ಬೆಳೆಹಾನಿ: ಸಮರೋಪಾದಿ ಪರಿಹಾರ ವಿತರಣೆಗೆ ಸಿಇಒ ಸೂಚನೆ
ಶಿವಮೊಗ್ಗ, ಅ.14: ಬೆಳೆಹಾನಿ ಪರಿಹಾರ ನೀಡುವ ಸಂಬಂಧಿಸಿದಂತೆ ಕಂದಾಯ ಇಲಾಖೆ ಮತ್ತು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಸಮರೋಪಾದಿಯಲ್ಲಿ ಕರ್ತವ್ಯ ನಿರ್ವಹಿಸಬೇಕೆಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ.ರಾಕೇಶ್ ಕುಮಾರ್ ಸೂಚಿಸಿದ್ದಾರೆ.
ಶಿವಮೊಗ್ಗ ತಾಲೂಕು ಕಚೇರಿಯಲ್ಲಿ ಬರ ಪರಿಹಾರ ಕಾಮಗಾರಿಗಳನ್ನು ಕೈಗೊಳ್ಳುವ ಸಂಬಂಧ ಶುಕ್ರವಾರ ಹಮ್ಮಿಕೊಳ್ಳಲಾದ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.
ಇಂದಿನಿಂದ ಹತ್ತು ದಿನಗಳ ಕಾಲ ಬೆಳೆಹಾನಿ ಪರಿಹಾರ ಸಂಬಂಧಿಸಿದಂತೆ ಕಂದಾಯ ಮತ್ತು ಪಂಚಾಯತ್ ಅಧಿಕಾರಿಗಳು ಯಾವುದೇ ಗೊಂದಲ ಬಾರದಂತೆ ಸಮರೋಪಾದಿಯಲ್ಲಿ ಕರ್ತವ್ಯನಿರ್ವಹಿಸಬೇಕೆಂದು ಸೂಚಿಸಿದರು.
ಜಿಲ್ಲೆಯಲ್ಲಿ ಬರ ಪರಿಸ್ಥಿತಿ ಉದ್ಭವಿಸಿರುವ ಹಿನ್ನೆಲೆಯಲ್ಲಿ ಶಿವಮೊಗ್ಗ ಸೇರಿದಂತೆ ಆರು ತಾಲೂಕುಗಳನ್ನು ಈಗಾಗಲೇ ಬರಪೀಡಿತ ತಾಲೂಕು ಎಂದು ಘೋಷಿಸಿರುವುದರಿಂದ ಹಾಗೂ ಇದೇ ತಿಂಗಳ 20ರೊಳಗೆ ಬೆಳೆಹಾನಿಗೆ ಸಂಬಂಧಿಸಿದಂತೆ ಸಂತ್ರಸ್ತರಿಂದ ಅರ್ಜಿಗಳನ್ನು ಪಡೆಯಲು ಕೊನೆಯ ದಿನವಾಗಿರುವುದರಿಂದ ಜಿಲ್ಲಾಡಳಿತ ಈ ಪ್ರಕ್ರಿಯೆಯನ್ನು ಅತ್ಯಂತ ತ್ವರಿತ ಮತ್ತು ಸ್ಪಷ್ಟವಾಗಿ ಮಾಡಿ ಮುಗಿಸಬೇಕಿದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಇದೊಂದು ವಿಶೇಷ ಸಂದರ್ಭ ಎಂದು ಭಾವಿಸಿ ಯಾವುದೇ ಗೊಂದಲ ಇಲ್ಲದಂತೆ ಪರಿಹಾರ ಕಾರ್ಯವನ್ನು ನಿರ್ವಹಿಸಬೇಕು ಎಂದರು.
ಈಗಾಗಲೇ ರಚಿಸಲಾಗಿರುವ ಕಂದಾಯ, ಪಂಚಾಯತ್ ಮತ್ತು ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳ ತಂಡಗಳು ತಮಗೆ ವಹಿಸಿರುವ ಜವಾಬ್ದಾರಿಯನ್ನು ತಮ್ಮ ಪ್ರತಿಷ್ಠೆಯನ್ನು ಬದಿಗಿಟ್ಟು ಪ್ರಾಮಾಣಿಕವಾಗಿ ಮಾಡಬೇಕಿದೆ ಎಂದರು.
ಕಂದಾಯ ಸಚಿವರ ಉಸ್ತುವಾರಿ ಜಿಲ್ಲೆಯಾಗಿರುವುದರಿಂದ ಇಲ್ಲಿನ ಕಾರ್ಯನಿರ್ವಹಣೆ ರಾಜ್ಯದ ಇತರೆ ಜಿಲ್ಲೆಗಳಿಗೆ ಮಾದರಿಯಾಗಬೇಕಿದೆ. ಅಲ್ಲದೆ ಪ್ರತಿ ಸಂತ್ರಸ್ತ ರೈತರಿಗೂ ಪರಿಹಾರ ತಪ್ಪದೆ ಸಿಗಬೇಕಿದೆ. ಆದ್ದರಿಂದ ನಿಯೋಜಿತ ತಂಡಗಳು ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಬೇಕು. ನಿಯಮಾನುಸಾರ ಪರಿಹಾರ ಸಿಗುವಂತೆ ಹಾಗೂ ಸರ್ವೇ ಸಂದರ್ಭದಲ್ಲಿ ನಿಯಮಾನುಸಾರ ಖುದ್ದು ಪರಿಶೀಲಿಸಿ ಬೆಳೆಹಾನಿ ದಾಖಲಿಸಬೇಕು ಎಂದು ಅವರು ಸೂಚಿಸಿದರು.
ಶುಕ್ರವಾರದಿಂದ ಪ್ರತಿ ಗ್ರಾಮ ಪಂಚಾಯತ್‌ಗಳ ಬೆಳೆಹಾನಿ ಸಂಬಂಧಿಸಿದಂತೆ ನಿಗದಿತ ಅರ್ಜಿ ನಮೂನೆಗಳು ರೈತರಿಗೆ ಸಿಗಬೇಕು. ಈ ಸಂಬಂಧ ವ್ಯಾಪಕ ಪ್ರಚಾರ ಮಾಡಬೇಕು ಹಾಗೂ ನಿರ್ದಿಷ್ಟ ದಾಖಲೆಗಳೊಂದಿಗೆ ಇದೇ ತಿಂಗಳ 20ರೊಳಗೆ ಭರ್ತಿಮಾಡಿದ ಅರ್ಜಿಗಳನ್ನು ಸಲ್ಲಿಸುವಂತೆ ರೈತರಿಗೆ ಮಾಹಿತಿ ನೀಡಬೇಕು. ಪ್ರತಿದಿನವೂ ಬಂದ ಅರ್ಜಿಗಳನ್ನು ಅಂದು ಸಂಜೆಯೇ ಮೇಲಧಿಕಾರಿಗಳಿಗೆ ಸಲ್ಲಿಸಬೇಕು ಎಂದರು.
ಸಭೆಯಲ್ಲಿ ತಹಶೀಲ್ದಾರ್ ಸತ್ಯನಾರಾಯಣ, ಕೃಷಿ ಸಹಾಯಕ ನಿರ್ದೇಶಕ ಮೋಹನ್, ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ಲಕ್ಷ್ಮೀಕಾಂತ್ ಸೇರಿದಂತೆ ಶಿವಮೊಗ್ಗ ತಾಲೂಕಿನ ಎಲ್ಲ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಉಪ ತಹಶೀಲ್ದಾರರು, ರಾಜಸ್ವ ನಿರೀಕ್ಷಕರು ಸೇರಿದಂತೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.







