ದಸರಾ ಆಚರಣೆಯಲ್ಲಿ ಮೋದಿ ಪ್ರತಿಕೃತಿ ದಹನ ಪ್ರಕರಣ: ತನಿಖೆಗೆ ಆದೇಶ
ಹೊಸದಿಲ್ಲಿ, ಅ.13: ಜವಾಹರಲಾಲ್ ನೆಹರೂ ವಿಶ್ವವಿದ್ಯಾ ನಿಲಯದಲ್ಲಿ (ಜೆಎನ್‌ಯು) ವಿದ್ಯಾರ್ಥಿಗಳ ಒಂದು ಗುಂಪು ದಸರಾ ಆಚರಣೆ ಸಂದರ್ಭ ಪ್ರಧಾನಿ ನರೇಂದ್ರ ಮೋದಿ ಅವರ ಪ್ರತಿಕೃತಿ ಸುಟ್ಟಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ಜೆಎನ್‌ಯು ವಿವಿ ಆಡಳಿತ ಆದೇಶಿಸಿದೆ. ಪ್ರಕರಣದ ಬಗ್ಗೆ ತನಿಖೆ ನಡೆಸುವಂತೆ ಆದೇಶಿಸಲಾಗಿದೆ ಎಂದು ಜೆಎನ್‌ಯು ಉಪಕುಲಪತಿ ಜಗದೀಶ್ ಕುಮಾರ್ ತಿಳಿಸಿದ್ದಾರೆ. ಕಾಂಗ್ರೆಸ್‌ಗೆ ಸಂಯೋಜಿಸಲ್ಪಟ್ಟಿರುವ ನ್ಯಾಷನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾ (ಎನ್‌ಎಸ್‌ಯುಐ)ಗೆ ಸೇರಿದ ವಿದ್ಯಾರ್ಥಿಗಳು ಮಂಗಳವಾರ ನಡೆದ ದಸರಾ ಆಚರಣೆಯ ವೇಳೆ ಪ್ರಧಾನಿ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಪ್ರತಿಕೃತಿಯನ್ನು ಸುಟ್ಟಿದ್ದರು. ಕೊಟ್ಟ ಭರವಸೆಗಳನ್ನು ಈಡೇರಿಸುವಲ್ಲಿ ಕೇಂದ್ರ ಸರಕಾರದ ವೈಫಲ್ಯ ಮತ್ತು ದೇಶದ ವಿವಿಧೆಡೆ ಶಿಕ್ಷಣ ಸಂಸ್ಥೆಗಳ ಮೇಲೆ ನಡೆಯುತ್ತಿರುವ ನಿರಂತರ ದಾಳಿ ಖಂಡಿಸಿ ಹೀಗೆ ಮಾಡಲಾಗಿದೆ ಎಂದು ಇವರು ತಮ್ಮ ಕೃತ್ಯವನ್ನು ಸಮರ್ಥಿಸಿಕೊಂಡಿದ್ದರು. ಈ ಆಚರಣೆ ಹಮ್ಮಿಕೊಳ್ಳಲು ಯಾವುದೇ ಅನುಮತಿ ಪಡೆಯಲಾಗಿಲ್ಲ ಎಂದು ವಿವಿ ಅಧಿಕಾರಿಗಳು ಹೇಳಿದ್ದಾರೆ. ಆದರೆ ಇದೊಂದು ವಾಡಿಕೆಯ ಕಾರ್ಯಕ್ರಮ ಆಗಿರುವ ಕಾರಣ ಅನುಮತಿಯ ಅಗತ್ಯವಿಲ್ಲ ಎಂದು ವಿದ್ಯಾರ್ಥಿ ಸಂಘಟನೆ ಪ್ರತಿಪಾದಿಸಿದೆ.ಪ್ರತಿಕೃತಿಗೆ ಮೋದಿ ಮತ್ತು ಶಾ ಅವರ ಮುಖದ ಜೊತೆಗೆ ಬಾಬಾ ರಾಮ್‌ದೇವ್, ಸಾಧ್ವಿ ಪ್ರಜ್ಞಾ, ನಾಥೂರಾಮ್ ಗೋಡ್ಸೆ, ಅಸಾರಾಂ ಬಾಪು, ವಿವಿ ಉಪಕುಲಪತಿ ಜಗದೀಶ್ ಕುಮಾರ್ ಅವರನ್ನು ಹೋಲುವ ಮುಖವಾಡಗಳನ್ನು ಜೋಡಿಸಲಾಗಿತ್ತು. ದೇಶದೆಲ್ಲೆಡೆ ನಡೆದ ದಸರಾ ಆಚರಣೆ ವೇಳೆ ಪಾಕ್ ಪ್ರಧಾನಿ ನವಾಝ್ ಶರೀಫ್, 26/11ರ ಸ್ಫೋಟ ಪ್ರಕರಣದ ರೂವಾರಿ ಹಫೀಝ್ ಸಯೀದ್ ಹಾಗೂ ವಿವಿಧ ಭಯೋತ್ಪಾದಕ ಸಂಘಟನೆಗಳ ನಾಯಕರ ಮುಖಗಳನ್ನು ರಾವಣನ ಪ್ರತಿಕೃತಿಗೆ ಜೋಡಿಸಲಾಗಿತ್ತು.





