ಗಾಂಜಾ ಮಾರಾಟ ಪ್ರಕರಣದ ಆರೋಪಿಗಳಿಗೆ 10 ವರ್ಷ ಕಠಿಣ ಶಿಕ್ಷೆ

ಮಂಗಳೂರು, ಅ. 14: ಅಕ್ರಮವಾಗಿ ಮಾರಾಟ ಮಾಡಲು 34.600 ಕಿ.ಗ್ರಾಂ. ಗಾಂಜಾ ಸಾಗಾಟ ಮಾಡುತ್ತಿದ್ದ ಮೂವರು ಆರೋಪಿಗಳ ಅಪರಾಧ ಸಾಬೀತಾಗಿರುವ ಹಿನ್ನೆಲೆಯಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಆರೋಪಿಗಳಿಗೆ 10 ವರ್ಷ ಕಠಿಣ ಶಿಕ್ಷೆ ಹಾಗೂ ತಲಾ 1 ಲಕ್ಷ ರೂ. ದಂಡ ವಿಧಿಸಿ ಇಂದು ತೀರ್ಪು ನೀಡಿದೆ.
ಮೈಸೂರು ರಾಜ್ ಕುಮಾರ್ ರಸ್ತೆ, ಟೆರಿಷನ್ ಕಾಲೇಜು ಬಳಿಯ ನಿವಾಸಿ ಸಯ್ಯದ್ ಅನೀಸ್ ಅಹ್ಮದ್ (56) ಈತನ ಮಗ ಮನ್ಸೂರ್ ಅಹ್ಮದ್ (31) ಹಾಗೂ ಚಿಕ್ಕಮಗಳೂರು ಶಂಕರಪುರ ಮುತ್ತಮ್ಮ ದೇವಳದ ಬಳಿಯ ಅನ್ಸಾರ್ ಪಾಷಾ (48) ಅಪರಾಧಿಗಳು ಎಂದು ಕೋರ್ಟ್ ತೀರ್ಪು ನೀಡಿದೆ. ಅಪರಾಧಿಗಳು ದಂಡ ಪಾವತಿಸಲು ವಿಫಲರಾದಲ್ಲಿ ಮತ್ತೆ 6 ತಿಂಗಳ ಹೆಚ್ಚುವರಿ ಶಿಕ್ಷೆ ಅನುಭವಿಸುವಂತೆ ನ್ಯಾಯಾಲಯ ತನ್ನ ತೀರ್ಪಿನಲ್ಲಿ ತಿಳಿಸಿದೆ.
ಅಪರಾಧಿಗಳು 2013 ರಂದು ಮಾರ್ಚ್ 11 ರಂದು ಗಾಂಜಾ ಹಿಡಿದುಕೊಂಡು ಹಳೆ ಬಂದರು ಉಪ್ಪಿನ ಧಕ್ಕೆ ಪರಿಸರದಲ್ಲಿ ಬಂಧಿತರಾಗಿದ್ದರು. ಅಂದಿನ ಎನ್.ಡಿ.ಪಿ.ಎಸ್. ಘಟಕದ ಪೊಲೀಸ್ ನಿರೀಕ್ಷಕ ಬಿ.ಎಸ್.ಸತೀಶ್ ಹಾಗೂ ಸಿಬ್ಬಂದಿ ಮತ್ತು ಕರಾವಳಿ ಕಾವಲು ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ವೈ.ಗಂಗೀರೆಡ್ಡಿ ಅವರು ಸಿಬ್ಬಂದಿಗಳ ಜತೆ ಜಂಟಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿ ಭಾರಿ ಪ್ರಮಾಣದ ಗಾಂಜಾ, ಮೊಬೈಲ್ ಫೋನ್, ಹಣವನ್ನು ವಶಪಡಿಸಿಕೊಂಡಿದ್ದರು. ಆ ಸಂದರ್ಭ ಸರಕಾರಿ ನೌಕರರಾದ ಜಿಲ್ಲಾಧಿಕಾರಿ ಕಚೇರಿಯ ಸೂಪರಿಟೆಂಡೆಂಟ್ ಆಗಿದ್ದ ಶೇಖ್ ಹಸನ್ ಸಾಬ್ ಹಾಗೂ ಗ್ರಾಮ ಲೆಕ್ಕಾಧಿಕಾರಿ ಭೀಮಯ್ಯ ಪಂಚ ಸಾಕ್ಷಿಗಳಾಗಿ ತನಿಖಾಧಿಕಾರಿಗೆ ಸಹಕರಿಸಿದ್ದರು. ಅಂತಿಮವಾಗಿ ಗಂಗೀರೆಡ್ಡಿ ಅವರು ಆರೋಪಿಗಳ ವಿರುದ್ಧ ಮಂಗಳೂರು ವಿಶೇಷ ನ್ಯಾಯಾಲಯದಲ್ಲಿ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಪ್ರಧಾನ ಜಿಲ್ಲಾ ಮತುತಿ ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಉಮಾ ಎಂ.ಜಿ. 5 ಮಂದಿ ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದರು. ಹಾಲಿ ನ್ಯಾಯಾಧೀಶ ಕೆ.ಎಸ್.ಬಿಳಗಿ ಅವರು ಇತ್ತಂಡಗಳ ವಾದವನ್ನು ಆಲಿಸಿ ಅಪರಾಧಿಗಳಿಗೆ ಶಿಕ್ಷೆ ಪ್ರಕಟಿಸಿದ್ದಾರೆ. ಸರಕಾರದ ಪರವಾಗಿ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಕುದ್ರಿಯ ಪುಷ್ಪರಾಜ್ ಅಡ್ಯಂತಾಯ ವಾದಿಸಿದ್ದರು.







