ಸೌದಿಯಲ್ಲಿ ರಸ್ತೆ ಅಪಘಾತ: ಉರಿಮಜಲಿನ ಯುವಕ ಮೃತ
ವಿಟ್ಲ, ಅ.13: ಸೌದಿ ಅರೆಬಿಯದ ಬುರೈದಾ ಎಂಬಲ್ಲಿ ಅ.8ರಂದು ನಡೆದ ರಸ್ತೆ ಅಪಘಾತದಲ್ಲಿ ವಿಟ್ಲ ಸಮೀಪದ ಉರಿಮಜಲು ನಿವಾಸಿ ಶಾಹುಲ್ ಹಮೀದ್ (30) ಎಂಬವರು ಮೃತಪಟ್ಟಿದ್ದಾರೆ.
ಉರಿಮಜಲು-ಕ್ವಾಟ್ರಸ್ ಎಂಬಲ್ಲಿನ ನಿವಾಸಿ ಅಹ್ಮದ್ ಎಂಬವರ ಪುತ್ರ ಶಾಹುಲ್ ಹಮೀದ್ ಸೌದಿ ಅರೆಬಿಯದಲ್ಲಿ ಉದ್ಯೋಗದಲ್ಲಿದ್ದರು. ಅ.8ರಂದು ಬುರೈದಾ ಎಂಬಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಅಲ್ಲಿನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಕುಟುಂಬಸ್ಥರ ಒಪ್ಪಿಗೆ ಮೇರೆಗೆ ಶಾಹುಲ್ ಹಮೀದ್ರ ಮೃತದೇಹವನ್ನು ಸೌದಿ ಅರೆಬಿಯದ ಹೈಲ್ ಖಲೀಜ್ ಮಸೀದಿಯಲ್ಲಿ ಗುರುವಾರ ದಫನ ಮಾಡಲಾಯಿತು.
ಮೃತ ಶಾಹುಲ್ ಹಮೀದ್ ಅಹ್ಮದ್ರ 5 ಗಂಡು ಹಾಗೂ 2 ಹೆಣ್ಣು ಮಕ್ಕಳ ಪೈಕಿ ಮೂರನೆಯವರಾಗಿದ್ದರು. ಅವಿವಾಹಿತರಾಗಿದ್ದ ಅವರು ಎರಡೂವರೆ ವರ್ಷಗಳಿಂದ ಸೌದಿ ಅರೆಬಿಯದಲ್ಲಿ ಉದ್ಯೋಗದಲ್ಲಿದ್ದರು. ನಾಲ್ಕು ತಿಂಗಳ ಹಿಂದೆಯಷ್ಟೇ ಊರಿಗೆ ಬಂದು ಮತ್ತೆ ಸೌದಿ ಅರೆಬಿಯಕ್ಕೆ ತೆರಳಿದ್ದರು. ಮೃತರು ತಾಯಿ, ಸಹೋದರ-ಸಹೋದರಿಯರು ಹಾಗೂ ಅಪಾರ ಬಂಧು- ಮಿತ್ರರನ್ನು ಅಗಲಿದ್ದಾರೆ.