ಅ.16ರಿಂದ ಭಾರತ-ನ್ಯೂಝಿಲೆಂಡ್ ಏಕದಿನ ಸರಣಿ

ಹೊಸದಿಲ್ಲಿ, .13: ಭಾರತ ಮತ್ತು ನ್ಯೂಝಿಲೆಂಡ್ ತಂಡಗಳ ನಡುವೆ ಐದು ಏಕದಿನ ಸರಣಿ ಅಕ್ಟೋಬರ್ 16ರಿಂದ ಆರಂಭಗೊಳ್ಳಲಿದೆ.
ಭಾರತ ಮತ್ತು ನ್ಯೂಝಿಲೆಂಡ್ ತಂಡಗಳ ನಡುವೆ 1975ರಿಂದ ಈ ತನಕ 93 ಏಕದಿನ ಪಂದ್ಯಗಳು ನಡೆದಿವೆ. ಈ ಪೈಕಿ 46ರಲ್ಲಿ ಭಾರತ ಮತ್ತು 41ರಲ್ಲಿ ನ್ಯೂಝಿಲೆಂಡ್ ಗೆಲುವು ದಾಖಲಿಸಿದೆ.1 ಪಂದ್ಯ ಟೈ ಮತ್ತು 5 ಪಂದ್ಯಗಳು ಫಲಿತಾಂಶವಿಲ್ಲದೆ ರದ್ದಾಗಿದೆ.
ನ್ಯೂಝಿಲೆಂಡ್ -ಭಾರತ ತಂಡಗಳು 1975ರ ವಿಶ್ವಕಪ್‌ನಲ್ಲಿ ಮೊದಲ ಬಾರಿ ಮುಖಾಮುಖಿಯಾಗಿತ್ತು. ಈ ಪಂದ್ಯದಲ್ಲಿ ಭಾರತ ವಿರುದ್ಧ ನ್ಯೂಝಿಲೆಂಡ್ 4 ವಿಕೆಟ್‌ಗಳ ಜಯ ಗಳಿಸಿತ್ತು. 1975, ಜೂನ್ 14ರಂದು ನಡೆದ ಪಂದ್ಯದಲ್ಲಿ ನ್ಯೂಝಿಲೆಂಡ್ ನಾಯಕ ಗ್ಲೆನ್ ಟರ್ನರ್ ಶತಕ (ಔಟಾಗದೆ 114) ದಾಖಲಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಟಾಸ್ ಜಯಿಸಿ ಬ್ಯಾಟಿಂಗ್ ಆಯ್ದುಕೊಂಡ ಭಾರತ ನಿಗದಿತ 60 ಓವರ್‌ಗಳಲ್ಲಿ 230 ರನ್ ಗಳಿಸಿತ್ತು. ನ್ಯೂಝಿಲೆಂಡ್ ಇನ್ನೂ 7 ಎಸೆತಗಳು ಬಾಕಿ ಇರುವಾಗಲೇ 6 ವಿಕೆಟ್ ನಷ್ಟದಲ್ಲಿ 233 ರನ್ ಗಳಿಸಿ ತಂಡದ ಗೆಲುವು ದಾಖಲಿಸಿತ್ತು. ಮುಂದೆ ಮೂರು ಪಂದ್ಯಗಳಲ್ಲೂ ನ್ಯೂಝಿಲೆಂಡ್ ಗೆಲುವು ದಾಖಲಿಸಿತ್ತು.
