಿದ 164 ರನ್ ನೆರವಿನಿಂದ ಗುರುವಾರ ಲಾಹ್ಲಿಯಲ್ಲಿ ಆರಂಭವಾದ ರಣಜಿ ಟ್ರೋಫಿ ಪಂದ್ಯದಲ್ಲಿ ಪಂಜಾಬ್ ತಂಡ ಮಧ್ಯಪ್ರದೇಶದ ವಿರುದ್ಧ 3 ವಿಕೆಟ್ ನಷ್ಟಕ್ಕೆ 347 ರನ್ ಗಳಿಸಿದೆ.
ಟೀಮ್ ಇಂಡಿಯಾದಿಂದ ಹೊರಗುಳಿದಿರುವ ಯುವಿ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 25ನೆ ಶತಕ ಬಾರಿಸಿದರು. ಅವರು 241 ಎಸೆತಗಳನ್ನು ಎದುರಿಸಿ 24 ಬೌಂಡರಿ ಬಾರಿಸಿದ್ದರು. ಯುವಿಗೆ ಗುರುಕೀರತ್ ಮಾನ್(ಔಟಾಗದೆ 101) ಉತ್ತಮ ಸಾಥ್ ನೀಡಿದರು.







