‘ಅಪ್ಪಾ,ನನ್ನಿಂದಾಗಿ ನಿನಗೆ ಅವಮಾನ’ ಆತ್ಮಹತ್ಯೆಗೆ ಮುನ್ನ ವಿದ್ಯಾರ್ಥಿಯ ಸಂದೇಶ

ಕೋಟಾ,ಅ.14: ರಾಜಸ್ಥಾನದ ಕೋಟಾದಲ್ಲಿ 16ರ ಹರೆಯದ ವಿದ್ಯಾರ್ಥಿಯೋರ್ವ ಹೆತ್ತವರ ನಿರೀಕ್ಷೆಯನ್ನು ಸಾಧ್ಯವಾಗಿಸದ ನೋವಿನಲ್ಲಿ ಭಾವನಾತ್ಮಕ ವೀಡಿಯೊ ಸಂದೇಶವನ್ನು ತನ್ನ ಮೊಬೈಲ್‌ನಲ್ಲಿ ಚಿತ್ರೀಕರಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಬಿಹಾರ ಮೂಲದ ಅಮನ್‌ಕುಮಾರ್ ಗುಪ್ತಾ ಉನ್ನತ ಶಿಕ್ಷಣದ ಕೋರ್ಸ್‌ಗಳ ಪ್ರವೇಶ ಪರೀಕ್ಷೆಗೆ ತರಬೇತಿ ನೀಡುವಲ್ಲಿ ಖ್ಯಾತಿ ಹೊಂದಿರುವ ಕೋಟಾದಲ್ಲಿ ಈ ವರ್ಷ ಆತ್ಮಹತ್ಯೆ ಮಾಡಿ ಕೊಂಡಿರುವ 14ನೇ ವಿದ್ಯಾರ್ಥಿಯಾಗಿದ್ದಾನೆ.
ಗುರುವಾರ ಈತ ನಿರ್ಮಾಣ ಹಂತದ ಸೇತುವೆಯಿಂದ ಚಂಬಲ್ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಬಿಹಾರದ ವೈಶಾಲಿ ಜಿಲ್ಲೆಯ ರಾಘೋಪುರ ಗ್ರಾಮದ ಶಿಕ್ಷಕರೋರ್ವರ ಪುತ್ರನಾದ ಅಮನ್ ಕಳೆದ ಆರು ತಿಂಗಳುಗಳಿಂದ ಇಲ್ಲಿಯ ಪ್ರತಿಷ್ಠಿತ ಕೋಚಿಂಗ್ ಸೆಂಟರ್‌ನಲ್ಲಿ ವೈದ್ಯಕೀಯ ಪ್ರವೇಶ ಪರೀಕ್ಷೆಗಾಗಿ ತರಬೇತಿ ಪಡೆಯುತ್ತಿದ್ದ.
11.14 ನಿಮಿಷಗಳ ಮೊಬೈಲ್ ವೀಡಿಯೊದಲ್ಲಿ ಅಮನ್ ತನ್ನ ತಪ್ಪುಗಳಿಗೆ ತಾನೇ ಹೊಣೆ ಎಂದಿದ್ದಾನೆ. ಜೀವನದಲ್ಲಿ ಮುಂದೆ ಬರಬೇಕೆಂದು ತಾನು ಬಯಸಿದ್ದೆ,ಆದರೆ ಅದೀಗ ಸಾಧ್ಯವಿಲ್ಲ ಎಂದಾತ ಹೇಳಿಕೊಂಡಿದ್ದಾನೆ.
ಅಪ್ಪ ನನ್ನನ್ನು ಸದಾ ಬೆಂಬಲಿಸುತ್ತಲೇ ಬಂದಿದ್ದಾರೆ. 10ನೇ ತರಗತಿಯಲ್ಲಿದ್ದಾಗ ನಾನು ಅವರಿಗೆ ಅವಮಾನವಾಗುವಂತೆ ಮಾಡಿದ್ದೆ. ಆಗ ಶಾಲೆಯ ಪ್ರಾಂಶುಪಾಲರಲ್ಲಿ ದೂರು ಕೂಡ ದಾಖಲಾಗಿತ್ತು ಎಂದು ಅಮನ್ ಹೇಳಿದ್ದಾನೆ.