ಮೊದಲ ಗೆಲುವು: 1980, ಡಿ.9ರಂದು ಪರ್ತ್‌ನಲ್ಲಿ ನಡೆದ ಬೆನ್ಸನ್ ಆ್ಯಂಡ್ ಹೆಡ್ಜೆಸ್ ವರ್ಲ್ಡ್ ಸಿರೀಸ್ ಕಪ್‌ನಲ್ಲಿ ಭಾರತ 162 ರನ್‌ಗಳಿಗೆ ಆಲೌಟಾಗಿತ್ತು. ರಿಚರ್ಡ್ ಹ್ಯಾಡ್ಲಿ 32ಕ್ಕೆ 5 ವಿಕೆಟ್ ಪಡೆದಿದ್ದರು. ಸಂದೀಪ್ ಪಟೇಲ್ (39) ಗರಿಷ್ಠ ಸ್ಕೋರ್ ದಾಖಲಿಸಿದ್ದರು. ಈ ಪಂದ್ಯದಲ್ಲಿ ರೋಜರ್ ಬಿನ್ನಿ ದಾಳಿಗೆ ಸಿಲುಕಿದ್ದ ನ್ಯೂಝಿಲೆಂಡ್ 157 ರನ್‌ಗಳಿಗೆ ಆಲೌಟಾಗಿತ್ತು. ಇದರೊಂದಿಗೆ ಭಾರತ 5 ರನ್‌ಗಳ ರೋಚಕ ಜಯ ದಾಖಲಿಸಿತ್ತು. ಇದು ನ್ಯೂಝಿಲೆಂಡ್ ವಿರುದ್ಧ ಭಾರತದ ಮೊದಲ ವಿಜಯ.ಅದೇ ಸರಣಿಯಲ್ಲಿ ಭಾರತ ಡಿ.23ರಂದು ಆಡಿಲೇಡ್ ಓವಲ್‌ನಲ್ಲಿ ನ್ಯೂಝಿಲೆಂಡ್ ವಿರುದ್ಧ 6 ರನ್‌ಗಳ ಗೆಲುವಿನೊಂದಿಗೆ ಎರಡನೆ ಜಯ ದಾಖಲಿಸಿತ್ತು.ಯಶ್ಪಾಲ್ ಶರ್ಮ 72 ರನ್ ದಾಖಲಿಸಿದ್ದರು.
ಮೂರನೆ ಗೆಲುವಿಗೆ ಐದು ವರ್ಷ: ಮೂರನೆ ಗೆಲುವಿಗಾಗಿ ಭಾರತ ಮತ್ತೆ ಐದು ವರ್ಷಗಳ ಕಾಲ ಕಾಯಬೇಕಾಯಿತು. 1985, ಮಾ.5ರಂದು ಸಿಡ್ನಿಯಲ್ಲಿ ನಡೆದ ಬೆನ್ಸನ್ ಆ್ಯಂಡ್ ಹೆಡ್ಜಸ್ ವರ್ಲ್ಡ್ ಚಾಂಪಿಯನ್‌ಶಿಪ್‌ನ ಸೆಮಿಫೈನಲ್‌ನಲ್ಲಿ ಭಾರತ ಮೂರನೆ ಗೆಲುವು ದಾಖಲಿಸಿತ್ತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಅವಕಾಶ ಪಡೆದ ನ್ಯೂಝಿಲೆಂಡ್ 266ಕ್ಕೆ ಆಲೌಟ್ ಆಗಿತ್ತು. ಭಾರತ 43.3 ಓವರ್‌ಗಳಲ್ಲಿ 207 ರನ್ ಗಳಿಸಿ ಗೆಲುವು ದಾಖಲಿಸಿತ್ತು. ಮದನ್‌ಲಾಲ್(37ಕ್ಕೆ 4) ಮತ್ತು ರವಿ ಶಾಸ್ತ್ರಿ(31ಕ್ಕೆ 3) ಬೌಲಿಂಗ್‌ನಲ್ಲಿ ಮಿಂಚಿದರು. ಶಾಸ್ತ್ರಿ 53, ಕಪಿಲ್ ದೇವ್ 54 ರನ್, ವೆಂಗ್‌ಸರ್ಕಾರ್ 63 ರನ್ ಗಳಿಸಿದರು. ಕಪಿಲ್ ದೇವ್ ಮತ್ತು ವೆಂಗ್‌ಸರ್ಕಾರ್ 105 ರನ್‌ಗಳ ಜೊತೆಯಾಟ ನೀಡಿ ತಂಡದ ಗೆಲುವಿನಲ್ಲಿ ದೊಡ್ಡ ಕೊಡುಗೆ ನೀಡಿದರು. ಮುಂದೆ ಭಾರತ ವರ್ಲ್ಡ್ ಚಾಂಪಿಯನ್‌ಶಿಪ್ ಕಿರೀಟ ಧರಿಸಿತ್ತು.
