ಭೂ ಹಕ್ಕು ನೀಡಲು ಒತ್ತಾಯಿಸಿ ಆದಿವಾಸಿಗಳ ಧರಣಿ

ಚಿಕ್ಕಮಗಳೂರು, ಅ.14: ಭೂ ಹೀನರಿಗೆ ಭೂಮಿಯ ಹಕ್ಕು ಕೊಡಲು ಸರಕಾರ ನಿರ್ಲಕ್ಷ ವಹಿಸುತ್ತಿದೆ. ರಾಜ್ಯದಲ್ಲಿ ಬಗರ್ ಹುಕುಂ ಸಾಗುವಳಿದಾರರಿಗೆ ಫಾರಂ ನಂಬರ್ 50-53ರಲ್ಲಿನ ಅರ್ಜಿಗಳು ಇತ್ಯರ್ಥವಾಗುತ್ತಿಲ್ಲ. ಈ ಬಗ್ಗೆ ಸರಕಾರ ಗಂಭೀರ ಕ್ರಮ ಅನುಸರಿಸಬೇಕು ಎಂದು ಒತ್ತಾಯಿಸಿ ಜಿಲ್ಲಾ ಬುಡಕಟ್ಟು ಕೃಷಿಕರ ಸಂಘದ ಕಾರ್ಯಕರ್ತರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿ ಮನವಿ ಸಲ್ಲಿಸಿದರು.
ತೋಟಿ, ತಳವಾರಿ, ನೀರಗಂಟಿ ಇತ್ಯಾದಿ ವರ್ಗಗಳಿಗೆ ಸರಕಾರದ ಸ್ವಾಧೀನದಲ್ಲಿರುವ ಭೂಮಿ ದಕ್ಕುತ್ತಿಲ್ಲ. ಡಾ.ಬಿ.ಆರ್. ಅಂಬೇಡ್ಕರ್‌ರ ಶತಮಾನೋತ್ಸವದಂದು ಘೋಷಿಸಿದ ಹೆಚ್ಚುವರಿ ಭೂಮಿಯಲ್ಲಿ ಶೆ.75ರಷ್ಟು ದಲಿತರಿಗೆ, ಆದಿವಾಸಿಗಳಿಗೆ ಮೀಸಲಿಟ್ಟು ಹಂಚುವ ಕಾರ್ಯ ಸಂಪೂರ್ಣವಾಗಿ ಕೈಬಿಡಲಾಗಿದೆ. ಭೂ ನ್ಯಾಯಮಂಡಳಿ ರಚನೆಯಾಗಿದ್ದರೂ ಸ್ಥಳೀಯ ಶಾಸಕರು, ಅಧಿಕಾರಿಗಳು, ಬಗರ್ ಹುಕುಂ ಸಮಿತಿ ಸಭೆ ಸೇರಿ ಬಡವರಿಗೆ ಭೂಮಿ ಮಂಜೂರಾತಿ ಮಾಡುತ್ತಿಲ್ಲ ಎಂದು ಧರಣಿ ನಿರತರು ಆರೋಪಿಸಿದರು.
ಅರಣ್ಯಾಧಾರಿತ ಆದಿವಾಸಿಗಳ ಹೋರಾಟದ ಪರಿಶ್ರಮದಿಂದ ಜಾರಿಗೆ ಬಂದ 2006-2008ರ ಅರಣ್ಯ ಹಕ್ಕು ಕಾಯ್ದೆ ಕಟ್ಟುನಿಟ್ಟಾಗಿ ಅನುಷ್ಠಾನ ಮಾಡಿ ಸಮುದಾಯ ಅಭಿವೃದ್ಧಿ ಹಾಗೂ ವ್ಯೆಯಕ್ತಿಕ ಭೂಮಿಯ ಹಕ್ಕನ್ನು ಕೊಡದೆ, ಆಳುವ ಜಾತಿವಾದಿ ಸರಕಾರಗಳು ಸಂವಿಧಾನ ಹಾಗೂ ಹೈಕೋರ್ಟ್ ಆದೇಶದ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ. ತಲೆ ತಲಾಂತರದಿಂದ ಆದಿವಾಸಿ ಸಮುದಾಯಗಳ ಅರಣ್ಯದ ಮೇಲಿನ ಹಕ್ಕನ್ನು ಧಿಕ್ಕರಿಸಿ ಆದಿವಾಸಿಗಳ ನೆಲೆಯಾದ ಕಾಡು, ನೆಲ, ಸಂಪನ್ಮೂಲಗಳ ಆಸರೆಯಿಂದ ಒಕ್ಕಲೆಬ್ಬಿಸಿ ಬೀದಿಪಾಲು ಮಾಡುತ್ತಿದ್ದಾರೆ. ಆದರೆ ನಮ್ಮನ್ನಾಳುವ ಸರಕಾರ ಶಾಶ್ವತ ಜೀವನಾಧಾರ ಭೂಮಿ ಹಂಚುವ ಯೋಜನೆ ಜಾರಿಗೊಳಿಸುವುದು ಸಾಮಾಜಿಕ ನ್ಯಾಯದ ಬದ್ದತೆಯಾಗಿದೆ ಎಂದು ಹೇಳಿದ್ದಾರೆ.
