ಬೈಪಾಸ್ ನಿರ್ಮಿಸಲು ಆಗ್ರಹಿಸಿ ಕಾರವಾರ ಚಲೋ
ಕಾರವಾರ, ಅ.14: ಅಮದಳ್ಳಿಯಿಂದ ಅರಗಾ ಪತಂಜಲಿವರೆಗಿನ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಬೈಪಾಸ್ ರಸ್ತೆ ನಿರ್ಮಿಸುವಂತೆ ಆಗ್ರಹಿಸಿ ಶಾಸಕ ಸತೀಶ ಸೈಲ್ ನೇತೃತ್ವದಲ್ಲಿ ಕಾರವಾರ ಚಲೋ ಹೋರಾಟ ಶುಕ್ರವಾರ ನಡೆಯಿತು. ತಾಲೂಕಿನ ಚೆಂಡಿಯಾದಿಂದ ಕಾರವಾರದವರೆಗೆ ಸಾವಿರಾರು ಜನರು ಪಾದಯಾತ್ರೆ ನಡೆಸಿ ರಾಷ್ಟ್ರೀಯ ಹೆದ್ದಾರಿಯನ್ನು ಜನರ ಒಳಿತಿಗಾಗಿ ಬೈಪಾಸ್ ಮೂಲಕ ಮಾಡಬೇಕು ಎಂದು ಆಗ್ರಹಿಸಿದ ಜನರು, ನಗರದ ಲಂಡನ್ ಬ್ರಿಜ್ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಕುಳಿತು ತಮ್ಮ ಪ್ರತಿ ಭಟನೆ ವ್ಯಕ್ತಪಡಿಸಿ ಜಿಲ್ಲಾಡಳಿತದ ಮೂಲಕ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಸತೀಶಸೈಲ್, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಅಮದಳ್ಳಿಯಿಂದ ಅರಗಾ ಪತಂಜಲಿ ನೌಕಾನೆಲೆ ಆಸ್ಪತ್ರೆ ಮುಖಾಂತರ ಹೆದ್ದಾರಿ ಅಗಲೀಕರಣಕ್ಕೆ ಮುಂದಾಗಿದ್ದಾರೆ. ಈ ಪ್ರದೇಶದಲ್ಲಿ ಅನೇಕ ಸೀಬರ್ಡ್ ನಿರಾಶ್ರಿತರಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಯೋಜನೆಯಿಂದ ಅವರು ಮತ್ತೆ ನಿರಾಶ್ರಿತರಾಗಬೇಕಾಗುತ್ತಿದೆ. ಈ ಬಗ್ಗೆ ಕೇಂದ್ರ ಸರಕಾರ ಮಧ್ಯಪ್ರವೇಶಿಸಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಅಮದಳ್ಳಿ, ತೋಡೂರ, ಚೆಂಡಿಯಾ ಅರಗಾ ಗ್ರಾಮದ ಸುಮಾರು 200ಕ್ಕೂ ಹೆಚ್ಚು ಕುಟುಂಬಗಳು ತಮ್ಮ ಮನೆ, ಜಮೀನುಗಳನ್ನು ಕಳೆದುಕೊಳ್ಳುವ ಆತಂಕ ಎದುರಾಗಿದೆ ಎಂದರು.
ಹೆದ್ದಾರಿ ಪ್ರಾಧಿಕಾರದ ಈ ಕ್ರಮದಿಂದಾಗಿ ಸಣ್ಣಪುಟ್ಟ ಉದ್ಯೋಗ ಮಾಡಿಕೊಂಡಿರುವ ಇವರ ಜೀವನ ಬೀದಿಗೆ ಬರಲಿದ್ದು, ಅಮದಳ್ಳಿ ಸುತ್ತಮುತ್ತಲಿನ 100 ಕ್ಕೂ ಹೆಚ್ಚಿನ ಅಂಗಡಿ ಮುಂಗಟ್ಟುಗಳು ಮುಚ್ಚುವ ಆತಂಕ ಎದುರಾಗಿದೆ. ಅಮದಳ್ಳಿ ಗ್ರಾಮ ಪಂಚಾಯತ್ ಸೇರಿದಂತೆ ಹಲವಾರು ಸರಕಾರಿ ಕಚೇರಿಗಳಿಗೆ ಹಾನಿಯಾಗಲಿದೆ. ಅಮದಳ್ಳಿಯಿಂದ ಬಿಣಗಾವರೆಗಿನ ಶಾಲಾ ಕಾಲೇಜುಗಳಿಗೆ ಕ್ರೀಡಾಕೂಟಕ್ಕೆ ಆಸರೆಯಾಗಿದ್ದ ಕ್ರೀಡಾ ಮೈದಾನವೇ ಭೂಸ್ವಾಧೀನವಾಗಲಿದೆ.
ಈ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ದೂರು ನೀಡಿ ಮನವಿ ಮಾಡಲಾಗಿದೆ. ಗ್ರಾಪಂನ ಪ್ರಕಾರ ಪ್ರಸ್ತಾಪಿತ ಅಮದಳ್ಳಿಯಿಂದ ಅರಗಾ ಪತಂಜಲಿ ಆಸ್ಪತ್ರೆಯವರೆಗೆ ಬೈಪಾಸ್ ರಸ್ತೆಯಲ್ಲಿ ಒಂದು ಮನೆ ಸ್ಥಳಾಂತರಿಸಿ ನಿರ್ಮಿಸಬಹುದು. ಇದರಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಪರಿಹಾರ ನೀಡುವ ಮೊತ್ತದಲ್ಲಿ ಗಣನೀಯವಾಗಿ ಉಳಿಕೆಯಾಗಲಿದೆ. ಜೊತೆಗೆ ಪ್ರಸ್ತಾವಿತ ಬೈಪಾಸ್ ರಸ್ತೆ ನೇರವಾಗಿರುವುದರಿಂದ ನಿರ್ಮಾಣ ವೆಚ್ಚವೂ ಕಡಿಮೆಯಾಗಲಿದೆ. ಬೈಪಾಸ್ ರಸ್ತೆ ಸಾರ್ವಜನಿಕರಿಗೆ ಎಲ್ಲ ರೀತಿಯಲ್ಲಿಯೂ ಸೂಕ್ತವಾಗಿರುತ್ತದೆ ಎಂದು ಹೆ.ಪ್ರಾಧಿಕಾರಕ್ಕೆ ಸಲಹೆ ನೀಡಿದ ಅವರು, ಅಮದಳ್ಳಿ ಗಣಪತಿ ದೇವಸ್ಥಾನದಿಂದ ಅರಗಾ ಪತಂಜಲಿ ಆಸ್ಪತ್ರೆ ಹಿಂಬದಿ ವರೆಗಿನ ಹೆದ್ದಾರಿಯನ್ನು, ಬೈಪಾಸ್ ರಸ್ತೆಯನ್ನಾಗಿ ಮಾಡಬೇಕೆಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಸಂತ್ರಸ್ತರು, ವಿದ್ಯಾರ್ಥಿಗಳು, ನಾಗರಿಕರು ಪಾಲ್ಗೊಂಡಿದ್ದರು.







