ಕಾಶಿಕಟ್ಟೆ: ಅಂಗನವಾಡಿ ಕೇಂದ್ರ ನಿರ್ಮಾಣ ವಿವಾದ

ಸುಬ್ರಹ್ಮಣ್ಯ, ಅ.14: ಸುಬ್ರಹ್ಮಣ್ಯ ಗ್ರಾಪಂ ವ್ಯಾಪ್ತಿಯ ಕಾಶಿಕಟ್ಟೆ ಬಳಿಯ ಅಂಗನವಾಡಿ ಕೇಂದ್ರ ನಿರ್ಮಾಣದ ಪರ ಮತ್ತು ವಿರೋಧಿಗಳು ಶುಕ್ರವಾರ ಗ್ರಾಪಂ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಗಮನ ಸೆಳೆದಿದ್ದಾರೆ.
ಕಾಶಿಕಟ್ಟೆಯ ಬಳಿ ಕಂದಾಯ ಇಲಾಖೆಯು ಅಂಗನವಾಡಿ ಕೇಂದ್ರ ನಿರ್ಮಾಣಕ್ಕೆ 11.5 ಸೆಂಟ್ಸ್ ಸರಕಾರಿ ಸ್ಥಳವನ್ನು ಕಾಯ್ದಿರಿಸಿತ್ತು. ಸುಮಾರು 661.75 ಸುತ್ತಳತೆಯ ಕಟ್ಟಡ ನಿರ್ಮಾಣಕ್ಕಾಗಿ ಗ್ರಾಪಂ ವತಿಯಿಂದ ಮಹಾತ್ಮಾಗಾಂಧಿ ಉದ್ಯೋಗ ಖಾತರಿ ಯೋಜನೆಯಡಿ 5u3250?ಕ್ಷ ರೂ. ಹಾಗೂ ಆರ್‌ಟಿಡಿಎಫ್ ವತಿಯಿಂದ 9.17 ಲಕ್ಷ ರೂ. ಸಹಿತ 14.17 ಲಕ್ಷ ರೂ. ವೆಚ್ಚದ ಕಟ್ಟಡವನ್ನು ನಿರ್ಮಿತ ಕೇಂದ್ರವು ನಿರ್ಮಿಸಲು ಸಿದ್ಧತೆ ನಡೆದಿತ್ತು.
ಈ ಮಧ್ಯೆ ಇಲ್ಲಿ ಅಂಗನವಾಡಿ ಕಟ್ಟಡ ನಿರ್ಮಿಸಬಾರದು ಎಂದು ಕರ್ನಾಟಕ ರಾಜ್ಯ ದಸಂಸ ವತಿಯಿಂದ ಗ್ರಾಪಂ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರೆ, ಈ ಸ್ಥಳದಲ್ಲಿ ಅಂಗನವಾಡಿ ನಿರ್ಮಿಸಬೇಕು ಎಂದು ಸುಬ್ರಹ್ಮಣ್ಯದ ಸ್ತ್ರೀಶಕ್ತಿ ಗುಂಪಿನ ಸದಸ್ಯರು ಪಟ್ಟು ಹಿಡಿದು ಪ್ರತಿಭಟನೆ ನಡೆಸಿದರು.
ಹತ್ತು ದಿನಗಳ ಹಿಂದೆ ಈ ಸ್ಥಳದಲ್ಲಿ ದಸಂಸ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಕಾಮಗಾರಿಗೆ ತಡೆಯೊಡ್ಡಿದ್ದರು. ಈ ಸಂದರ್ಭ ಪಿಡಿಓ ಗ್ರಾಪಂ ಸಾಮಾನ್ಯ ಸಭೆಯಲ್ಲಿ ಸೂಕ್ತ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದ್ದರು. ಆದರೆ ಶುಕ್ರವಾರ ಸಾಮಾನ್ಯ ಸಭೆ ನಡೆಯುತ್ತಿದ್ದಾಗಲೇ ಪರ-ವಿರೋಧ ತಂಡಗಳು ಪ್ರತಿಭಟನೆ ನಡೆಸಿ ಗಮನ ಸೆಳೆದಿದೆ.
ಪರ-ವಿರೋಧದ ಪ್ರತಿಭಟನೆಯಲ್ಲಿ ಸ್ತ್ರೀಶಕ್ತಿ ಒಕ್ಕೂಟದ ಕಾರ್ಯದರ್ಶಿ ಜಯಂತಿ, ಸದಸ್ಯರಾದ ಹರಿಣಾಕ್ಷಿ, ಜಯಶ್ರೀ, ರತ್ನ ಕುಮಾರಿ, ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ತಾಲೂಕು ಸಂಚಾಲಕ ವಿಶ್ವನಾಥ ಅಲೆಕ್ಕಾಡಿ, ರವಿಶಂಕರ್ ನಾಯ್ಕಾ, ಬಿ.ಎಂ.ಗಡಿಕಲ್ಲು, ಮೋಹನ್ ನೂಜಾಡಿ, ಸುಳ್ಯ ಆದಿ ದ್ರಾವಿಡ ಸಮಾಜ ಸೇವಾ ಸಂಘದ ಅಧ್ಯಕ್ಷ ಶ್ರವಣ್ ಕೊಡಿಯಾಲಬೈಲು ಉಪಸ್ಥಿತರಿದ್ದರು.
