ರಣಜಿ ಟ್ರೋಫಿ: ಸ್ವಪ್ನಿಲ್-ಅಂಕಿತ್‌ರಿಂದ ಗರಿಷ್ಠ ಜೊತೆಯಾಟದ ದಾಖಲೆ

ಮುಂಬೈ, ಅ.14: ಮಹಾರಾಷ್ಟ್ರ ತಂಡದ ಸ್ವಪ್ನಿಲ್ ಗುಗಾಲೆ ಹಾಗೂ ಅಂಕಿತ್ ಭಾವ್ನೆ ಭಾರತದ ಪ್ರಮುಖ ದೇಶೀಯ ಸ್ಪರ್ಧೆ ರಣಜಿ ಟ್ರೋಫಿ ಇತಿಹಾಸದಲ್ಲಿ ಗರಿಷ್ಠ ಜೊತೆಯಾಟ ನಡೆಸಿ ವಿಶ್ವದ ಗಮನ ಸೆಳೆದಿದ್ದಾರೆ.
ರಣಜಿ ಟ್ರೋಫಿಯ 2ನೆ ದಿನದಾಟವಾದ ಶುಕ್ರವಾರ ದಿಲ್ಲಿಯ ವಿರುದ್ಧ 3ನೆ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 594 ರನ್ ಸೇರಿಸಿದ ಸ್ವಪ್ನಿಲ್ ಹಾಗೂ ಅಂಕಿತ್ ಹೊಸ ದಾಖಲೆ ನಿರ್ಮಿಸಿದರು. ಈ ಮೂಲಕ 1946-47ರ ಋತುವಿನಲ್ಲಿ 3ನೆ ವಿಕೆಟ್‌ಗೆ 577 ರನ್ ಜೊತೆಯಾಟ ನಡೆಸಿದ್ದ ಬರೋಡ ತಂಡದ ವಿಜಯ್ ಹಝಾರೆ ಹಾಗೂ ಗುಲ್ ಮುಹಮ್ಮದ್ ಅವರ ಹಳೆಯ ದಾಖಲೆ ಮುರಿದರು.
ಇದು ವಿಶ್ವದ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ದಾಖಲಾದ ಎರಡನೆ ಗರಿಷ್ಠ ಜೊತೆಯಾಟವಾಗಿದೆ. 2006ರಲ್ಲಿ ದಕ್ಷಿಣ ಆಫ್ರಿಕ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾದ ಕುಮಾರ ಸಂಗಕ್ಕರ ಹಾಗೂ ಮಹೇಲ ಜಯವರ್ಧನೆ 624 ರನ್ ಸೇರಿಸಿ ವಿಶ್ವ ದಾಖಲೆ ನಿರ್ಮಿಸಿದ್ದರು.
2009ರಲ್ಲಿ ಪಾಕಿಸ್ತಾನದ ದೇಶೀಯ ಕ್ರಿಕೆಟ್‌ನಲ್ಲಿ ರಫಾತುಲ್ಲಾ ಮುಹಮ್ಮದ್ ಹಾಗೂ ಆಮಿರ್ ಸಾಜದ್ 580 ರನ್ ದಾಖಲೆಯನ್ನು ಮುರಿದ ಸ್ವಪ್ನಿಲ್-ಅಂಕಿತ್ ತಮ್ಮ ಹೆಸರಿಗೆ ಹೊಸ ದಾಖಲೆ ಬರೆದರು.
ನಾಯಕ ಹಾಗೂ ಆರಂಭಿಕ ದಾಂಡಿಗ ಸ್ವಪ್ನಿಲ್ ಮಹಾರಾಷ್ಟ್ರ ತಂಡ 2 ವಿಕೆಟ್‌ಗಳ ನಷ್ಟಕ್ಕೆ 635 ರನ್ ಗಳಿಸಿದ ತಕ್ಷಣ ಮೊದಲ ಇನಿಂಗ್ಸ್ ಡಿಕ್ಲೇರ್ ಮಾಡಿದರು. ಇನಿಂಗ್ಸ್ ಡಿಕ್ಲೇರ್ ಮಾಡಿದಾಗ ಅಂಕಿತ್ ಅಜೇಯ 351 ಹಾಗೂ ಭಾವ್ನೆ ಔಟಾಗದೆ 258 ರನ್ ಗಳಿಸಿದ್ದರು.
ಅಂಕಿತ್-ಸ್ವಪ್ನಿಲ್ ತಮ್ಮ ಜೊತೆಯಾಟದಲ್ಲಿ 540 ರನ್ ದಾಟಿದಾಗ 2012ರಲ್ಲಿ ಸೌರಾಷ್ಟ್ರ-ಗುಜರಾತ್ ನಡುವಿನ ರಣಜಿ ಟ್ರೋಫಿಯಲ್ಲಿ 3ನೆ ವಿಕೆಟ್‌ಗೆ ಗರಿಷ್ಠ ಜೊತೆಯಾಟ(539) ನಡೆಸಿದ್ದ ಸಾಗರ್ ಜೊಗಿಯಾನಿ ಹಾಗೂ ರವೀಂದ್ರ ಜಡೇಜರ ದಾಖಲೆ ಪತನಗೊಂಡಿತು.
ಅಂಕಿತ್ ಹಾಗೂ ಸ್ವಪ್ನಿಲ್ ಜೀವನಶ್ರೇಷ್ಠ ಇನಿಂಗ್ಸ್ ಆಡಿದರು. ಸ್ವಪ್ನಿಲ್ ಈ ತನಕ ಆಡಿರುವ 17 ಪ್ರಥಮ ದರ್ಜೆ ಪಂದ್ಯಗಳಲ್ಲಿ 174 ರನ್ ಗರಿಷ್ಠ ಸ್ಕೋರಾಗಿತ್ತು. ಭಾವ್ನೆ 61 ಪಂದ್ಯಗಳಲ್ಲಿ 172 ರನ್ ಗರಿಷ್ಠ ಸ್ಕೋರಾಗಿತ್ತು.
ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ದಾಖಲಾದ ಗರಿಷ್ಠ ಜೊತೆಯಾಟಗಳು
624: ಕುಮಾರ ಸಂಗಕ್ಕರ(287)-ಮಹೇಲ ಜಯವರ್ಧನೆ(374) 2006
580: ರಫಾತುಲ್ಲಾ ಮುಹಮ್ಮದ್(302)-ಆಮಿರ್ ಸಾಜದ್(289) 2009
577: ವಿಜಯ್ ಹಝಾರೆ(288)-ಗುಲ್ ಮುಹಮ್ಮದ್(319) 1946
576: ಸನತ್ ಜಯಸೂರ್ಯ(340)-ರೋಶನ್ ಮಹಾನಾಮ(225) 1997
594: ಸ್ವಪ್ನಿಲ್ ಗುಗಾಲೆ(351),ಅಂಕಿತ್ ಭಾವ್ನೆ(258), 2016.







