ಶೇ.70ರಷ್ಟು ಮುಸ್ಲಿಮರ ಮತಗಳು ಹಿಲರಿ ಕ್ಲಿಂಟನ್‌ಗೆ: ಸಮೀಕ್ಷಾ ವರದಿ

ನ್ಯೂಯಾರ್ಕ್,ಅಕ್ಟೋಬರ್ 15: ಅಧ್ಯಕ್ಷ ಚುನಾವಣೆಗೆ ವಾರಗಳಷ್ಟೇ ಬಾಕಿ ಉಳಿದಿರುವಾಗ, ಅಮೆರಿಕನ್ ಮುಸ್ಲಿಮರಲ್ಲಿ ತಲಾ ಹತ್ತುಮಂದಿಯಲ್ಲಿ ಏಳು ಮಂದಿಯ ಮತ ಹಿಲರಿ ಕ್ಲಿಂಟನ್‌ಗೆ ಲಭಿಸಲಿದೆ ಎಂದು ಕೌನ್ಸಿಲ್ ಆನ್ ಅಮೆರಿಕನ್ ಇಸ್ಲಾಮ್ ರಿಲೇಶನ್ಸ್(ಕೇರ್) ನಡೆಸಿದ ಸಮೀಕ್ಷೆ ತಿಳಿಸಿದೆ.
ಸಮೀಕ್ಷೆಯಲ್ಲಿ ಭಾಗವಹಿಸಿದ ಶೇ.72ರಷ್ಟು ಮುಸ್ಲಿಮರು ಹಿಲರಿಯವರನ್ನು ಬೆಂಬಲಿಸಿದ್ದು, ಅಮೆರಿಕದಲ್ಲಿ ಸುಮಾರು 33ಲಕ್ಷ ಮುಸ್ಲಿಮರಿದ್ದಾರೆ. ನೋಂದಾಯಿತ ಮುಸ್ಲಿಮ್ ಮತದಾರರಲ್ಲಿ ಶೇ.86ರಷ್ಟು ಮಂದಿ ಮತದಾನ ಮಾಡುವುದು ದೃಢವಾಗಿದೆ. ಉಳಿದ ಶೇ.12ರಷ್ಟು ಮುಸ್ಲಿಮರು ಮತದಾನದಲ್ಲಿ ಭಾಗವಹಿಸುವ ಕುರಿತು ಸ್ಪಷ್ಟತೆಯಿಲ್ಲ. 800 ಮಂದಿ ಮತದಾರರಲ್ಲಿ ನಡೆಸಿದ್ದ ಸಮೀಕ್ಷೆಯಲ್ಲಿ ಶೇ.4ರಷ್ಟು ಮಂದಿ ಮುಸ್ಲಿಮರು ಡೊನಾಲ್ಡ್ ಟ್ರಂಪ್‌ರನ್ನು ಬೆಂಬಲಿಸಿದ್ದಾರೆ ಎಂದು ವರದಿ ತಿಳಿಸಿದೆ.
ಏಳು ಅಂಕಗಳಲ್ಲಿ ಹಿಲರಿಗೆ ಮುನ್ನಡೆ:
ವಾಷಿಂಗ್ಟನ್: ಅತ್ಯಂತ ಕೊನೆಯ ಸರ್ವೇಯಲ್ಲಿ ಹಿಲರಿ ಕ್ಲಿಂಟನ್ ಡೊನಾಲ್ಡ್ ಟ್ರಂಪ್‌ರಿಗಿಂತ ಏಳು ಅಂಕಗಳಿಂದ ಮುಂದಿದ್ದಾರೆ ಎಂದು ಫಾಕ್ಸ್ ನ್ಯೂಸ್ ಚ್ಯಾನೆಲ್ ನಡೆಸಿದ ಸಮೀಕ್ಷೆಯಿಂದ ತಿಳಿದು ಬಂದಿದೆ. ಹಿಲರಿಗೆ ಶೇ.45 ಮತ್ತು ಟ್ರಂಪ್‌ಗೆ ಶೇ.38 ವೋಟುಗಳು ಲಭಿಸಿವೆ. ಇದು ಟ್ರಂಪ್‌ರನ್ನು ಬೆಂಬಲಿಸುವ ಚ್ಯಾನೆಲ್ ಆಗಿದ್ದು, ಇದು ಕಳೆದ ವಾರ ನಡೆಸಿದ ಸಮೀಕ್ಷೆಯಲ್ಲಿ ಕೂಡಾ ಹಿಲರಿ ಮುಂದಿದ್ದರು ಎಂದು ವರದಿ ತಿಳಿಸಿದೆ.







