ದ.ಕ. ಜಿಲ್ಲಾಮಟ್ಟದ ಅಧ್ಯಯನ ಶಿಬಿರ: ವಿಚಾರ ವಿನಿಮಯ: ಅ.17ರಂದು ಸಮಸ್ತದ ಮದ್ರಸಗಳಿಗೆ ರಜೆ
ಮಂಗಳೂರು, ಅ.13: ದ.ಕ. ಹಾಗೂ ಉಡುಪಿ ಜಿಲ್ಲೆಯ ಸುಮಾರು 450 ಮದ್ರಸಗಳ ನೇತೃತ್ವ ವಹಿಸಿರುವ ಜಿಲ್ಲಾ ಮದ್ರಸ ಮ್ಯಾನೇಜ್‌ಮೆಂಟ್ ಅಸೋಸಿಯೇಷನ್ ಹಾಗೂ ಜಿಲ್ಲಾ ಜಂಇಯ್ಯತುಲ್ ಮುಅಲ್ಲಿಮೀನ್ ಸಮಸ್ತ ಇಸ್ಲಾಮ್ ಮತವಿದ್ಯಾಭ್ಯಾಸ ಬೋರ್ಡ್‌ನ ಆಶ್ರಯದಲ್ಲಿ ಅ.17ರಂದು ಜಿಲ್ಲಾಮಟ್ಟದ ಅಧ್ಯಯನ ಶಿಬಿರ ಹಾಗೂ ವಿಚಾರ ವಿನಿಮಯ ಕಾರ್ಯಕ್ರಮ ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿಂದು ಈ ವಿಷಯ ತಿಳಿಸಿದ ಅಸೋಸಿಯೇಶನ್‌ನ ಪ್ರ.ಕಾರ್ಯದರ್ಶಿ ಮುಹಮ್ಮದ್ ರಫೀಕ್, ಕಾರ್ಯಕ್ರಮದ ಅಂಗವಾಗಿ ಅಂದು ಸಮಸ್ತದ ಎಲ್ಲ ಮದ್ರಸಗಳಿಗೆ ರಜೆ ಘೋಷಿಸಿರುವುದಾಗಿ ತಿಳಿಸಿದರು. ನಗರದ ಪುರಭವನದಲ್ಲಿ ಬೆಳಗ್ಗೆ 9ರಿಂದ ಮಧ್ಯಾಹ್ನ 2ರವರೆಗೆ ಈ ಕಾರ್ಯಕ್ರಮ ನಡೆಯಲಿದ್ದು, ಜಿಲ್ಲಾ ಖಾಝಿ ತ್ವಾಕಾ ಅಹ್ಮದ್ ಮುಸ್ಲಿಯಾರ್ ಸಲಾಲ ಕಾರ್ಯಕ್ರಮ ಅಧ್ಯಕ್ಷತೆ ವಹಿಸುವರು ಹಾಗೂ ಕೇಂದ್ರ ಮುಶಾವರ ಸದಸ್ಯ ಶೈಖುನಾ ಮಿತ್ತಬೈಲು ಜಬ್ಬಾರ್ ಉಸ್ತಾದ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಬೆಳಗ್ಗೆ 8:30ಕ್ಕೆ ಬಂದರಿನ ಸೈಯದ್ ಜಲಾಲ್ ವೌಲಾರವರ ದರ್ಗಾ ಝಿಯಾರತ್‌ನೊಂದಿಗೆ ಪ್ರಾರಂಭಗೊಳ್ಳುವ ಕಾರ್ಯಕ್ರಮಕ್ಕೆ ಮ್ಯಾನೇಜ್‌ಮೆಂಟ್ ಅಧ್ಯಕ್ಷ ಐ.ಮೊಯ್ದಿನಬ್ಬ ಹಾಜಿ ಧ್ವಜಾರೋಹಣದೊಂದಿಗೆ ಚಾಲನೆ ನೀಡುವರು. 10ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದೆ ಎಂದವರು ಹೇಳಿದರು. ಈ ಸಂದರ್ಭ ಒಂದು ಕೋ.ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ಸಮಸ್ತದ ಜಿಲ್ಲಾ ಕಚೇರಿ ಸಮುಚ್ಚಯದ ಸಭಾಭವನ ಹಾಗೂ ವಾಣಿಜ್ಯ ಸಂಕೀರ್ಣದ ಉದ್ಧೇೀಶಿತ ನಕಾಶೆಯನ್ನು ಚೆಮ್ಮಾಡ್ ದಾರುಲ್ ಹುದಾ ಯುನಿವರ್ಸಿಟಿ ಉಪಕುಲಪತಿ ಡಾ.ಬಹಾವುದ್ದೀನ್ ಮುಹಮ್ಮದ್ ನಖ್ವಿ ಅನಾವರಣಗೊಳಿಸಲಿದ್ದಾರೆ ಎಂದರು.
ಈ ಹಿನ್ನೆಲೆಯಲ್ಲಿ ಎಸ್‌ಕೆಐಎಂವಿ ಬೋರ್ಡ್ ಚೋಲಾರಿ ನಿವೃತ್ತ ವ್ಯವಸ್ಥಾಪಕ ಪಿನಂಗೋಡ್ ಅಬೂಬಕರ್ ಹಾಜಿ ತರಬೇತಿ ಹಾಗೂ ಮಾಹಿತಿ ಕಾರ್ಯಾಗಾರ ನಡೆಸಲಿರುವರು ಎಂದವರು ಮಾಹಿತಿ ನೀಡಿದರು.