ಗ್ರಾಪಂ ಅಧ್ಯಕ್ಷೆ ಸುಶೀಲಾ, ಉಪಾಧ್ಯಕ್ಷ ದಿನೇಶ್ ಬಿ.ಎನ್ ಮತ್ತು ಸದಸ್ಯರು, ಪಿಡಿಓ ಯು.ಡಿ.ಶೇಖರ್, ಕಾರ್ಯದರ್ಶಿ ಮೋನಪ್ಪ ಪರ-ವಿರೋಧ ಪ್ರತಿಭಟನಾಕಾರರ ಅಹವಾಲು ಆಲಿಸಿದರು.
ಈ ಸ್ಥಳವು ಸರಕಾರಿ ಜಾಗವಾಗಿದ್ದು, ಹಿಂದಿನ ಆಡಳಿತವು ಅಂಗನವಾಡಿಗಾಗಿ ಜಮೀನು ಮೀಸಲಿರಿಸಿದ್ದು, ಇದಕ್ಕೆ ಆರ್‌ಟಿಸಿ ಕೂಡಾ ಆಗಿದೆ. ಇಲ್ಲಿ ಅಂಗನವಾಡಿ ಕೇಂದ್ರ ತೆರೆಯಲು ಆಕ್ಷೇಪಿಸುವುದು ಸರಿಯಲ್ಲ. ಇದರಲ್ಲಿ ಕಾಣದ ಕೈಗಳ ಹಿತಾಸಕ್ತಿ ಅಡಗಿದೆ. ಇದೇ ಸ್ಥಳದಲ್ಲಿ ಅಂಗನವಾಡಿ ಕೇಂದ್ರ ಮಾಡಬೇಕು. ಅಲ್ಲಿಯವರೆಗೆ ನಿರಂತರ ಹೋರಾಟ ನಡೆಸುವೆವು ಎಂದು ಸುಬ್ರಹ್ಮಣ್ಯ ಸ್ತ್ರೀಶಕ್ತಿ ಒಕ್ಕೂಟದ ಅಧ್ಯಕ್ಷೆ ಚಂದ್ರಕಲಾ ಹೇಳಿದರು.
ಪಂಚಾಯತ್‌ನ ಹಿಂದಿನ ಆಡಳಿತವು ಅಂಗನವಾಡಿ ನಿರ್ಮಿಸಲು ಗ್ರಾಮದ ಕಾಶಿಕಟ್ಟೆ ಎಂಬಲ್ಲಿನ 15 ಸೆಂಟ್ಸ್ ಜಾಗವನ್ನು ಮೀಸಲಿಟ್ಟಿತ್ತು. ಈ ಪ್ರದೇಶವು ಪರಿಶಿಷ್ಠ ಜಾತಿಯ ಕಾಲನಿಗೆ ಸಮೀಪವಿದ್ದುದರಿಂದ ಕೆಲವು ಸಮಸ್ಯೆಗಳು ಇಲ್ಲಿ ಉದ್ಭವವಾಗುವ ಸಾಧ್ಯತೆಯಿರುವುದರಿಂದ ಅಂಗನವಾಡಿ ನಿರ್ಮಿಸಬಾರದು ಎಂದು ಪ್ರತಿರೋಧ ಒಡ್ಡಿದ್ದೆವು. ಅಲ್ಲದೆ ಈ ಸ್ಥಳದ ಬಗ್ಗೆ ಡಿಸಿ ಕೋರ್ಟ್‌ನಲ್ಲಿ ವ್ಯಾಜ್ಯವಿದೆ. ಹೀಗಿರುವಾಗ ಇಲ್ಲಿ ಅಂಗನವಾಡಿ ಕಟ್ಟಡ ನಿರ್ಮಿಸಬಾರದೆಂದು ಪ್ರತಿಭಟಿಸಿದ್ದೇವೆ ಎಂದು ಕರ್ನಾಟಕ ರಾಜ್ಯ ದಸಂಸ ಜಿಲ್ಲಾ ಸಹ ಸಂಚಾಲಕ ಆನಂದ ಬೆಳ್ಳಾರೆ ಹೇಳಿದರು.
ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು, ಜನಪ್ರತಿನಿಧಿಗಳ ಸಮ್ಮುಖ ಸಭೆ ನಡೆಸಿ ಒಮ್ಮತದ ತೀರ್ಮಾನ ಕೈಗೊಳ್ಳಲಾಗುವುದು ಎಂದು ಗ್ರಾಪಂ ಆಡಳಿತ ಭರವಸೆ ನೀಡಿದ ಹಿನ್ನೆಲೆಯಲ್ಲಿ ಇತ್ತಂಡಗಳು ಪ್ರತಿಭಟನೆ ಹಿಂಪಡೆದುಕೊಂಡರು.





