ಸಮಾನ ನಾಗರಿಕ ಸಂಹಿತೆ ಅಗತ್ಯವಿಲ್ಲ: ಮಾಜಿ ಪ್ರಧಾನಿ ದೇವೇಗೌಡ

ಮಂಗಳೂರು, ಅ.15: ದೇಶದಲ್ಲಿ ಹತ್ತಾರು ಧರ್ಮಗಳಿದ್ದು, ಆಯಾ ಧರ್ಮಗಳು ತಮ್ಮದೇ ಆದ ನಿಯಮಗಳನ್ನು ಅನುಸರಿಸುತ್ತಿರುವ ಸಂದರ್ಭದಲ್ಲಿ ಬಿಜೆಪಿಯೇಕೆ ಮಧ್ಯಪ್ರವೇಶಿಸಬೇಕು ಎಂದು ಹೇಳುವ ಮೂಲಕ ಮಾಜಿ ಪ್ರಧಾನಿ ದೇವೇಗೌಡ, ಸಮಾನ ನಾಗರಿಕ ಸಂಹಿತೆ ಪ್ರಸ್ತಾಪವನ್ನು ತೀವ್ರವಾಗಿ ವಿರೋಧಿಸಿದ್ದಾರೆ.
ನಗರದ ಸರ್ಕ್ಯೂಟ್ ಹೌಸ್‌ನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರ ಆತ್ಮಹತ್ಯೆ, ಬೆಳೆಗಳ ಬೆಲೆಯಲ್ಲಿನ ಅಸಮಾನತೆ ಮೊದಲಾದ ಹಲವಾರು ರೀತಿಯ ಸಮಸ್ಯೆಗಳನ್ನು ದೇಶವು ಎದುರಿಸುತ್ತಿರುವಾಗ ಈ ಚರ್ಚೆ ಅನಗತ್ಯ ಎಂದವರು ಹೇಳಿದರು. ರಾಜ್ಯದಲ್ಲಿ ಕಾಂಗ್ರೆಸ್‌ನವರದ್ದು ಏನು ಭಾಗ್ಯ ಎಂದು ಹೇಳಿದ ದೇವೇಗೌಡ, ಅದೇ ಸಮಯದಲ್ಲಿ ಬಿಜೆಪಿ ಏನು ಮಾಡುತ್ತಿದೆ ಎಂದು ಪ್ರಶ್ನಿಸಿದರು.
ಪಕ್ಷ ಸಿದ್ಧಾಂತದ ಮೇಲೆ ನಂಬಿಕೆ ಇರಿಸಿದವರಿಗೆ ಸ್ವಾಗತ; ಒತ್ತಾಯವಿಲ್ಲ!
ಅಂಬರೀಶ್, ಜಾರಕಿಹೊಳಿ, ಶ್ರೀನಿವಾಸ್ ಪ್ರಸಾದ್ ಮೊದಲಾದವರು ಜೆಡಿಎಸ್ ಪಕ್ಷ ಸೇರಲಿದ್ದಾರೆಂಬ ಊಹಾಪೋಹದ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ದೇವೇಗೌಡ, ನಾವು ಯಾರನ್ನೂ ಪಕ್ಷ ಸೇರಲು ಒತ್ತಾಯಿಸುವುದಿಲ್ಲ. ಪಕ್ಷ ಸಿದ್ಧಾಂತದಲ್ಲಿ ವಿಶ್ವಾಸವಿರಿಸಿ ಬಂದವರನ್ನು ಸ್ವಾಗತಿಸಲಾಗುವುದು ಎಂದವರು ಹೇಳಿದರು.
ಜಾತ್ಯತೀತೆಯಲ್ಲಿ ನಂಬಿಕೆ ಇರಿಸಿ ಜನತಾದಳದಲ್ಲಿ ಇರಿಸಿದ್ದ ಕೆಲವರು ನನ್ನ ಅಥವಾ ಕುಮಾರಸ್ವಾಮಿಯ ಮೇಲಿನ ಬೇಸರದಿಂದ ಪಕ್ಷದಿಂದ ದೂರವಾಗಿರಬಹುದು. ಅವರ್ಯಾರ ಬಗ್ಗೆಯೂ ಅಸಮಾಧಾನವಿಲ್ಲ. ಮುಂದಿನ ಒಂದೂವರೆ ವರ್ಷದಲ್ಲಿ ಪಕ್ಷ ತನ್ನ ಶಕ್ತಿಯನ್ನು ಹೆಚ್ಚಿಸಲಿದೆ. ಅದಕ್ಕಾಗಿ ಬೇರೆ ಪಕ್ಷವನ್ನು ಒಡೆಯಬೇಕಾಗಿಲ್ಲ ಎಂದು ದೇವೇಗೌಡ ನುಡಿದರು.
