ಸ್ವಜನಪಕ್ಷಪಾತ ಆರೋಪ; ಕೇರಳದ ಕೈಗಾರಿಕಾ ಸಚಿವ ಇ.ಪಿ. ಜಯರಾಜನ್ ರಾಜೀನಾಮೆ

ಕೊಚ್ಚಿ, ಅ.14: ಸ್ವಜನಪಕ್ಷಫಾತ ಆರೋಪಕ್ಕೆ ಸಂಬಂಧಿಸಿ ಕೇರಳದ ಕೈಗಾರಿಕಾ ಸಚಿವ ಇ.ಪಿ.ಜಯರಾಜನ್ ಶುಕ್ರವಾರ ಸಚಿವ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ರಾಜ್ಯದ ಸಾರ್ವಜನಿಕ ವಲಯದ ಉದ್ದಿಮೆಗಳ ಮುಖ್ಯಸ್ಥರನ್ನಾಗಿ ತಮ್ಮ ಕುಟುಂಬದ ಸದಸ್ಯರನ್ನು ನೇಮಕ ಮಾಡಿರುವ ಆರೋಪದಲ್ಲಿ ಸಿಲುಕಿಕೊಂಡಿದ್ದ ಜಯರಾಜನ್ ಇಂದು ರಾಜೀನಾಮೆ ನೀಡುವ ಮೂಲಕ ಸಚಿವ ಸಂಪುಟದಿಂದ ಹೊರಬಂದಿದ್ದಾರೆ.
ಜಯರಾಜನ್ ಸಿಪಿಎಂ ರಾಜ್ಯ ಸಮಿತಿಯ ಮುಂದೆ ತನ್ನಿಂದ ಆಗಿರುವ ತಪ್ಪನ್ನು ಒಪ್ಪಿಕೊಂಡಿರುವುದಾಗಿ ಸಿಪಿಎಂ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್ ತಿಳಿಸಿದ್ದಾರೆ.
ಗುರುವಾರ ಮುಖ್ಯ ಮಂತ್ರಿ ಪಿಣರಾಯಿ ವಿಜಯನ್ ಅವರು ಜಯರಾಜನ್ ವಿರುದ್ಧದ ಆರೋಪಕ್ಕೆ ಸಂಬಂಧಿಸಿ ತನಿಖೆ ನಡೆಸುವಂತೆ ರಾಜ್ಯ ಮುಖ್ಯ ಕಾರ್ಯದರ್ಶಿ ಎಸ್.ಎಂ.ವಿಜಯಾನಂದ್ ಅವರಿಗೆ ಆದೇಶ ನೀಡಿದ್ದರು.
ಜಯರಾಜನ್ ಅವರು ತನ್ನ ಅಳಿಯ ಪಿ.ಕೆ.ಸುಧೀರ್ ನಂಬಿಯಾರ್ ಅವರನ್ನು ಕೇರಳ ರಾಜ್ಯ ಕೈಗಾರಿಕಾ ಎಂಟರ್ಪ್ರೈಸಸ್ ನ ಆಡಳಿತ ನಿರ್ದೇಶಕರಾಗಿ ನೇಮಕ ಮಾಡಿರುವುದು ವಿವಾದಕ್ಕೆ ಕಾರಣವಾಗಿತ್ತು.





