ಅಂಬೇಡ್ಕರ್ ಪ್ರತಿಮೆಗೆ ಅವಮಾನ: ಖಂಡನೆ
ಸಾಗರ, ಅ.14: ಭದ್ರಾವತಿ ನಗರದಲ್ಲಿ ಸಂವಿಧಾನ ಶಿಲ್ಪಿಡಾ. ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಚಪ್ಪಲಿ ಹಾರಹಾಕಿ ಅವಮಾನ ಮಾಡಿರುವ ಘಟನೆಯನ್ನು ಖಂಡಿಸಿ ಶುಕ್ರವಾರ ಟಿಪ್ಪುಸಹಾರ ಯುವಜನ ಸಂಘದ ವತಿಯಿಂದ ಉಪವಿಭಾಗಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಒತ್ತಾಯಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಸೈಯದ್ ಜಮೀಲ್, ಭದ್ರಾವತಿ ಪಟ್ಟಣದಲ್ಲಿ ಸಂವಿಧಾನಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಅವಮಾನ ಮಾಡಿರುವುದು ಅತ್ಯಂತ ಹೇಯ ಕೃತ್ಯವಾಗಿದೆ. ಪ್ರತಿಮೆಗೆ ಹಾಕಿದ್ದ ಹೂವಿನ ಹಾರವನ್ನು ಕಿತ್ತೆಸೆದು, ಚಪ್ಪಲಿ ಹಾರ ಹಾಕುವ ಮೂಲಕ ಇಡೀ ದಲಿತ ಸಮೂಹಕ್ಕೆ ಅವಮಾನ ಮಾಡಿದಂತಾಗಿದೆ ಎಂದರು. ಭದ್ರಾವತಿ ಪಟ್ಟಣದಲ್ಲಿ ಅಂಬೇಡ್ಕರ್ ಪ್ರತಿಮೆಗೆ ಅವಮಾನ ಮಾಡಿರುವ ಕಿಡಿಗೇಡಿಗಳನ್ನು ತಕ್ಷಣ ಬಂಧಿಸಿ, ಸೂಕ್ತ ಕಾನೂನು ಕ್ರಮ ಜರಗಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಂಘದ ಗೌರವಾಧ್ಯಕ್ಷ ಗಫೂರ್ ಸಾಬ್, ನಗರ ಘಟಕದ ಸೈಯದ್ ಝಾಕೀರ್, ಡಿಪ್ಪಿಆನಂದಪುರಂ, ಶಬ್ಬೀರ್, ನೂರುಲ್ಲಾ, ಬಾಷಾ, ಮುಖ್ತಿಯಾರ್, ಮೊಹಿದ್ದೀನ್ ಸಾಬ್, ಭಾಷಾ ರಾಮನಗರ, ಸಮದ್, ಸಲೀಂ, ದಲಿತ ಸಂಘರ್ಷ ಸಮಿತಿಯ ಲಕ್ಷ್ಮಣ ಸಾಗರ್, ಧರ್ಮರಾಜ್, ವಿನಾಯಕ ಮತ್ತಿತರರು ಹಾಜರಿದ್ದರು.





