ಏಕರೂಪ ಕಾನೂನು ಹೆಸರಲ್ಲಿ ಇಸ್ಲಾಮ್‌ಗೆ ಘಾಸಿ: ಪ್ರತಿಭಟನೆ

ಶಿವಮೊಗ್ಗ, ಅ.14: ಇಸ್ಲಾಮ್ ಧರ್ಮದಲ್ಲಿರುವ ತ್ರಿವಳಿ ತಲಾಖ್ ರದ್ದುಗೊಳಿಸುವಂತೆ ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಸುಪ್ರೀಂ ಕೋರ್ಟ್‌ಗೆ ಅಫಿದವಿಟ್ ಸಲ್ಲಿಸಿರುವ ಕ್ರಮ ಸರಿಯಲ್ಲ. ಏಕರೂಪ ಕಾನೂನು ಹೆಸರಲ್ಲಿ ಇಸ್ಲಾಮ್ ಧರ್ಮೀಯರ ಭಾವನೆಗಳಿನ್ನು ಘಾಸಿಗೊಳಿಸಲು ಕೇಂದ್ರ ಸರಕಾರ ಯತ್ನಿಸುತ್ತಿದೆ ಎಂದು ಆರೋಪಿಸಿ, ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕವು ಶುಕ್ರವಾರ ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿತು. ಕೇಂದ್ರ ಸರಕಾರ ತ್ರಿವಳಿ ತಲಾಖ್ ಪದ್ಧತಿಯನ್ನು ರದ್ದುಗೊಳಿಸುವಂತೆ ಸುಪ್ರೀಂ ಕೋರ್ಟ್‌ಗೆ ಅಫಿದವಿಟ್ ಸಲ್ಲಿಸಲು ನೀಡಿರುವ ಕಾರಣ ಅಸ್ಪಷ್ಟವಾಗಿದೆ. ಒಂದೇ ಉಸಿರಿನಲ್ಲಿ ತ್ರಿವಳಿ ತಲಾಖ್ ಹೇಳಿದ ಕೂಡಲೇ ವಿವಾಹ ಬಂಧನದಿಂದ ಮುಕ್ತಿ ಹೊಂದಬಹುದು. ಇದರಿಂದ ಮಹಿಳೆಯರಿಗೆ ಅನ್ಯಾಯವಾಗುತ್ತಿದೆ ಎಂದು ನ್ಯಾಯಾಲಯಕ್ಕೆ ಕೇಂದ್ರ ಸರಕಾರ ಮಾಹಿತಿ ನೀಡಿದೆ. ತಕ್ಷಣವೇ ರಾಷ್ಟ್ರಪತಿಯವರು ಮಧ್ಯೆ ಪವೇಶಿಸಬೇಕು. ಈಗಿರುವಂತೆ ಮುಸ್ಲಿಮರ ವೈಯಕ್ತಿಕ ಕಾನೂನು ಮುಂದುವರಿಸಿಕೊಂಡು ಹೋಗುವಂತೆ ಹಾಗೂ ಸಂವಿಧಾನದ ಆಶಯಗಳನ್ನು ಗೌರವಿಸುವಂತೆ ಕೇಂದ್ರ ಸರಕಾರಕ್ಕೆ ತಾಕೀತು ಮಾಡಬೇಕು ಎಂದು ಪ್ರತಿಭಟನಾಕಾರರು ಮನವಿ ಮಾಡಿದ್ದಾರೆ. ಪ್ರತಿಭಟನೆಯಲ್ಲಿ ಸಂಘಟನೆಯ ಮುಖಂಡರಾದ ಮುಹಮ್ಮದ್ ನಿಹಾಲ್, ಸೈಯದ್ ವಾಹಿದ್ ಅಡ್ಡು, ಮುಹಮ್ಮದ್ ಆರೀಫ್‌ವುಲ್ಲಾ, ಮಹಮ್ಮದ್ ಹುಸೈನ್, ಆರೀಫ್ ಖಾನ್, ಮುಹಮ್ಮದ್ ನಜಂ ಮೊದಲಾದವರಿದ್ದರು.





