ಬಾಲಕಿಯ ಅತ್ಯಾಚಾರ ಯತ್ನ
ನಾಸಿಕ್‌ನ ಎಂಟು ಗ್ರಾಮಗಳಲ್ಲಿ ಕರ್ಫ್ಯೂ
ನಾಸಿಕ್,ಅ.13: ಹದಿಹರೆಯದ ಬಾಲಕನಿಂದ ಐದರ ಹರೆಯದ ಬಾಲಕಿಯ ಅತ್ಯಾಚಾರ ಯತ್ನದ ಬಳಿಕ ಗುಂಪು ಘರ್ಷಣೆ ಮತ್ತು ಕಲ್ಲು ತೂರಾಟದ ಘಟನೆಗಳ ಹಿನ್ನೆಲೆಯಲ್ಲಿ ನಿನ್ನೆ ರಾತ್ರಿಯಿಂದ ಜಿಲ್ಲೆಯ ಇಗತಪುರಿ ಮತ್ತು ತ್ರೈಯಂಬಕೇಶ್ವರ ತಾಲೂಕುಗಳ ಎಂಟು ಗ್ರಾಮಗಳಲ್ಲಿ ಕರ್ಫ್ಯೂ ಹೇರಲಾಗಿದೆ. ಕರ್ಫ್ಯೂ ನಾಳೆಯವರೆಗೆ ಜಾರಿಯಲ್ಲಿರುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಗ್ರಾಮಗಳಲ್ಲಿ ಮಂಗಳವಾರ ಸಂಜೆ ಗುಂಪು ಘರ್ಷಣೆಗಳು ಭುಗಿಲೆದ್ದಿದ್ದು, 13 ಜನರು ಗಾಯಗೊಂಡಿದ್ದಾರೆ. ಈ ಪೈಕಿ ಓರ್ವನ ಸ್ಥಿತಿ ಗಂಭೀರವಾಗಿದೆ.
ನಾಸಿಕ್ ನಗರ ವ್ಯಾಪ್ತಿಯ ಕೆಲವು ಪ್ರದೇಶಗಳಲ್ಲಿ ಕಲ್ಲು ತೂರಾಟದ ಘಟನೆಗಳು ನಡೆದಿವೆ. ವದಂತಿಗಳು ಹರಡುವುದನ್ನು ತಪ್ಪಿಸಲು ಮೊಬೈಲ್ ಅಂತರ್ಜಾಲ ಸೇವೆಗಳನ್ನು ನಾಳೆಯವರೆಗೆ ಸ್ಥಗಿತಗೊಳಿಸಲಾಗಿದೆ.
ವಾಹನಗಳಿಗೆ ಬೆಂಕಿ ಹಚ್ಚುವಿಕೆ ಮತ್ತು ಕಲ್ಲು ತೂರಾಟದ ಘಟನೆಗಳ ಹಿನ್ನೆಲೆಯಲ್ಲಿ ರವಿವಾರದಿಂದ ಸ್ಥಗಿತಗೊಂಡಿದ್ದ ನಾಸಿಕ್ ಮತ್ತು ಮುಂಬೈ ನಡುವಿನ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್‌ಗಳ ಸಂಚಾರ ಇಂದು ಪುನರಾರಂಭಗೊಂಡಿದೆ.
ಹಿಂಸಾಚಾರದ ಘಟನೆಗಳಿಗೆ ಸಂಬಂಧಿಸಿದಂತೆ ಜಿಲ್ಲಾದ್ಯಂತ 25 ಜನರನ್ನು ಪೊಲೀಸರು ಬಂಧಿಸಿದ್ದಾರೆ.
ತ್ರೈಯಂಬಕೇಶ್ವರ ಸಮೀಪದ ತಳೇಗಾಂವ್‌ನಲ್ಲಿ 16ರ ಹರೆಯದ ಬಾಲಕ ಐದರ ಹರೆಯದ ಬಾಲಕಿಯ ಮೇಲೆ ಅತ್ಯಾಚಾರವೆಸಗಲು ಯತ್ನಿಸಿದ ಬಳಿಕ ಆಸುಪಾಸಿನ ಗ್ರಾಮಗಳಲ್ಲಿ ಆರಂಭಗೊಂಡ ಪ್ರತಿಭಟನೆ ನಾಸಿಕ್ ನಗರಕ್ಕೂ ಹರಡಿತ್ತು.
ಆರೋಪಿ ಬಾಲಕನನ್ನು ಪೊಲೀಸರು ಬಂಧಿಸಿದ್ದಾರೆ.
ಪೊಲೀಸ್ ಆಯುಕ್ತ ರವೀಂದ್ರ ಸಿಂಘಾಲ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಪರಿಸ್ಥಿತಿಯ ಮೇಲೆ ನಿಗಾಯಿರಿಸಿದ್ದಾರೆ.
ಮಹಾರಾಷ್ಟ್ರ ವಿಧಾನಸಭೆಯಲ್ಲಿ ಪ್ರತಿಪಕ್ಷ ನಾಯಕ ರಾಧಾಕೃಷ್ಣ ವಿಖೆ ಪಾಟೀಲ್ ಮತ್ತು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ವಿಜಯಾ ರಾಹತ್ಕರ್ ಅವರು ಇಲ್ಲಿಯ ಸರಕಾರಿ ಆಸ್ಪತ್ರೆಗೆ ತೆರಳಿ ಬಾಲಕಿಯ ಬಂಧುಗಳನ್ನು ಭೇಟಿಯಾದರು.
ಪ್ರಕರಣವನ್ನು ತ್ವರಿತ ನ್ಯಾಯಾಲಯದಲ್ಲಿ ವಿಚಾರಣೆಗೊಳಪಡಿಸ ಲಾಗುವುದು ಎಂದು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಭರವಸೆ ನೀಡಿದ್ದಾರೆ.