ಜಿಲ್ಲೆಯ ಎಲ್ಲ ಭೂ ಮಂಜೂರಾತಿ ಸಮಿತಿ ಕಡ್ಡಾಯವಾಗಿ ಸಭೆ ನಡೆಸಿ ಹತ್ತಾರು ವರ್ಷಗಳಿಂದ ಇತ್ಯರ್ಥವಾಗದೆ ಉಳಿದಿರುವ ಫಾರಂ ನಂ.50-53ರಲ್ಲಿನ ಅರ್ಜಿಗಳನ್ನು ಕೂಡಲೇ ಇತ್ಯರ್ಥಗೊಳಿಸಬೇಕು. ಸಾಗುವಳಿ ಮಾಡಿಕೊಂಡು ಜೀವನ ಸಾಗಿಸುತ್ತಿರುವ ಅರ್ಜಿ ಸಲ್ಲಿಸದ ದಲಿತ, ಆದಿವಾಸಿ, ಬಡವರಿಗೆ, ಸಣ್ಣ ರೈತರಿಗೆ ಪುನಃ ಅರ್ಜಿ ಸಲ್ಲಿಕೆಗೆ ಅವಕಾಶ ನಿಡಬೇಕು. ಜಿಲ್ಲೆಯಲ್ಲಿ ಅರಣ್ಯ ಹಕ್ಕು 2006-2008, ತಿದ್ದುಪಡಿ ನಿಯಮ 2012ರ ಆದೇಶದಂತೆ ಆದಿವಾಸಿಗಳು ಮತ್ತು ಅರಣ್ಯ ವಾಸಿಗಳಿಗೆ ಸಮುದಾಯ ಹಕ್ಕನ್ನು ಮನ್ನಣೆ ಮಾಡಿ ಹಕ್ಕುಪತ್ರ ನೀಡಬೇಕು. ಆದಿವಾಸಿಗಳಿಗೆ ನೀಡುತ್ತಿರುವ ಅನಗತ್ಯ ಕಿರುಕುಳ ಮತ್ತು ಒಕ್ಕಲೆಬ್ಬಿಸುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಬುಡಕಟ್ಟು ಸಂಘದ ಅಧ್ಯಕ್ಷ ಕೆ.ಎನ್. ವಿಠಲ್, ಆದಿವಾಸಿ ದಲಿತ ಭೂ ಹಕ್ಕಿನ ಆಂದೋಲನದ ಸದಸ್ಯೆ ಎಚ್.ಎನ್. ಜ್ಯೋತಿ, ತಾಲೂಕು ಬುಡಕಟ್ಟು ಕೃಷಿಕರ ಸಂಘದ ಅಧ್ಯಕ್ಷ ಸುರೇಶ್, ಕೊಪ್ಪದ ಶೇಖರ್, ಚಿಕ್ಕಮಗಳೂರಿನ ಕೃಷ್ಣಪ್ಪ, ನ.ರಾ.ಪುರದ ಮಂಜುನಾಥ್, ಶೃಂಗೇರಿಯ ಆನಂದ್ ಕಾಮ್ಲೆ ಮತ್ತಿತರರು ಉಪಸ್ಥಿತರಿದ್ದರು.







