ಬಡತನ: ದೇಶದ ಸ್ಥಿತಿ ಗಂಭೀರ
ಹೊಸದಿಲ್ಲಿ,ಅ.13: ಈ ವರ್ಷದ ಜಾಗತಿಕ ಹಸಿವು ಸೂಚ್ಯಂಕ(ಜಿಎಚ್‌ಐ)ವನ್ನು ಲೆಕ್ಕ ಹಾಕಲಾಗಿದ್ದು, 118 ಅಭಿವೃದ್ಧಿಶೀಲ ದೇಶಗಳ ಪೈಕಿ ಭಾರತ 97ನೇ ಸ್ಥಾನದಲ್ಲಿದೆ. ದೇಶದಲ್ಲಿ ಹಸಿವಿನ ಪಿಡುಗು ಗಂಭೀರ ಮಟ್ಟದಲ್ಲಿ ಮುಂದುವರಿದಿರುವುದನ್ನು ಇದು ಬೆಟ್ಟು ಮಾಡಿದೆ.
ತೀರ ಬಡ ಆಫ್ರಿಕನ್ ದೇಶಗಳಾದ ನೈಗರ್, ಚಾಡ್, ಇಥಿಯೋಪಿಯಾ ಮತ್ತು ಸಿಯೆರಾ ಲಿಯೋನ್, ನೆರೆಯ ದೇಶಗಳಾದ ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನ ಪಟ್ಟಿಯಲ್ಲಿ ಭಾರತಕ್ಕಿಂತಲೂ ಕೆಳಗಿನ ಸ್ಥಾನಗಳಲ್ಲಿವೆ. ಇತರ ನೆರೆಯ ದೇಶಗಳಾದ ಶ್ರೀಲಂಕಾ, ಬಾಂಗ್ಲಾದೇಶ, ನೇಪಾಳ ಮತ್ತು ಚೀನಾ ಭಾರತಕ್ಕಿಂತ ಮೇಲಿನ ಸ್ಥಾನಗಳಲ್ಲಿವೆ.
ಅಪೌಷ್ಟಿಕ ಜನಸಂಖ್ಯೆ ಪ್ರಮಾಣ, ಐದು ವರ್ಷ ವಯೋಮಾನದೊಳಗಿನ ಎತ್ತರಕ್ಕನುಗುಣವಾದ ತೂಕವನ್ನು ಹೊಂದಿರದ ಕೃಶ ಮತ್ತು ಬೆಳವಣಿಗೆ ಕುಂಠಿತ ಮಕ್ಕಳು ಹಾಗೂ ಒಂದೇ ವಯೋಗುಂಪಿನಲ್ಲಿ ಶಿಶು ಮರಣ ದರ ಈ ಮುಖ್ಯ ಮಾನದಂಡಗಳನ್ನು ಆಧರಿಸಿ ಜಿಎಚ್‌ಐ ಅನ್ನು ಲೆಕ್ಕ ಹಾಕಲಾಗುತ್ತದೆ.
131 ದೇಶಗಳನ್ನು ಅಧ್ಯಯನಕ್ಕೊಳಪಡಿಸ ಲಾಗಿದ್ದು, ಈ ಪೈಕಿ 118 ದೇಶಗಳಿಗೆ ದತ್ತಾಂಶಗಳು ಲಭ್ಯವಾಗಿವೆ.
ಅಂತಾರಾಷ್ಟ್ರೀಯ ಆಹಾರ ನೀತಿ ಸಂಶೋಧನಾ ಸಂಸ್ಥೆಯು ವಾರ್ಷಿಕ ಜಿಎಚ್‌ಐ ಅನ್ನು ಲೆಕ್ಕ ಹಾಕುತ್ತದೆ. ಭಾರತದಲ್ಲಿ ಅಂದಾಜು ಶೇ.15ರಷ್ಟು ಜನಸಂಖ್ಯೆಪೌಷ್ಟಿಕ ಆಹಾರದ ಕೊರತೆಯಿಂದ ಬಳಲುತ್ತಿದೆ ಎಂಬ ಅಂಶವನ್ನು ಪರಿಗಣಿಸಿ ಭಾರತದ ಜಿಎಚ್‌ಐ ಅನ್ನು ಸಂಸ್ಥೆಯು ನಿರ್ಧರಿಸಿದೆ.