ಕಾಂಕ್ರೀಟ್ ಗೋಡೆಯೊಂದಕ್ಕೆ ಒರಗಿ ನಿಂತು ನಡುಗುವ ಕೈಗಳಲ್ಲಿ ಮೊಬೈಲ್ ಹಿಡಿದುಕೊಂಡಿದ್ದ ಅಮನ್,ತನ್ನ ತಾತನನ್ನು ನನೆಸಿಕೊಂಡಿದ್ದಾನೆ. ತಮ್ಮನನ್ನು ಚೆನ್ನಾಗಿ ಓದಿಸುವಂತೆ ಹೆತ್ತವರನ್ನು ಕೋರಿಕೊಂಡಿದ್ದಾನೆ. ತನಗಾಗಿ ಯಾರೂ ಅಳುವುದು ಬೇಡ. ತಾನು ಬದುಕಲು ಇಚ್ಛಿಸುತ್ತಿಲ್ಲ. ಯಾವುದೇ ಕಾರಣವಿಲ್ಲದೆ ತಾನು ಆತ್ಮಹತ್ಯೆ ಮಾಡಿ ಕೊಳ್ಳುತ್ತಿದ್ದೇನೆ ಎಂದು ಉಕ್ಕಿ ಬರುತ್ತಿರುವ ಕಣ್ಣೀರನ್ನು ಒರೆಸಿಕೊಳ್ಳುವ ಪ್ರಯತ್ನದ ನಡುವೆಯೇ ಅಮನ್ ಹೇಳಿದ್ದಾನೆ.
ಅಮನ್ ಕೋರ್ಸಿಗೆ ಸೇರುವಾಗ ಸರಾಸರಿಗಿಂತ ಹೆಚ್ಚು ಜಾಣನಾಗಿದ್ದ,ಆದರೆ ಇತ್ತೀಚಿನ ದಿನಗಳಲ್ಲಿ ಆತನ ಬುದ್ಧಿವಂತಿಕೆಗೆ ಗರ ಬಡಿದಿತ್ತು ಎಂದು ಕೋಚಿಂಗ್ ಸೆಂಟರ್‌ನ ಅಧಿಕಾರಿಯೋರ್ವರು ತಿಳಿಸಿದರು.
ಅಮನ್ ಆತ್ಮಹತ್ಯೆ ಇಲ್ಲಿ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗಳ ಮೇಲಿನ ಒತ್ತಡವನ್ನು ಬೆಟ್ಟು ಮಾಡುತ್ತಿದೆ. ಹೆತ್ತವರನ್ನು ಬಿಟ್ಟು ಗೊತ್ತೇ ಇಲ್ಲದ ಹದಿಹರೆಯದ ವಿದ್ಯಾರ್ಥಿಗಳು ಹೆಸರೇ ಕೇಳಿರದ ನೂರಾರು ಕಿ.ಮೀ. ದೂರದ ಕೋಟಾಕ್ಕೆ ಬಂದಿಳಿದಾಗಲೇ ಮಾನಸಿಕವಾಗಿ ಜರ್ಜರಿತರಾಗಿರುತ್ತಾರೆ. ದುರ್ಬಲ ಮನಸ್ಸಿನವರು ಕಠಿಣ ತರಬೇತಿಯಿಂದಾಗಿ ಇನ್ನಷ್ಟು ಒತ್ತಡಕ್ಕೊಳಗಾಗುತ್ತಾರೆ ಮತ್ತು ಮಾನಸಿಕ ಖಿನ್ನತೆಗೆ ಜಾರುತ್ತಾರೆ ಎನ್ನುವುದು ತಜ್ಞರ ಅಭಿಮತವಾಗಿದೆ.
ಕೋಟಾದಲ್ಲಿನ 40ಕ್ಕೂ ಅಧಿಕ ಕೋಚಿಂಗ್ ಸೆಂಟರ್‌ಗಳಲ್ಲಿ ತರಬೇತಿಗಾಗಿ ಪ್ರತಿವರ್ಷ ದೇಶಾದ್ಯಂತದ ಒಂದೂವರೆ ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಆಗಮಿಸುತ್ತಾರೆ.
ಕಳೆದ ಐದು ವರ್ಷಗಳಲ್ಲಿ ವಿಫಲರಾಗುವ ಭೀತಿಯಿಂದ 60ಕ್ಕೂ ಅಧಿಕ ವಿದ್ಯಾರ್ಥಿಗಳು ಇಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.







