ಕೆನಡಾ ವಿರುದ್ಧ ಭಾರತ ಅಭಿಯಾನ ಆರಂಭ
ಎಫ್‌ಐಎಚ್ ಜೂನಿಯರ್ ಹಾಕಿ ವಿಶ್ವಕಪ್

ಹೊಸದಿಲ್ಲಿ,ಅ.13: ಲಕ್ನೋದಲ್ಲಿ ಡಿಸೆಂಬರ್‌ನಲ್ಲಿ ಆರಂಭವಾಗಲಿರುವ ಎಫ್‌ಐಎಚ್ ಜೂನಿಯರ್ ಹಾಕಿ ವಿಶ್ವಕಪ್‌ನಲ್ಲಿ ಕೆನಡಾವನ್ನು ಎದುರಿಸುವ ಮೂಲಕ ಭಾರತ ತಂಡ ತನ್ನ ಅಭಿಯಾನವನ್ನು ಆರಂಭಿಸಲಿದೆ.
ಜೂನಿಯರ್ ಹಾಕಿ ವಿಶ್ವಕಪ್ ಡಿ.8ರಿಂದ 18ರ ತನಕ ನಡೆಯಲಿದೆ.
ಮೇಜರ್ ಧ್ಯಾನ್‌ಚಂದ್ ಸ್ಟೇಡಿಯಂನಲ್ಲಿ 10 ದಿನಗಳ ಕಾಲ ನಡೆಯಲಿರುವ ಹಾಕಿ ವಿಶ್ವಕಪ್‌ನಲ್ಲಿ ಹಾಕಿ ಅಭಿಮಾನಿಗಳಿಗೆ ವಿಶ್ವದ ಉದಯೋನ್ಮುಖ ಆಟಗಾರರ ಪ್ರದರ್ಶನ ನೋಡುವ ಅಪೂರ್ವ ಅವಕಾಶ ಲಭಿಸಲಿದೆ. ಈ ವರ್ಷದ ಅತ್ಯಂತ ಸ್ಪರ್ಧಾತ್ಮಕ ಹಾಕಿ ಟೂರ್ನಿಯಲ್ಲಿ ಜೂನಿಯರ್ ಪುರುಷರ ವಿಶ್ವ ಚಾಂಪಿಯನ್‌ಶಿಪ್ ಪಟ್ಟಕ್ಕಾಗಿ ಆಟಗಾರರ ನಡುವೆ ತೀವ್ರ ಪೈಪೋಟಿ ನಡೆಯುವ ನಿರೀಕ್ಷೆಯಿದೆ.
ಡಿ.8 ರಿಂದ 12ರ ತನಕ ಗ್ರೂಪ್ ಹಂತದ ಪಂದ್ಯಗಳು ನಡೆಯುತ್ತವೆ. ಡಿ.14 ರಿಂದ ಕ್ಲಾಸಿಫಿಕೇಶನ್ ಪಂದ್ಯಗಳು ಆರಂಭವಾಗುತ್ತವೆ. ಡಿ.18 ರಂದು ಫೈನಲ್ ಪಂದ್ಯ ನಿಗದಿಯಾಗಿದೆ.
ಟೂರ್ನಿಯಲ್ಲಿ ಆತಿಥೇಯ ಭಾರತ ತಂಡ ಕೆನಡಾ,ನ್ಯೂಝಿಲೆಂಡ್ ಹಾಗೂ ಜಪಾನ್ ವಿರುದ್ಧ ಸವಾಲು ಎದುರಿಸಲಿದೆ. ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಜರ್ಮನಿ ತಂಡ ಸ್ಪೇನ್ ತಂಡವನ್ನು ಎದುರಿಸಲಿದೆ.
ಎರಡನೆ ದಿನ ಒಶಿಯಾನಿಯ ಚಾಂಪಿಯನ್ ಆಸ್ಟ್ರೇಲಿಯ ತಂಡ ಕೊರಿಯಾವನ್ನು ಎದುರಿಸಲಿದೆ. ಹಾಲೆಂಡ್ ಹಾಗೂ ಪಾಕಿಸ್ತಾನ ನಡುವಿನ ಪಂದ್ಯ ಕುತೂಹಲ ಕೆರಳಿಸಿದೆ. ಶನಿವಾರ ಪಾನ್ ಅಮೆರಿಕ ಹಾಗೂ ಒಶಿಯಾನಿಯ ಚಾಂಪಿಯನ್ ಆಸ್ಟ್ರೇಲಿಯ ಹಾಗೂ ಅರ್ಜೆಂಟೀನ ಮುಖಾಮುಖಿಯಾಗಲಿವೆ. ಅದೇ ದಿನ ಹಳೆ ಎದುರಾಳಿಗಳಾದ ಭಾರತ ಹಾಗೂ ಇಂಗ್ಲೆಂಡ್ ಸೆಣಸಾಡಲಿವೆ.
ರವಿವಾರ ಬೆಲ್ಜಿಯಂ ಹಾಗೂ ಹಾಲೆಂಡ್ ತಂಡಗಳು, ಪಾಕಿಸ್ತಾನ ಹಾಗೂ ಈಜಿಪ್ಟ್‌ನ ನಡುವೆ ನಡೆಯಲಿದೆ. ಸೋಮವಾರ ಸಂಜೆ ನಡೆಯಲಿರುವ ಕೊನೆಯ ಗ್ರೂಪ್ ಪಂದ್ಯದಲ್ಲಿ ಆಸ್ಟ್ರೀಯ ಹಾಗೂ ಆಸ್ಟ್ರೇಲಿಯ, ಭಾರತ ಹಾಗೂ ದಕ್ಷಿಣ ಆಫ್ರಿಕದ ನಡುವೆ ನಿರ್ಣಾಯಕ ಪಂದ್ಯ ನಡೆಯಲಿದೆ. ಭಾರತ ‘ಡಿ’ ಗುಂಪಿನಲ್ಲಿ ಕೆನಡಾ, ದಕ್ಷಿಣ ಆಫ್ರಿಕ ಹಾಗೂ ಇಂಗ್ಲೆಂಡ್ ತಂಡದೊಂದಿಗೆ ಸ್ಥಾನ ಪಡೆದಿದೆ.