1986, ಜನವರಿ 25ರಿಂದ ರಿಂದ 1988, ಡಿ.17ರ ತನಕ ಸತತ 11 ಏಕದಿನ ಪಂದ್ಯಗಳಲ್ಲಿ ಭಾರತ ಸತತ ಗೆಲುವಿನೊಂದಿಗೆ ದಾಖಲೆ ಬರೆದಿತ್ತು. ಕಳೆದ ಐದು ಪಂದ್ಯಗಳಲ್ಲಿ ನ್ಯೂಝಿಲೆಂಡ್ 4ರಲ್ಲಿ ಗೆಲುವು ದಾಖಲಿಸಿದೆ. 1ಪಂದ್ಯ ಟೈ ಆಗಿದೆ.
ರೋಚಕ ಟೈ: ಆಕ್ಲೆಂಡ್‌ನಲ್ಲಿ ಜನವರಿ 25, 2014ರಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತ ನ್ಯೂಝಿಲೆಂಡ್ ಗಪ್ಟಿಲ್(111) ಮತ್ತು ವಿಲಿಯಮ್ಸನ್(65) ನೆರವಿನಲ್ಲಿ ನ್ಯೂಝಿಲೆಂಡ್ 50 ಓವರ್‌ಗಳಲ್ಲಿ 314 ರನ್ ಗಳಿಸಿತ್ತು. ಭಾರತ ಧೋನಿ (50), ಅಶ್ವಿನ್ (65) ಮತ್ತು ಜಡೇಜ(ಔಟಾಗದೆ 66) ನೆರವಿನಲ್ಲಿ 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟದಲ್ಲಿ 314 ರನ್ ಗಳಿಸಲಷ್ಟೇ ಶಕ್ತವಾಗಿತ್ತು. ಕೊನೆಯ ಓವರ್‌ನಲ್ಲಿ ಭಾರತಕ್ಕೆ ಗೆಲ್ಲಲು 18 ರನ್ ಬೇಕಾಗಿತ್ತು. ರವೀಂದ್ರ ಜಡೇಜ ಅವರು ಆ್ಯಂಡರ್ಸನ್ ಓವರ್‌ನಲ್ಲಿ 1 ಸಿಕ್ಸರ್ ಮತ್ತು 2 ಬೌಂಡರಿ ಇರುವ 16ರನ್ ಗಳಿಸಿದರು. 2 ರನ್ ವೈಡ್ ಮೂಲಕ ಬಂತು. ಕೊನೆಯ ಎಸೆತದಲ್ಲಿ 2 ರನ್ ಮಾಡಬೇಕಿತ್ತು. ಆದರೆ ಜಡೇಜಗೆ 1 ರನ್ ಮಾಡಲು ಸಾಧ್ಯವಾಗಿತ್ತು. ಈ ಕಾರಣದಿಂದಾಗಿ ಪಂದ್ಯ ಟೈನಲ್ಲಿ ಕೊನೆಗೊಂಡಿತ್ತು. ಜಡೇಜ ಆಲ್‌ರೌಂಡ್ ಪ್ರದರ್ಶನದ ನೆರವಿನಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು.
