ಸ್ವಜಾತಿ ಮದುವೆಗಳ ಕಡ್ಡಾಯ ನಿಷೇಧಕ್ಕೆ ಕಾನೂನು ಅಗತ್ಯ: ಉಗ್ರಪ್ಪ

ಬೆಂಗಳೂರು, ಅ.14: ದೇಶದಲ್ಲಿ ಜಾತಿ ಎಂಬ ದೊಡ್ಡ ಪಿಡುಗು ನಿರ್ಮೂಲನೆ ಆಗಬೇಕಾದರೆ ಸ್ವಜಾತಿ ಮದುವೆಗಳ ಕಡ್ಡಾಯ ನಿಷೇಧಕ್ಕೆ ಕಾನೂನು ಜಾರಿ ಮಾಡಬೇಕು ಎಂದು ವಿಧಾನಪರಿಷತ್ ಸದಸ್ಯ ಹಾಗೂ ಮಹಿಳಾ ಮತ್ತು ಮಕ್ಕಳ ದೌರ್ಜನ್ಯ ತಡೆಗಟ್ಟುವ ಸಮಿತಿಯ ಅಧ್ಯಕ್ಷ ಉಗ್ರಪ್ಪ ಅಭಿಪ್ರಾಯಿಸಿದ್ದಾರೆ.
ಶುಕ್ರವಾರ ಕರ್ನಾಟಕ ದಲಿತ ಮಹಿಳಾ ವೇದಿಕೆ ನಗರದ ಸೆನೆಟ್ ಸಭಾಂಗಣದಲ್ಲಿ ಆಯೋಜಿಸಿದ್ದ ‘2015ರ ದೌರ್ಜನ್ಯ ತಡೆ ಕಾಯ್ದೆ ಅನುಷ್ಠಾನ’ದ ವರದಿಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ದೇಶಕ್ಕೆ ಸ್ವಾತಂತ್ರ ಬಂದು ಏಳು ದಶಕಗಳು ಕಳೆದಿದ್ದರೂ ಜಾತಿಯೆಂಬ ಕೂಪದಲ್ಲೆ ಹೊರಳಾಡುತ್ತಿದ್ದೇವೆ. ಇದರ ಲಾಭ ಪಡೆಯುವ ಮನುವಾದಿಗಳು ಸಮಾಜದಲ್ಲಿ ಮೇಲು-ಕೀಳು ಎಂಬ ಭಾವನೆ ಬಿತ್ತುತ್ತಿದ್ದಾರೆ. ಹೀಗಾಗಿ ಅಂತರ್ಜಾತಿ ವಿವಾಹಗಳಿಗೆ ಹೆಚ್ಚಿನ ಪ್ರೋತ್ಸಾಹ ಕೊಡುವ ಮೂಲಕ ಜಾತಿ ನಿರ್ಮೂಲನೆಗೆ ಕಾನೂನು ಅಗತ್ಯವಿದೆ ಎಂದು ಅವರು ತಿಳಿಸಿದರು.
ರಾಜ್ಯದಲ್ಲಿ ದಲಿತರಿಗೆ ಪ್ರತ್ಯೇಕ ಸ್ಮಶಾನ ಮಾಡುವುದರ ಮೂಲಕ ಸತ್ತ ಮೇಲೆಯೂ ಅಸ್ಪಶ್ಯತೆಯನ್ನು ಮುಂದುವರೆಸಲಾಗುತ್ತಿದೆ. ಇಂತಹ ಕೀಳು ಮಟ್ಟದ ಆಚರಣೆ, ವ್ಯವಸ್ಥೆಯ ವಿರುದ್ಧ ಎಲ್ಲ ಸಮುದಾಯದ ಪ್ರಜ್ಞಾವಂತ ನಾಗರಿಕರು ಖಂಡಿಸಬೇಕು. ದಲಿತರ ಹೋರಾಟದೊಂದಿಗೆ ಎಲ್ಲರೂ ಕೈ ಜೋಡಿಸಬೇಕು ಎಂದು ಅವರು ಆಶಿಸಿದರು.
ದಲಿತರ ಅಭಿವೃದ್ಧಿಗಾಗಿ ಸರಕಾರಗಳು ಜಾರಿ ಮಾಡಿರುವ ಕಾರ್ಯಕ್ರಮಗಳನ್ನು ಪ್ರಾಮಾಣಿಕವಾಗಿ ಅನುಷ್ಠಾನವಾಗಿದ್ದರೆ, ಪ್ರತಿ ದಲಿತ ಕುಟುಂಬವು ಸುಭಿಕ್ಷದಿಂದಿರಬೇಕಾಗಿತ್ತು. ಆದರೆ ಅಧಿಕಾರಿಗಳ ಸ್ವಾರ್ಥ ಜಾತಿ ರಾಜಕಾರಣದಿಂದಾಗಿ ಇಂದಿಗೂ ದಲಿತ ಸಮುದಾಯ ಮನೆಯಿಲ್ಲದೆ, ಸ್ವಾಭಿಮಾನದಿಂದ ಬದುಕಲು ಸಾಧ್ಯವಿಲ್ಲದೆ, ಕೆಲಸವಿಲ್ಲದೆ ಅರೆಜೀವವಾಗಿ ಬದುಕುತ್ತಿದ್ದಾರೆ ಎಂದು ಉಗ್ರಪ್ಪ ಬೇಸರಪಟ್ಟರು.
