ಶಿವಸೇನೆ ಕಾರ್ಯಕರ್ತರಿಂದ ಕೊಲೆಗೆ ಯತ್ನ ಬಿಜೆಪಿ ಸಂಸದ ದೂರು
ಮುಂಬೈ, ಅ.13: ಶಿವಸೇನೆಯ ಕಾರ್ಯಕರ್ತರು ತನ್ನ ಕೊಲೆಗೆ ಯತ್ನಿಸಿದ್ದರು ಎಂದು ದೂರಿರುವ ಬಿಜೆಪಿ ಸಂಸದ ಕಿರೀಟ್ ಸೋಮೈಯಾ, ಈ ಪ್ರಕರಣದ ತನಿಖೆ ನಡೆಸುವಂತೆ ಕೋರಿ ಮುಂಬೈ ಪೊಲೀಸ್ ಕಮಿಷನರ್‌ಗೆ ಪತ್ರ ಬರೆದಿದ್ದಾರೆ. ಮುಲುಂದ್ ಉಪನಗರದಲ್ಲಿ ಕಿರೀಟ್ ಸೋಮೈಯಾ ದಸರಾ ಪ್ರಯುಕ್ತ ಸಮಾರಂಭವೊಂದನ್ನು ಆಯೋಜಿಸಿದ್ದು, ಇದರಲ್ಲಿ ಗ್ರೇಟರ್ ಮುಂಬೈ ಮಹಾನಗರ ಪಾಲಿಕೆ ಯಲ್ಲಿರುವ ಭ್ರಷ್ಟಾಚಾರ ಮಾಫಿ ಯಾದ ಪ್ರತಿಕೃತಿ ದಹಿಸುವ ಕಾರ್ಯ ಕ್ರಮವಿತ್ತು.
ಆದರೆ, ನಗರ ಪಾಲಿಕೆಯಲ್ಲಿ ಶಿವಸೇನೆ ಅಧಿಕಾರದಲ್ಲಿರುವ ಕಾರಣ ಸೇನೆಯ ಕಾರ್ಯಕರ್ತರು ಪ್ರತಿಕೃತಿ ದಹನವನ್ನು ವಿರೋಧಿಸಿ, ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದ್ದರು. ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಹಬಂದಿಗೆ ತಂದಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇದುವರೆಗೆ ಬಿಜೆಪಿ ಕಾರ್ಯಕರ್ತರೂ ಸೇರಿದಂತೆ ಒಟ್ಟು 13 ಮಂದಿಯನ್ನು ಬಂಧಿಸಿದ್ದಾರೆ. ಮುಂಬೈ ನಗರಪಾಲಿಕೆಯಲ್ಲಿ ಕಳೆದ 20 ವರ್ಷಗಳಿಂದ ಶಿವಸೇನೆ- ಬಿಜೆಪಿ ಮೈತ್ರಿಕೂಟದ ಆಡಳಿತವಿದೆ. ಬಿಜೆಪಿ ಮುಂಬೈ ಘಟಕದ ಮಾಜಿ ಅಧ್ಯಕ್ಷ, ಹಾಲಿ ಸಂಸದ ಕಿರೀಟ್ ಸೋಮೈಯಾ, ಮುಂಬೈ ನಗರಪಾಲಿಕೆಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ಹಲವಾರು ಬಾರಿ ಆರೋಪಿಸಿದ್ದು, ಇದರ ವಿರುದ್ಧ ತನ್ನ ಹೋರಾಟ ಮುಂದುವರಿಯಲಿದೆ ಎಂದು ತಿಳಿಸಿದ್ದಾರೆ.





