ಕುಂದಾಪುರ: 100 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ
ಕುಂದಾಪುರ, ಅ.13: ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಸೊಸೈಟಿ ಕೊಡಮಾಡುವ 10 ಲಕ್ಷ ರೂ.ಮೊತ್ತದ ವಿದ್ಯಾರ್ಥಿ ವೇತನವನ್ನು ಇಂದು 100 ಮಂದಿ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು. ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಸೊಸೈಟಿ ಪ್ರತಿನಿಧಿಯಾಗಿ ನಾಗರಾಜ ಶೆಟ್ಟಿ ಅವರು ವಿದ್ಯಾರ್ಥಿವೇತನವನ್ನು ವಿತರಿಸಿ ವಿದ್ಯಾರ್ಥಿಗಳಿಗೆ ಶುಭ ಕೋರಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಣಿಪಾಲದ ಅಕಾಡೆಮಿ ಆಪ್ ಜನರಲ್ ಎಜುಕೇಶನ್ ಆಡಳಿತಾಧಿಕಾರಿ ಡಾ.ಎಚ್.ಶಾಂತಾರಾಮ್, ವಿದ್ಯಾರ್ಥಿಗಳು ಜೀವನದಲ್ಲಿ ಯಶಸ್ಸು ಕಂಡಾಗ ತಾವು ಕಲಿತ ವಿದ್ಯಾಸಂಸ್ಥೆಯನ್ನು ಮರೆಯಬಾರದು ಎಂಬ ಧ್ಯೇಯದೊಂದಿಗೆ ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಸೊಸೈಟಿ ವಿದ್ಯಾರ್ಥಿಗಳಿಗೆ ಉತ್ತಮ ಮೇಲ್ಪಂಕ್ತಿ ಹಾಕಿ ಕೊಟ್ಟಿದೆ ಎಂದರು.
ಪಾಲಕರ ಪರವಾಗಿ ಅನಿಸಿಕೆ ವ್ಯಕ್ತಪಡಿಸಿದ ಎಂ.ಎಸ್ ಸತ್ಯವತಿ, ಇದು ದೇವರು ಹಾಗೂ ಸಮಾಜ ಮೆಚ್ಚುವಂತಹ ಕೆಲಸವಾಗಿದೆ. ತಾನು ಗಳಿಸಿದ್ದನ್ನು ಎಲ್ಲರೂ ಹಂಚಿ ತಿನ್ನುವ ಮನೋಭಾವವಿದು. ಪಡೆದ ನಮಗೆ ತೃಪ್ತಿಯ ಅನುಭವವಾದರೆ ನೀಡಿದ ಅವರಿಗೆ ಧನ್ಯತೆಯ ಭಾವವಿದಾಗುತ್ತದೆ ಎಂದರು.
ವಿದ್ಯಾರ್ಥಿವೇತನ ಪಡೆದ ವಿದ್ಯಾರ್ಥಿಗಳ ಪರವಾಗಿ ಎಂ.ಕಾಂ ಅಂತಿಮ ವರ್ಷದ ವಿದ್ಯಾರ್ಥಿ ಅರ್ಜುನ್ ಮಾತನಾಡಿ, ಹಣವಂತರು ದೇವಸ್ಥಾನ ಅಥವಾ ಬೇರೆ ಎಲ್ಲೋ ಹಣವನ್ನು ದಾನ ಮಾಡುವ ಬದಲು ಈ ರೀತಿಯಾಗಿ ಸಮಾಜದಲ್ಲಿ ಅಗತ್ಯತೆ ಇರುವವರಿಗೆ ಆರ್ಥಿಕ ಸಹಾಯ ನೀಡಿದರೆ ಖಂಡಿತ ಆ ಹಣವು ಸಾರ್ಥಕ್ಯವನ್ನು ಪಡೆಯುತ್ತದೆ ಎಂದರು.
ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಎನ್.ಪಿ. ನಾರಾಯಣ ಶೆಟ್ಟಿ ಸ್ವಾಗತಿಸಿದರು. ಕಾಲೇಜಿನ ವಿದ್ಯಾರ್ಥಿಕ್ಷೇಮಪಾಲನಾಧಿಕಾರಿ ಪ್ರೊ.ಅರುಣಾಚಲ ಮಯ್ಯ ಕಾರ್ಯಕ್ರಮ ನಿರ್ವಹಿಸಿದರು. ಉಪನ್ಯಾಸಕ ಅರುಣ ಎ.ಎಸ್. ವಿದ್ಯಾರ್ಥಿವೇತನ ಪಡೆದ ವಿದ್ಯಾರ್ಥಿಗಳ ಯಾದಿಯನ್ನು ವಾಚಿಸಿದರು.