ದಲಿತ ನಾಯಕರು ಹಣದ ವ್ಯಾಮೋಹಕ್ಕೆ ಬಿದ್ದು ಸಮುದಾಯಕ್ಕೆ ಕೆಟ್ಟ ಹೆಸರು ತರುತ್ತಿದ್ದಾರೆ. ಇದರಿಂದ ದಲಿತ ಚಳವಳಿ ಅಪಾರ ನಷ್ಟ ಸಂಭವಿಸುತ್ತಿದೆ. ಇದರಿಂದ ವಿದ್ಯಾವಂತ ದಲಿತ ಯುವಕರು ಹೋರಾಟಗಳಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ ಎಂದು ಅವರು ತಿಳಿಸಿದರು.
ವಿಧಾನಪರಿಷತ್ ಸದಸ್ಯ ಡಾ.ಎಲ್.ಹನುಮಂತಯ್ಯ ಮಾತನಾಡಿ, ಬೆಂಗಳೂರು, ದೊಡ್ಡಬಳ್ಳಾಪುರ ಸೇರಿದಂತೆ ಮುಂದುವರೆದ ಪ್ರದೇಶಗಳಲ್ಲಿಯೆ ದೌರ್ಜನ್ಯಗಳು ಹೆಚ್ಚಾಗುತ್ತಿವೆ. ಆದರೂ ಕ್ರಮ ಕೈಗೊಳ್ಳಬೇಕಾದ ಪೊಲೀಸ್ ಇಲಾಖೆ ಕಣ್ಮುಚ್ಚಿ ಕುಳಿತಿದೆ ಎಂದು ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.
ಕಾರ್ಯಕ್ರಮದಲ್ಲಿ ರೋಣ ಕ್ಷೇತ್ರದ ಶಾಸಕ ಜಿ.ಎಸ್.ಪಾಟೀಲ್, ನಿವೃತ್ತ ಐಎಎಸ್ ಅಧಿಕಾರಿ ಇ.ವೆಂಕಟಯ್ಯ, ಅಂಬೇಡ್ಕರ್ ಅಭಿವೃದ್ಧಿ ನಿಗಮದ ಪದ್ಮನಾಭ, ಪ್ರಾಧ್ಯಾಪಕಿ ಬಿ.ಯು.ಸುಮಾ, ಸಹ ಪ್ರಾಧ್ಯಾಪಕ ಕಾವಲಮ್ಮ, ಹಿರಿಯ ವಕೀಲ ಬಿ.ಟಿ.ವೆಂಕಟೇಶ್, ರಾಜ್ಯ ದಲಿತ ಮಹಿಳಾ ವೇದಿಕೆಯ ಸಂಚಾಲಕಿ ಪಿ.ಯಶೋಧ ಮತ್ತಿತರರಿದ್ದರು.
ಬ್ರಾಹ್ಮಣರು ಸೇರಿದಂತೆ ಮೇಲ್ಜಾತಿಗಳು ಎಸ್ಸಿ-ಎಸ್ಟಿ ದಾಖಲೆಗಳನ್ನು ನೋಂದಣಿ ಮಾಡಿಕೊಳ್ಳುವ ಮೂಲಕ ದಲಿತ ಸಮುದಾಯಕ್ಕೆ ವಂಚನೆ ಮಾಡುತ್ತಿದ್ದಾರೆ. ಈ ಕುರಿತು ಮಾಹಿತಿ ಇದ್ದರೂ ಅಧಿಕಾರಿಗಳು ಮೂಕ ಪ್ರೇಕ್ಷಕರಾಗಿದ್ದಾರೆ.
-ವಿ.ಎಸ್.ಉಗ್ರಪ್ಪ, ವಿಧಾನಪರಿಷತ್ ಸದಸ್ಯ
ದಲಿತರ ಮೇಲೆ ಹಲ್ಲೆಗಳು ದಿನೇ ದಿನೇ ಹೆಚ್ಚಾಗುತ್ತಿದೆ. ಆದರೆ, ಆರೋಪಿಗಳಿಗೆ ಕಠಿಣ ಶಿಕ್ಷೆಯಾಗದೆ ಖುಲಾಸೆ ಆಗುತ್ತಿದ್ದಾರೆ. ಇದರಿಂದಾಗಿ ಮತ್ತಷ್ಟು ದೌರ್ಜನ್ಯ ಪ್ರಕರಣಗಳು ಹೆಚ್ವುತ್ತಿದ್ದು, ಅಧಿಕಾರಿಗಳಿಂದ ದಲಿತರಿಗೆ ರಕ್ಷಣೆ ಇಲ್ಲವಾಗಿದೆ. ಹೀಗಾಗಿ ದಲಿತರ ಆತ್ಮರಕ್ಷಣೆಗೆ ‘ಗನ್’ ಹೊಂದಲು ಪರವಾನಿಗೆ ಕೊಡಬೇಕು.
-ಡಾ.ಎಲ್.ಹನುಮಂತಯ್ಯ, ಮಾಜಿ ಅಧ್ಯಕ್ಷ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ







