ಮಲ್ಟಿಪ್ಲೆಕ್ಸ್‌ನಲ್ಲಿ ಪ್ಯಾಕೇಜ್ಡ್ ನೀರಿಗೆ ದುಬಾರಿ ದರ: ಸರಕಾರದ ಎಚ್ಚರಿಕೆ

ಹೊಸದಿಲ್ಲಿ, ಅ.14: ಪ್ಯಾಕ್ ಮಾಡಲ್ಪಟ್ಟ ನೀರು ಮತ್ತು ಲಘು ಪಾನೀಯ(ಸಾಫ್ಟ್ ಡ್ರಿಂಕ್ಸ್)ಗಳನ್ನು ಎಂಆರ್‌ಪಿ (ಗರಿಷ್ಟ ಚಿಲ್ಲರೆ ಮಾರಾಟ ದರ) ಗಿಂತ ಹೆಚ್ಚಿನ ದರದಲ್ಲಿ ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಗ್ರಾಹಕ ವ್ಯವಹಾರಗಳ ಸಚಿವ ರಾಮ್‌ವಿಲಾಸ್ ಪಾಸ್ವಾನ್ ತಿಳಿಸಿದ್ದಾರೆ.
ಗರಿಷ್ಠ ಚಿಲ್ಲರೆ ಮಾರಾಟ ದರಕ್ಕಿಂತ ಹೆಚ್ಚು ದರ ವಸೂಲು ಮಾಡುವುದು ಕಾನೂನಿನ ಉಲ್ಲಂಘನೆಯಾಗಿದೆ. ಆದರೂ ವಿಮಾನ ನಿಲ್ದಾಣ, ಮಲ್ಟಿಪ್ಲೆಕ್ಸ್ ಮತ್ತು ಹೊಟೇಲ್‌ಗಳಲ್ಲಿ ಎಂಆರ್‌ಪಿ ದರ ಮೀರಿ ಮಾರುವುದು ರೂಢಿಯಾಗಿದೆ. ಕೆಲವೆಡೆ ನೀರಿನ ಬಾಟಲ್ ಅಥವಾ ಲಘು ಪಾನೀಯಗಳ ಬಾಟಲಿ ಮೇಲೆ ಎಂಆರ್‌ಪಿ ಉಲ್ಲೇಖಿಸುವುದೇ ಇಲ್ಲ. ಈ ಬಗ್ಗೆ ಗ್ರಾಹಕರು ದೂರು ನೀಡಿದರೆ ಸೂಕ್ತ ಕ್ರಮ ಕೈಗೊಳ್ಳುವ ಅಧಿಕಾರವಿದೆ. ತಪ್ಪಿತಸ್ಥರಿಗೆ ದಂಡ ಅಥವಾ ಜೈಲುಶಿಕ್ಷೆ ವಿಧಿಸಬಹುದು ಎಂದು ಪಾಸ್ವಾನ್ ತಿಳಿಸಿದರು.
47ನೇ ವಿಶ್ವ ಗುಣಮಟ್ಟ ದಿನಾಚರಣೆ ಅಂಗವಾಗಿ ‘ ಗುಣಮಟ್ಟದಿಂದ ವಿಶ್ವಾಸ’ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದ ಅವರು, ಪ್ಯಾಕ್ ಮಾಡಲ್ಪಟ್ಟ ನೀರಿನ ಬಾಟಲ್‌ಗಳಿಗೆ ಐಎಸ್‌ಐ ಗುಣಮಟ್ಟದ ಪ್ರಮಾಣಪತ್ರ ಅಗತ್ಯವಾಗಿದೆ. ಗ್ರಾಹಕರ ಹಿತಾಸಕ್ತಿಯ ದೃಷ್ಟಿಯಿಂದ ಇದನ್ನು ಅನುಷ್ಠಾನಗೊಳಿಸಬೇಕಾಗಿದೆ ಎಂದು ಪಾಸ್ವಾನ್ ಹೇಳಿದರು. ಇತ್ತೀಚೆಗೆ ಮಲ್ಟಿಪ್ಲೆಕ್ಸ್ ಒಂದರಲ್ಲಿ ಎಂಆರ್‌ಪಿ ಮೀರಿ ನೀರಿನ ಬಾಟಲ್ ಮಾರಿದ ಪ್ರಕರಣದಲ್ಲಿ ರಾಷ್ಟ್ರೀಯ ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗವು ದಂಡ ವಿಧಿಸಿದ್ದನ್ನು ಇಲ್ಲಿ ಉಲ್ಲೇಖಿಸಬಹುದಾಗಿದೆ.







