ತುಲಾ ಸಂಕ್ರಮಣ ಜಾತ್ರೆಗೆ ಅಂತಿಮ ಸಿದ್ಧತೆ
ಕಾವೇರಿ ತೀರ್ಥೋದ್ಭವ :

ಮಡಿಕೇರಿ,ಅ.14: ನಾಡಿನ ಜೀವನದಿ ಕಾವೇರಿ ಉಗಮಸ್ಥಾನ ತಲಕಾವೇರಿಯಲ್ಲಿ ಅ.17ರ ಬೆಳಗ್ಗೆ 6:29 ನಿಮಿಷಕ್ಕೆ ಸಂಭವಿಸುವ ತೀರ್ಥೋದ್ಭವ ಅಪರೂಪದ ಕ್ಷಣವನ್ನು ಕಣ್ತುಂಬಿಕೊಳ್ಳಲು ಭಕ್ತರು ಕಾತರರಾಗಿದ್ದಾರೆ. ತಲಕಾವೇರಿ ತುಲಾ ಸಂಕ್ರಮಣ ಜಾತ್ರೆಗೆ ಸಾವಿರಾರು ಭಕ್ತರು ಆಗಮಿಸುವ ಹಿನ್ನೆಲೆಯ ಅಗತ್ಯ ಬಸ್‌ಗಳ ಸೌಲಭ್ಯ ಬೆಳಕಿನ ವ್ಯವಸ್ಥೆ, ಬ್ಯಾರಿಕೇಡ್ ನಿರ್ಮಾಣ, ವಾಹನ ನಿಲುಗಡೆ ವ್ಯವಸ್ಥೆ ಮತ್ತಿತರ ಸಕಲ ಸಿದ್ಧತೆಗಳು ನಡೆದಿವೆ. ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ರಾಜೇಂದ್ರ ಪ್ರಸಾದ್ ಅವರು ಭಾಗಮಂಡಲದ ತ್ರಿವೇಣಿ ಸಂಗಮ ಮತ್ತು ತಲಕಾವೇರಿಗೆ ಶುಕ್ರವಾರ ಭೇಟಿ ನೀಡಿ ಪೂರ್ವಭಾವಿ ಸಿದ್ಧತೆಯನ್ನು ಪರಿಶೀಲಿಸಿದರು.
ತಲಕಾವೇರಿ ಜಾತ್ರೆಗೆ ಆಗಮಿಸುವ ಭಕ್ತರಿಗೆ ಊಟೋಪಚಾರ ಕಲ್ಪಿಸಲು ವ್ಯವಸ್ಥೆ ಮಾಡಲಾಗಿದೆ. ಮಡಿಕೇರಿ-ಭಾಗಮಂಡಲ-ತಲಕಾವೇರಿಗೆ ಹೋಗಿ ಬರಲು ಅಗತ್ಯ ಬಸ್ ಸೌಲಭ್ಯ ಭಾಗಮಂಡಲದ ಪ್ರವಾಸಿ ಮಂದಿರದಿಂದ ತಲಕಾವೇರಿ ತನಕ ರಸ್ತೆ ಯುದ್ದಕ್ಕೂ ಬೆಳಕಿನ ವ್ಯವಸ್ಥೆ, ತಲಕಾವೇರಿಯಲ್ಲಿ ತೀರ್ಥ ಪಡೆದುಕೊಳ್ಳುವಂತಾಗಲು ಏಕಮುಖವಾಗಿ ಭಕ್ತರಿಗೆ ಹೋಗಲು ಅಗತ್ಯ ಬ್ಯಾರಿಕೇಡ್‌ಗಳ ನಿರ್ಮಾಣ, ತಾತ್ಕಾಲಿಕ ಶೌಚಾಲಯ ಹಾಗೂ ಕುಡಿಯುವ ನೀರು ವ್ಯವಸ್ಥೆ ಮತ್ತಿತರ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ಅವರು ತಿಳಿಸಿದರು. ಅ.16,17 ಮತ್ತು 18 ರಂದು ವಾಹನ ಪಾರ್ಕಿಂಗ್ ಶುಲ್ಕವನ್ನು ತಲಕಾವೇರಿಯಲ್ಲಿ ಸಾರ್ವಜನಿಕರಿಂದ ಪಡೆಯಲಾಗುವುದಿಲ್ಲ ಹಾಗೂ ಅ.17 ರ ಬೆಳಗ್ಗೆ 4 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಭಾಗಮಂಡಲ ಕ್ಷೇತ್ರದಲ್ಲಿ ಧಾರ್ಮಿಕ ಕಾರ್ಯಗಳಿಗೆ ಹಾಗೂ ಮುಡಿಕೊಡುವ ಸಂಪ್ರದಾಯಗಳಿಗೆ ಭಕ್ತರಿಗೆ ಅವಕಾಶ ಮಾಡಿಕೊಡಲಾಗುವುದು ಎಂದು ಇದೇ ಸಂದರ್ಭ ಹೇಳಿದರು. 35 ಸಿಸಿ ಟಿವಿ ಅಳವಡಿಕೆ :
ತಲಕಾವೇರಿ ತುಲಾ ಸಂಕ್ರಮಣ ಜಾತ್ರೆ ಹಿನ್ನೆಲೆ ಬಂದೋಬಸ್ತ್‌ಗಾಗಿ 35 ಸಿ.ಸಿ.ಟಿವಿ ಕ್ಯಾಮರಾ ಅಳವಡಿಸಲಾಗಿದೆ.500 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, 3 ಡಿವೈಎಸ್ಪಿಗಳ ಜೊತೆಗೆ ಸರ್ಕಲ್ ಇನ್ಸ್‌ಪೆಕ್ಟರ್,ಪೊಲೀಸ್ ಸಬ್‌ಇನ್ಸ್‌ಪೆಕ್ಟರ್,ಸಹಾಯಕ ಸಬ್‌ಇನ್ಸ್‌ಪೆಕ್ಟರ್, ಮುಖ್ಯ ಪೇದೆಗಳು, ಮಹಿಳಾ ಪೊಲೀಸರು, ಗೃಹ ರಕ್ಷಕ ದಳದ ಸಿಬ್ಬಂದಿ, ಜಿಲ್ಲಾ ಮೀಸಲು ಪೊಲೀಸ್ ಪಡೆ, ರಾಜ್ಯಮೀಸಲು ಪೊಲೀಸ್ ಪಡೆ, ಅಗ್ನಿಶಾಮಕದಳ ಹೀಗೆ ಅಗತ್ಯ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ರಾಜೇಂದ್ರ ಪ್ರಸಾದ್ ಅವರು ಮಾಹಿತಿ ನೀಡಿದರು. ಅರ್ಚಕರಾದ ನಾರಾಯಣಾಚಾರ್ ಅವರು ಮಾತನಾಡಿ, ಅ.17ರ ಬೆಳಗ್ಗೆ 6:29 ನಿಮಿಷಕ್ಕೆ ತೀರ್ಥೋದ್ಭವ ಸಂಭವಿಸಲಿದೆ. ಕಾವೇರಿ ತೀರ್ಥ ರೂಪಿಣಿಯಾಗಿ ತುಲಾ ಸಂಕ್ರಮಣದಂದು ಕಾಣಿಸಿಕೊಳ್ಳುತ್ತಾಳೆ ಎಂದರು. ತಲಕಾವೇರಿ-ಭಾಗಮಂಡಲ ದೇವಾಲಯ ಕಾರ್ಯನಿರ್ವಹಣಾಧಿಕಾರಿ ಜಗದೀಶ್ ಕುಮಾರ್, ಡಿವೈಎಸ್‌ಪಿ ಛಬ್ಬಿ, ಸಬ್ ಇನ್ಸ್‌ಪೆಕ್ಟರ್ ಸದಾಶಿವ, ತಿಮ್ಮಪ್ಪಮತ್ತಿತರರು ಹಾಜರಿದ್ದರು.







