ಸುರತ್ಕಲ್: ಮನೆಗೆ ನುಗ್ಗಿ ತಂಡದಿಂದ ಮಾರಕಾಸ್ತ್ರಗಳಿಂದ ಹಲ್ಲೆ

ಸುರತ್ಕಲ್ , ಅ. 13: ಏಕಾಏಕಿ ಮನೆಯೊಂದಕ್ಕೆ ನುಗ್ಗಿದ ತಂಡವೊಂದು ಮನೆಮಂದಿಗೆ ಮಾರಕಾಸ್ತ್ರಗಳಿಂದ ಕಡಿದು ಪರಾರಿಯಾದ ಘಟನೆ ಸುರತ್ಕಲ್ ಸಮೀಪದ ಕಾಟಿಪಳ್ಳ ಬಳಿ ಸಂಭವಿಸಿದೆ.
ಕಾಟಿಪಳ್ಳದ ಅಬೂಬಕರ್ ಎಂಬವರ ಮನೆಗೆ ಏಕಾಏಕಿ ನುಗ್ಗಿದ ಸುಮಾರು 8 ಮಂದಿಯ ತಂಡ ಮನೆಯಲ್ಲಿದ್ದ ಆಬೂಬಕರ್, ಅವರ ಪತ್ನಿ ಸುರೈಯಾ, ನಾದಿನಿ ಸಮುನಾ ಎಂಬವರಿಗೆ ಮಾರಕಾಯುಧಗಳಿಂದ ಕಡಿದು ಗಾಯಗೊಳಿಸಿದೆ. ಗಂಭೀರ ಗಾಯಗೊಂಡಿರುವ ಮೂವರನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕೆಲದಿನಗಳ ಹಿಂದೆ ಅಬೂಬಕರ್ ತನ್ನ ಜಮೀನೊಂದನ್ನು ಕೃಷ್ಣಾಪುರ ನಿವಾಸಿ ಮುಹಮ್ಮದ್ ಬಶೀರ್ ಎಂಬವರಿಗೆ ಮಾರಾಟ ಮಾಡಿದ್ದರು. ಈ ಸಂಬಂಧ ಎಲ್ಲಾ ವ್ಯವಹಾರಗಳು ಮುಗಿದ್ದವು. ಆದರೆ, ಬಶೀರ್ ಗೆ ಆ ಜಮೀನು ಬೇಡ ಎಂದು ಜಾಗದ ಕಾಗದ ಪತ್ರಗಳನ್ನು ಹಿಂದಿರುಗಿಸಿ ಹಣ ನೀಡುವಂತೆ ಅಬೂಬಕರ್ ಅವರನ್ನು ಪೀಡಿಸುತ್ತಿದ್ದರು ಎನ್ನಲಾಗಿದೆ.
ಆದರೆ ಏಕಾಏಕಿ ಹಣ ನೀಡಲು ಇಲ್ಲ. ಎರಡು ವಾರಗಳ ಬಳಿಕ ಹಣ ನೀಡುವುದಾಗಿ ತಿಳಿಸಿದ್ದ ಅಬೂಬಕರ್, ಅವರಿಗೆ ನೀಡಬೇಕಾಗಿದ್ದ ಹಣದ ಮೌಲ್ಯದ ಚೆಕ್ ನೀಡಿದ್ದರು. ಆದರೆ, ಚೆಕ್ ನೀಡಿದ್ದರೂ ಸಮಾಧಾನಗೊಳ್ಳದ ಬಶೀರ್ ಗುರುವಾರ ಬೆಳಗ್ಗೆ ಫೋನ್ ಮಾಡಿ, ಹಣ ವಾಪಸ್ ನೀಡದಿದ್ದರೆ ಕೈ, ಕಾಲು ಕತ್ತರಿಸುವುದಾಗಿ ಬೆದರಿಕೆ ಒಡ್ಡಿದ್ದ ಎನ್ನಲಾಗಿದೆ.
ಅಲ್ಲದೆ, ಗುರುವಾರ ರಾತ್ರಿಯ ವೇಳೆ ಏಕಾಏಕಿ ಮನೆಗೆ ನುಗ್ಗಿದ ಮನೆಯಲ್ಲಿದ್ದ ಅಬೂಬಕರ್, ಅವರ ಪತ್ನಿ ಸುರೈಯ್ಯಾ, ನಾದಿನಿ ಸಮುನಾರಿಗೆ ಕೈ ಹಾಗೂ ಚಾಕುವಿನಿಂದ ಹಲ್ಲೆ ನಡೆಸಿದ್ದಾರೆ. ಜೊತೆಗೆ ಸುರೈಯ್ಯಾ ಅವರ 8 ಪವನ್ ನ ಚಿನ್ನದ ಕರಿಮಣಿ ಸರ ಮತ್ತು ಸಮುನಾ ಅವರ 3 ಪವನ್ ನ ಚಿನ್ನದ ಸರವನ್ನು ದೋಚಿದ್ದಾರೆ ಎಂದು ದೂರು ನೀಡಲಾಗಿದೆ.
ಆರೋಪಿಗಳು ಸ್ಥಳೀಯರು ಮತ್ತು ಕೆಲವರನ್ನು ನೋಡಿ ಪರಿಚಯವಿದೆ. ಮತ್ತೊಮ್ಮೆ ನೋಡಿದರೆ ಗುರುತು ಪತ್ತೆ ಹಚ್ಚುವುದಾಗಿ ಅಬೂಬಕರ್ ತಿಳಿಸಿದ್ದಾರೆ.
ಈ ಸಂಬಂಧ ಸುರತ್ಕಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.







