ಪೇಜಾವರ ಶ್ರೀಗಳನ್ನು ಬಹಿರಂಗ ಚರ್ಚೆಗೆ ಆಹ್ವಾನಿಸಿದ ‘ದೇವರು’

ಬೆಂಗಳೂರು, ಅ. 14: ಸಾಮಾಜಿಕ ಹರಿಕಾರ ಬಸವಣ್ಣ ಅವರು ಸಹಪಂಕ್ತಿ ಭೋಜನ ವಿರೋಧಿಸಿದ್ದರು ಎಂದು ಹಸಿ ಸುಳ್ಳು ಹೇಳಿರುವ ಪೇಜಾವರ ಶ್ರೀಗಳು ಬಹಿರಂಗ ಚರ್ಚೆಗೆ ಬರಲಿ ಎಂದು ರೇವಣಸಿದ್ದೇಶ್ವರ ಮಹಾಮಠದ ಬಸವರಾಜು ದೇವರು ಸವಾಲು ಹಾಕಿದ್ದಾರೆ.
‘ಆಹಾರ ನಮ್ಮ ಆಯ್ಕೆ, ಭೂಮಿ ನಮ್ಮ ಹಕ್ಕು’ ಎಂಬ ಘೋಷ ವಾಕ್ಯದೆಡೆ, ನೂರಾರು ಪ್ರಗತಿಪರ ಸಂಘಟನೆಗಳು ಬೆಂಗಳೂರಿನಿಂದ ಉಡುಪಿಯವರೆಗೆ ಜಾಗೃತ ಜಾಥದ ಮೂಲಕ ಉಡುಪಿಯಲ್ಲಿ ಬಹಿರಂಗವಾಗಿ ಬೃಹತ್ ಜಾಥ ಮತ್ತು ಸಭೆ ಆಯೋಜಿಸಿದ್ದು, ಅಭಿನಂದನಾರ್ಹ. ಅಲ್ಲದೆ, ಇದರಲ್ಲಿ ಗೋ-ಭಯೋತ್ಪಾದನೆಗೆ ಖಂಡನೆ, ಪಂಕ್ತಿಭೇದಕ್ಕೆ ವಿರೋಧ ಮತ್ತು ಭೂಮಿ ಹಕ್ಕಿಗೆ ನಿರ್ಣಯಗಳಾಗಿದ್ದು ಸ್ವಾಗತಾರ್ಹ.
ಆದರೆ, ಇಂತಹ ಸಮಾಜಮುಖಿ ಕಾರ್ಯಕ್ರಮವನ್ನು ಬೆಂಬಲಿಸುವ ಬದಲು, ನಮೋ ಬ್ರಾಂಡ್ ಹೆಸರಿನ ಗುಂಪು, ದಲಿತ-ದಮನಿತರ ಮೆರವಣಿಗೆ ವಿರೋಧಿಸಿ, ದಲಿತರು ನಡೆದ ದಾರಿಯ ವಿರುದ್ಧ ಉಡುಪಿ ಸ್ವಚ್ಛ ಅಭಿಯಾನ ಮಾಡಲು ಹೊರಟಿರುವುದು ಸರಿಯಲ್ಲ. ಅಲ್ಲದೆ, ‘ಕನಕ-ನಡೆ’ ಹೆಸರಿಟ್ಟಿರುವುದು ಖಂಡನೀಯ. ಕನಕದಾಸರು ಜಾತಿ ವಿನಾಶಕ್ಕಾಗಿ ದುಡಿದಿದ್ದರು ಎಂದು ಬಸವರಾಜ ದೇವರು ಹೇಳಿದ್ದಾರೆ.
ಕನಕದಾಸರ ಹೋರಾಟಗಳು ವೈದಿಕತೆಯ ಜಾತಿ ತಾರತಮ್ಯದ ವಿರುದ್ಧವಾಗಿತ್ತು. ಆ ಕಾರಣಕ್ಕಾಗಿ ಅಂದಿನ ಕರ್ಮಠ ಬ್ರಾಹ್ಮಣರು ನಮ್ಮ ಕನಕದಾಸರನ್ನು ಮಠದೊಳಗೆ ಪ್ರವೇಶ ನೀಡದೆ, ಅಪಮಾನ ಮಾಡಿದ್ದರು. ಅಂತಹ ಕುತಂತ್ರಿಜನಗಳೇ ಈಗ ನಮ್ಮ ಧಾರ್ಮಿಕ ವ್ಯಕ್ತಿಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಜಾತಿ ನಿಮೂರ್ಲನೆಗೆ ದುಡಿದ ಗಾಂಧಿಜೀಯವರ ಕೈಗೆ ಪೊರಕೆ ಕೊಟ್ಟಿರುವವರ ಮೇಲೆ ನಂಬಿಕೆಯಿಟ್ಟಿಕೊಳ್ಳಲು ಸಾಧ್ಯ ಎಂದು ಪ್ರಶ್ನಿಸಿರುವ ಬಸವರಾಜ ದೇವರು, ಗಾಂಧಿಜೀಯ ಹಂತಕ ನಾಥೂರಾಂ ಗೂಡ್ಸೆ ದೇವಾಲಯ ಕಟ್ಟಲು ಹೊರಟಿದ್ದಾರೆ ಎಂದು ಆರೋಪಿಸಿದರು.
ಬಸವಣ್ಣ ಮತ್ತು ಅವರು ಸಹ ಪಂಕ್ತಿ ಭೋಜನಕ್ಕೆ ವಿರೋಧಿಸುತ್ತಿದ್ದರು ಎಂದು ಪೇಜಾವರ ಶ್ರೀಗಳು ಸುಳ್ಳು ಹೇಳಿದ್ದಾರೆ. ಈ ಕೂಡಲೇ ಶ್ರೀಗಳು ಕ್ಷೇಮೆಯಾಚಿಸುವ ಜೊತೆಗೆ ಬಹಿರಂಗ ಚರ್ಚೆಗೆ ಬರಲಿ ಎಂದು ಸವಾಲು ಹಾಕಿದ್ದಾರೆ.







