ತಾಯಿಯೊಬ್ಬಳು ಮಗಳ ಮಾನವನ್ನು ಒತ್ತೆಯಿಡಲಾರಳು: ಹೈಕೋರ್ಟ್
ಹೊಸದಿಲ್ಲಿ, ಅ.13: ಯಾರನ್ನೋ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಸಿಲುಕಿಸುವುದಕ್ಕಾಗಿ ತಾಯಿಯೊಬ್ಬಳು ತನ್ನ ಮಗುವಿನ ಮರ್ಯಾದೆಯನ್ನು ಒತ್ತೆಯಿಡಲಾರಳೆಂದು ಹೇಳಿರುವ ದಿಲ್ಲಿ ಹೈಕೋರ್ಟ್, 60ರ ಹರೆಯದ ವ್ಯಕ್ತಿಯೊಬ್ಬನ ಅಪರಾಧ ಹಾಗೂ ಅವನಿಗೆ ವಿಧಿಸಲಾಗಿರುವ 6 ತಿಂಗಳ ಸೆರೆವಾಸ ಶಿಕ್ಷೆಯನ್ನು ಎತ್ತಿ ಹಿಡಿದಿದೆ.
ತನ್ನನ್ನು ಪ್ರಕರಣದಲ್ಲಿ ತಪ್ಪಾಗಿ ಸಿಲುಕಿಸಲಾಗಿದೆ. ಹುಡುಗಿಯ ತಾಯಿ ತನ್ನಿಂದ ಖರೀದಿಸಿದ್ದ ಸಾಮಗ್ರಿಗಳಿಗೆ ಹಣ ನೀಡುವುದನ್ನು ತಪ್ಪಿಸಿಕೊಳ್ಳಲು ತನ್ನ ಮೇಲೆ ಸುಳ್ಳು ಆರೋಪ ಮಾಡಿದ್ದಾಳೆಂಬ ಅಪರಾಧಿಯ ವಾದ ‘ಅರ್ಹತೆಯಿಲ್ಲದುದಾಗಿದೆ’ ಆತನಿಂದ ಹುಡುಗಿಯ ತಾಯಿ ಯಾವುದೇ ವಸ್ತು ಖರೀದಿಸಿರುವುದಕ್ಕೆ ಆತ ಸಾಕ್ಷ ಒದಗಿಸಿಲ್ಲವೆಂದು ನ್ಯಾಯಮೂರ್ತಿ ಎಸ್.ಪಿ. ಗರ್ಗ್ ಹೇಳಿದ್ದಾರೆ.
ಯಾವುದೇ ಪೂರ್ವದ್ವೇಷ ಅಥವಾ ಕೆಟ್ಟ ಅಭಿಪ್ರಾಯವಿಲ್ಲದ 60ರ ಹರೆಯದ ವ್ಯಕ್ತಿಯೊಬ್ಬನ ವಿರುದ್ಧ ಸುಳ್ಳು ಹೇಳಿಕೆ ನೀಡುವಂತ ಯಾವ ಅಗತ್ಯವೂ ಹುಡುಗಿಗಿಲ್ಲ. ಆಕೆಯ ತಾಯಿ ಕೆಲವು ತಿಂಡಿ ಪದಾರ್ಥಗಳನ್ನು ಸಾಲವಾಗಿ ಖರೀದಿಸಿದ್ದಳು. ಅದರ ಹಣವನ್ನು ಹಿಂದಿರುಗಿಸಲಾಗದೆ, ಅದರಿಂದ ತಪ್ಪಿಸಿಕೊಳ್ಳಲು ಸುಳ್ಳು ಆರೋಪ ಮಾಡಿದ್ದಾಳೆಂಬ ವಾದಿಯ ಪ್ರತಿಪಾದನೆ ನಂಬುವಂತಹದಲ್ಲ. ಇಂತಹ ಸಣ್ಣ ಕಾರಣಕ್ಕಾಗಿ ತಾಯೊಬ್ಬಳು ಮಗಳ ಮಾನ ಒತ್ತೆಯಿಡಲಾರಳೆಂದು ನ್ಯಾಯಮೂರ್ತಿ ಅಭಿಪ್ರಾಯಿಸಿದ್ದಾರೆ.
ಕಡಲೆಕಾಯಿ ಹಾಗೂ ‘ಗಜ್ಜಕ್’ಗಳನ್ನು ತಳ್ಳುಗಾಡಿಯಲ್ಲಿ ಮಾರುತ್ತಿದ್ದ 60ರ ಹರೆಯದ ಆರೋಪಿ, 2008ರ ಜ.10ರಂದು ಅಪ್ರಾಪ್ತ ವಯಸ್ಕ ಬಾಲಕಿಯನ್ನು ತನ್ನ ಮನೆಗೊಯ್ದು ಬಂಧಿಸಿ, ಲೈಂಗಿಕ ಕಿರುಕುಳ ನೀಡಿದ್ದನೆಂದು ಪ್ರಾಸಿಕ್ಯೂಶನ್ ಆರೋಪಿಸಿತ್ತು.