ಕೊನೆಯ ಪಂದ್ಯ: ಉಭಯ ತಂಡಗಳ ನಡುವೆ ಕೊನೆಯ ಏಕದಿನ ಪಂದ್ಯ ಜನವರಿ 31, 2014ರಲ್ಲಿ ವೆಲ್ಲಿಂಗ್‌ಟನ್‌ನಲ್ಲಿ ನಡೆದಿತ್ತು. ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ನ್ಯೂಝಿಲೆಂಡ್ ರಾಸ್ ಟೇಲರ್(102) ಮತ್ತು ವಿಲಿಯಮ್ಸನ್(88) ನೆರವಿನಲ್ಲಿ ನ್ಯೂಝಿಲೆಂಡ್ ನಿಗದಿತ 50 ಓವರ್‌ಗಳಲ್ಲಿ 5 ವಿಕೆಟ್ ನಷ್ಟದಲ್ಲಿ 303 ರನ್ ಗಳಿಸಿತ್ತು. ಭಾರತ 49.4 ಓವರ್‌ಗಳಲ್ಲಿ 216 ರನ್‌ಗಳಿಗೆ ಆಲೌಟಾಗಿತ್ತು. ಇದರೊಂದಿಗೆ ಭಾರತ 87 ರನ್‌ಗಳ ಸೋಲು ಅನುಭವಿಸಿತ್ತು. ಉಪನಾಯಕ ವಿರಾಟ್ ಕೊಹ್ಲಿ 82ರನ್ ಮತ್ತು ನಾಯಕ ಧೋನಿ 47 ರನ್ ಗಳಿಸಿ ಹೋರಾಟ ನಡೆಸಿದರೂ ತಂಡ ಗೆಲುವಿನ ದಡ ಸೇರಲಿಲ್ಲ.
ಧೋನಿಗೆ ಸವಾಲು: ಇತ್ತೀಚೆಗೆ ನಡೆದ ಟೆಸ್ಟ್ ಸರಣಿಯಲ್ಲಿ ವಿರಾಟ್ ಕೊಹ್ಲಿ ನಾಯಕತ್ವದ ಟೀಮ್ ಇಂಡಿಯಾ 3-0 ಅಂತರದಲ್ಲಿ ಕ್ಲೀನ್ ಸ್ವೀಪ್ ಸಾಧಿಸಿತ್ತು. ಉಭಯ ತಂಡಗಳ ಕೆಲವು ಬ್ಯಾಟ್ಸ್‌ಮನ್ ಮತ್ತು ಬೌಲರ್‌ಗಳಿಂದ ಉತ್ತಮ ಪ್ರದರ್ಶನ ಕಂಡು ಬಂದಿದೆ. ಆದರೆ ಇದೀಗ ಏಕದಿನ ಸರಣಿಯಲ್ಲಿ ಧೋನಿ ತಂಡವನ್ನು ಮುನ್ನಡೆಸುತ್ತಿದ್ದಾರೆ.
ರವಿಚಂದ್ರನ್ ಅಶ್ವಿನ್ ಪಂದ್ಯಶ್ರೇಷ್ಠ ಮತ್ತು ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು. ಜಡೇಜ ಸರಣಿಯಲ್ಲಿ ಬೌಲಿಂಗ್‌ನಲ್ಲಿ ಉತ್ತಮ ಕೊಡುಗೆ ನೀಡಿದ್ದರು. ಇಬ್ಬರು ಆಟಗಾರರಿಗೂ ವಿಶ್ರಾಂತಿ ನೀಡಲಾಗಿದೆ. ಈ ಕಾರಣದಿಂದಾಗಿ ಸ್ಪಿನ್ನರ್‌ಗಳಾದ ಅಮಿತ್ ಮಿಶ್ರಾ ಮತ್ತು ಅಕ್ಷರ್ ಪಟೇಲ್ ಅವರನ್ನು ತಂಡ ಅತಿಯಾಗಿ ಅವಲಂಬಿಸುವಂತಾಗಿದೆ.
ಮೊದಲ 3 ಪಂದ್ಯಗಳಿಗೆ ಭಾರತ ತಂಡ:ಎಂ.ಎಸ್.ಧೋನಿ(ನಾಯಕ/ವಿಕೆಟ್ ಕೀಪರ್), ಜಸ್‌ಪ್ರೀತ್ ಬುಮ್ರಾ, ಕೇದಾರ್ ಜಾಧವ್, ವಿರಾಟ್ ಕೊಹ್ಲಿ, ಧವಳ್ ಕುಲಕರ್ಣಿ, ಮನ್‌ದೀಪ್ ಸಿಂಗ್, ಅಮಿತ್ ಮಿಶ್ರಾ, ಮನೀಷ್ ಪಾಂಡೆ, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಅಜಿಂಕ್ಯ ರಹಾನೆ, ಸುರೇಶ್ ರೈನಾ, ರೋಹಿತ್ ಶರ್ಮ, ಜಯಂತ್ ಯಾದವ್, ಉಮೇಶ್ ಯಾದವ್.
