ಆಂದೋಲನಕ್ಕೆ ಅಮು ವಿದ್ಯಾರ್ಥಿಗಳು ಸಜ್ಜು
ಅಲ್ಪಸಂಖ್ಯಾತ ಸ್ಥಾನಮಾನ ‘ಮರುಸ್ಥಾಪನೆ’
ಅಲಿಗಡ,ಅ.14: ವಿವಿಯ ಅಲ್ಪಸಂಖ್ಯಾತ ಸ್ಥಾನಮಾನದ ಮರುಸ್ಥಾಪನೆಗಾಗಿ ವಿದ್ಯಾರ್ಥಿಗಳು ಆಂದೋಲನವನ್ನು ಆರಂಭಿಸಲಿದ್ದಾರೆಂದು ಅಲಿಗಡ ಮುಸ್ಲಿಮ್ ವಿವಿ(ಅಮು)ಯ ವಿದ್ಯಾರ್ಥಿ ಸಂಘದ ನೂತನ ಅಧ್ಯಕ್ಷ ಫೈಝುಲ್ ಹಸನ್ ಅವರು ಪ್ರಕಟಿಸಿದ್ದಾರೆ. ಗುರುವಾರ ವಿದ್ಯಾರ್ಥಿ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡುತ್ತಿದ್ದ ಅವರು, ಮುಂದಿನ 30 ದಿನಗಳಲ್ಲಿ ನಮ್ಮ ಪ್ರತಿಭಟನೆ ದಿಲ್ಲಿಯನ್ನು ತಲುಪಲಿದೆ. ಮೊದಲ ಹೆಜ್ಜೆಯಾಗಿ ಜಂತರ್ ಮಂತರ್‌ನಲ್ಲಿ ಧರಣಿಯನ್ನು ನಡೆಸಲಾಗುವುದು ಎಂದರು. ದೇಶದಲ್ಲಿಯ ಅಲ್ಪಸಂಖ್ಯಾತ ಸಮುದಾಯಗಳ ಸೂಕ್ಷ್ಮ ಭಾವನೆಗಳು ಮತ್ತು ಹಕ್ಕುಗಳನ್ನು ಕಡೆಗಣಿಸಿದ್ದಕ್ಕಾಗಿ ಮೋದಿ ಸರಕಾರದ ವಿರುದ್ಧ ದಾಳಿ ನಡೆಸಿದ ಅವರು, ಭಾರತೀಯ ಮುಸ್ಲಿಮರು ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲಿ ಸಂಪೂರ್ಣ ನಂಬಿಕೆಯನ್ನು ಹೊಂದಿದ್ದಾರೆ, ಆದರೆ ಸಮುದಾಯವು ತನ್ನ ಪ್ರಜಾಸತ್ತಾತ್ಮಕ ಹಕ್ಕುಗಳಿಗಾಗಿ ಹೋರಾಡುವ ಸಂಪೂರ್ಣ ಸ್ವಾತಂತ್ರವನ್ನೂ ಹೊಂದಿದೆ ಎಂದರು.
ಕೋಮುವಾದಿ ಧ್ರುವೀಕರಣ ಮತ್ತು ಸಮಾಜದ ವಿಭಜನೆ ಅಂತಿಮವಾಗಿ ದೇಶವನ್ನು ದುರ್ಬಲಗೊಳಿಸುತ್ತದೆ ಎಂದು ಅವರು ಹೇಳಿದರು.





