ಮಧ್ಯಪ್ರದೇಶ:ಪ್ರಪಾತಕ್ಕೆ ಉರುಳಿದ ಬಸ್
ಕನಿಷ್ಠ 9 ಜನರ ಸಾವು,ಹಲವರಿಗೆ ಗಾಯ

ರತ್ಲಾಮ್(ಮ.ಪ್ರ.)ಅ.14: ರತ್ಲಾಮ್ ಜಿಲ್ಲೆಯ ನಾಮ್ಲಿ ಪಟ್ಟಣದ ಸಮೀಪ ಇಂದು ಪ್ರಯಾಣಿಕರಿಂದ ತುಂಬಿದ್ದ ಖಾಸಗಿ ಬಸ್ಸೊಂದು ಪ್ರಪಾತಕ್ಕುರುಳಿದ ಪರಿಣಾಮ ಕನಿಷ್ಠ ಒಂಬತ್ತು ಜನರು ಕೊಲ್ಲಲ್ಪಟ್ಟಿದ್ದು, ಇತರ ಹಲವಾರು ಜನರು ಗಾಯಗೊಂಡಿದ್ದಾರೆ. ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚುವ ಭೀತಿ ವ್ಯಕ್ತವಾಗಿದೆ.
ಈವರೆಗೆ ಒಂಬತ್ತು ಪ್ರಯಾಣಿಕರ ಶವಗಳನ್ನು ಹೊರಗೆ ತೆಗೆಯಲಾಗಿದೆ ಎಂದು ಎಸ್‌ಪಿ ಅವಿನಾಶ ಶರ್ಮಾ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.
ಈ ನತದೃಷ್ಟ ಬಸ್ ರತ್ಲಾಮ್‌ನಿಂದ ಮಾಂಡಸಾರ್‌ಗೆ ಪ್ರಯಾಣಿಸುತ್ತಿತ್ತು.
ಬಸ್ ಅತಿವೇಗವಾಗಿ ಚಲಿಸುತ್ತಿತ್ತು ಮತ್ತು ಏಕಾಏಕಿ ಪಲ್ಟಿಯಾಗಿ ನೀರು ತುಂಬಿದ್ದ ಪ್ರಪಾತಕ್ಕುರುಳಿ ಬಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು.
ಬಸ್ಸಿನಲ್ಲಿ 40-45 ಪ್ರಯಾಣಿಕರಿದ್ದರು ಎಂದು ದೃಢಪಡದ ವರದಿಗಳು ತಿಳಿಸಿವೆ. ಆದರೆ ಈ ಸಂಖ್ಯೆ ಸರಿಯಲ್ಲ ಎಂದು ಎಸ್‌ಪಿ ಹೇಳಿದರು.
ಸ್ಥಳೀಯರ ನೆರವಿನೊಂದಿಗೆ ಬಸ್‌ನ್ನು ಪ್ರಪಾತದಿಂದ ಹೊರಗೆ ತೆಗೆಯುವ ಕಾರ್ಯಾಚರಣೆ ನಡೆಯುತ್ತಿದೆ. ಹಿರಿಯ ಅಧಿಕಾರಿಗಳು ಸ್ಥಳದಲ್ಲಿದ್ದಾರೆ.
===================================================