ನ್ಯೂಝಿಲೆಂಡ್: ಕೇನ್ ವಿಲಿಯಮ್ಸನ್(ನಾಯಕ), ಕೋರಿ ಆ್ಯಂಡರ್ಸನ್, ಟ್ರೆಂಟ್ ಬೌಲ್ಟ್, ಡಗ್ ಬ್ರಾಸ್‌ವೆಲ್, ಆ್ಯಂಟನ್ ಡೇವಿಚ್,ಮಾರ್ಟಿನ್ ಗಪ್ಟಿಲ್, ಮ್ಯಾಟ್ ಹೆನ್ರಿ, ಟಾಮ್ ಲಥಾಮ್, ಜೇಮ್ಸ್ ನಿಶಮ್, ಲೂಕ್ ರೊಂಚಿ(ವಿಕೆಟ್ ಕೀಪರ್), ಮಿಚೆಲ್ ಸ್ಯಾಂಟ್ನೆರ್, ಐಶ್ ಸೋಧಿ, ಟಿಮ್ ಸೌಥಿ, ರಾಸ್ ಟೇಲರ್, ಬಿ.ಜೆ. ವಾಟ್ಲಿಂಗ್(ವಿಕೆಟ್ ಕೀಪರ್).
4-1ಅಂತರದಲ್ಲಿ ಸರಣಿ ಜಯಿಸಿದರೆ ನಂ.3 ಸ್ಥಾನಕ್ಕೆ ಭಡ್ತಿ: ಐಸಿಸಿ ಏಕದಿನ ರ‍್ಯಾಂಕಿಂಗ್‌ನಲ್ಲಿ ನಂ.4 ಸ್ಥಾನದಲ್ಲಿರುವ ಭಾರತ ನಂ.3 ಸ್ಥಾನಕ್ಕೇರಲು ಮುಂಬರುವ ನ್ಯೂಝಿಲೆಂಡ್ ವಿರುದ್ಧದ ಐದು ಪಂದ್ಯಗಳ ಏಕದಿನ ಅಂತಾರಾಷ್ಟ್ರೀಯ ಸರಣಿಯಲ್ಲಿ 4-1 ಅಂತರದಲ್ಲಿ ಸರಣಿ ಜಯಿಸಬೇಕಾಗಿದೆ.ರ‍್ಯಾಂಕಿನಲ್ಲಿರುವ
ಪ್ರಸ್ತುತ ಭಾರತ (110 ಪಾಯಿಂಟ್) ನಂ.4ನೆ ಸ್ಥಾನದಲ್ಲಿದೆ. ನ್ಯೂಝಿಲೆಂಡ್ (113 ಪಾಯಿಂಟ್) ಮೂರನೆ ಸ್ಥಾನದಲ್ಲಿದೆ. ಆಸ್ಟ್ರೇಲಿಯ (119 ) ಮತ್ತು ದಕ್ಷಿಣ ಆಫ್ರಿಕ(115) ಕ್ರಮವಾಗಿ ಮೊದಲ ಮತ್ತು ಎರಡನೆ ಸ್ಥಾನದಲ್ಲಿದೆ.
ಪಂದ್ಯದ ವೇಳಾಪಟ್ಟಿ ( ಭಾರತೀಯ ಕಾಲಮಾನ 1:30ಕ್ಕೆ ಆರಂಭ)
ಅ.16: ಮೊದಲ ಏಕದಿನ ಪಂದ್ಯ-ಧರ್ಮಶಾಲಾ
ಅ.20: ಎರಡನೆ ಏಕದಿನ ಪಂದ್ಯ-ದಿಲ್ಲಿ
ಅ.23: ಮೂರನೆ ಏಕದಿನ ಪಂದ್ಯ-ಮೊಹಾಲಿ
ಅ.26:ನಾಲ್ಕನೆ ಏಕದಿನ ಪಂದ್ಯ-ರಾಂಚಿ
ಅ.29:ಐದನೆ ಏಕದಿನ ಪಂದ್ಯ-ವಿಶಾಖಪಟ್ಟಣ