ಭಾರತದಲ್ಲಿ ಐದು ವರ್ಷಕ್ಕಿಂತ ಕಡಿಮೆ ವಯೋಮಾನದ ಮಕ್ಕಳ ಪೈಕಿ ಶೇ.15ರಷ್ಟು ಮಕ್ಕಳು ಕೃಶಕಾಯರಾಗಿದ್ದರೆ ಬೆಳವಣಿಗೆ ಕುಂಠಿತಗೊಂಡಿರುವ ಮಕ್ಕಳ ಪ್ರಮಾಣ ಶೇ.39ರಷ್ಟಿದೆ. ಇದು ಸಮತೋಲಿತ ಆಹಾರದ ಕೊರತೆಯನ್ನು ಸೂಚಿಸುತ್ತದೆ. ಐದು ವರ್ಷ ವಯೋಮಾನದೊಳಗೆ ಮರಣ ಪ್ರಮಾಣವು ಶೇ.4.8ರಷ್ಟಿದ್ದು, ಇದು ಭಾಗಶಃ ಅಸಮರ್ಪಕ ಪೋಷಕಾಂಶಗಳು ಮತ್ತು ಅನಾರೋಗ್ಯಕರ ವಾತಾವರಣವನ್ನು ಬೆಟ್ಟು ಮಾಡುತ್ತಿದೆ ಎಂದು ವರದಿಯು ಹೇಳಿದೆ.
ಭಾರತವು ವಿಶ್ವದಲ್ಲಿ ಎರಡು ಅತ್ಯಂತ ಬೃಹತ್ ಮಕ್ಕಳ ಪೌಷ್ಟಿಕಾಂಶ ಕಾರ್ಯಕ್ರಮಗಳಾದ ಆರು ವರ್ಷದೊಳಗಿನ ಮಕ್ಕಳಿಗಾಗಿ ಐಸಿಡಿಎಸ್ ಮತ್ತು ಶಾಲಾ ಮಕ್ಕಳಿಗಾಗಿ ಮಧ್ಯಾಹ್ನದೂಟ ಹೊಂದಿದೆಯಾದರೂ ಅಪೌಷ್ಟಿಕತೆ ಮಕ್ಕಳನ್ನು ಕಾಡುವುದು ಮುಂದುವರಿದಿದೆ.
2002ರಲ್ಲಿ ಭಾರತವು 83ನೇ ಮತ್ತು 2008ರಲ್ಲಿ 102ನೆ ಸ್ಥಾನದಲ್ಲಿತ್ತು. ದೇಶದಲ್ಲಿ ಹಸಿವಿನ ಸಮಸ್ಯೆ ಸ್ವಲ್ಪ ಮಟ್ಟಿಗೆ ನೀಗಿದೆಯಾದರೂ ಇತರ ಹಲವಾರು ರಾಷ್ಟ್ರಗಳು ಭಾರತಕ್ಕಿಂತ ಹೆಚ್ಚಿನ ಪ್ರಗತಿಯನ್ನು ಸಾಧಿಸಿವೆ ಎನ್ನುವುದನ್ನು ಇದು ಸೂಚಿಸುತ್ತಿದೆ. ಹೀಗಾಗಿ ಭಾರತದ ಸ್ಥಾನ 15 ವರ್ಷಗಳ ಹಿಂದೆ ಇದ್ದುದಕ್ಕಿಂತ ಕೆಳಗೆ ಕುಸಿದಿದೆ.