ಬಲವಿಲ್ಲದಲ್ಲಿ ಸಂಘಟನೆಗೆ ಒತ್ತು
ಎಲ್ಲಿ ಪಕ್ಷಕ್ಕೆ ಸದ್ಯ ಬಲವಿಲ್ಲ ಎಂದು ಹೇಳಲಾಗುತ್ತಿದೆಯೋ ಅಲ್ಲಿಂದ ಪಕ್ಷವನ್ನು ಸಂಘಟಿಸುವ ಕೆಲಸವನ್ನು ಮಾಡುತ್ತಿದ್ದೇನೆ. ಅದಕ್ಕಾಗಿಯೇ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿಗೆ ಭೇಟಿ ನೀಡಿದ್ದೇನೆ. ಮತ್ತೆ ಮತ್ತೆ ಭೇಟಿ ನೀಡಲಿದ್ದೇನೆ. ಪಕ್ಷವನ್ನು ಮತ್ತೆ ಪುನರ್ ಸಂಘಟಿಸುವ ವಿಶ್ವಾಸ ನನಗಿದೆ ಎಂದು ದೇವೇಗೌಡ ಹೇಳಿದರು.
224 ಸ್ಥಾನಗಳನ್ನು ಜೆಡಿಎಸ್ ಪಡೆಯಲಿದೆ!
ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ಜೆಡಿಎಸ್ ನಿರ್ಣಾಯಕವಾಗಲಿದೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ದೇವವೇಗೌಡ, ಪಕ್ಷ ನಿರ್ಣಾಯಕ ಶಕ್ತಿಯಾಗುವುದಿಲ್ಲ ಬದಲಾಗಿ 224 ವಿಧಾನಸಭಾ ಸ್ಥಾನಗಳನ್ನು ಗೆಲ್ಲುವ ವಿಶ್ವಾಸವಿದೆ. ಜನತಾ ಪಕ್ಷಗಳನ್ನು ಒಗ್ಗೂಡಿಸುವ ಪ್ರಯತ್ನ ಮಾಡಿದ್ದೇನೆ. ಅದರಲ್ಲಿ ಯಾವುದೇ ನಿರಾಶೆ ಇಲ್ಲ. ರಾಜ್ಯದಲ್ಲಿ ಪಕ್ಷವನ್ನು ಸಂಘಟಿಸಿದ ಬಳಿಕ, ದೇಶವ್ಯಾಪಿಯಾಗಿ ಸಂಘಟಿಸಲಾಗುವುದು ಎಂದವರು ಹೇಳಿದರು.
ಎತ್ತಿನಹೊಳೆ ಯೋಜನೆ ಬಿಜೆಪಿ- ಕಾಂಗ್ರೆಸ್‌ನದ್ದು!
ಎತ್ತಿನಹೊಳೆ ಯೋಜನೆ ಕುರಿತಂತೆ ಪಕ್ಷದ ನಿಲುವಿನ ಕುರಿತ ಪ್ರಶ್ನೆಗೆ, ಅತ್ಯಂತ ಸೂಕ್ಷ್ಮವಾಗಿ ಪ್ರತಿಕ್ರಿಯಿಸಿದ ದೇವೇಗೌಡರು. ಬಿಜೆಪಿಯವರು ಅದನ್ನು ಆರಂಭಿಸಿದರು. ಮುಂದೆ ಕಾಂಗ್ರೆಸ್‌ನವರು ಅದನ್ನು ಮುಂದುವರಿಸಿದರು. ಯೋಜನೆಯಿಂದ 9 ಟಿಎಂಸಿಯೂ ನೀರು ಸಿಗುವುದಿಲ್ಲ ಎಂದು ತಜ್ಞರೇ ಹೇಳುತ್ತಾರೆ. ಆದರೆ ಚಿಕ್ಕಬಳ್ಳಾಪುರ, ಕೋಲಾರ ಜನರಿಗೆ ನೀರು ಬೇಕು. ಸರಕಾರ ಅದಕ್ಕೆ ವ್ಯವಸ್ಥೆ ಮಾಡಬೇಕು ಎಂದರು.
ಗೋಷ್ಠಿಯಲ್ಲಿ ಜೆಡಿಎಸ್ ಮುಖಂಡರಾದ ಶಾಸಕ ಮಧು ಬಂಗಾರಪ್ಪ, ರಾಷ್ಟ್ರೀಯ ಕಾರ್ಯದರ್ಶಿ ಜಾಫರುಲ್ಲಾ ಖಾನ್, ಜೀವಿಜಯ, ಅಮರನಾಥ ಶೆಟ್ಟಿ, ಸದಾಶಿವ ಉಳ್ಳಾಲ್, ಅಕ್ಷಿತ್, ವಸಂತ ಪೂಜಾರಿ, ರಮೀಝಾ ಬಾನು, ಅಝೀಝ್ ಕುದ್ರೋಳಿ, ರಾಮ್ ಗಣೇಶ್ ಮೊದಲಾದವರು ಉಪಸ್ಥಿತರಿದ್ದರು.
ದೇವೇಗೌಡರಿಂದ ಪಕ್ಷ ಪುನರ್‌ಸಂಘಟನೆಯ ಆತ್ಮ ವಿಶ್ವಾಸ!
‘‘ನನಗೀಗ 84 ವರ್ಷ ಆಗಿದೆ. ಈ ಪ್ರಾಯದಲ್ಲಿ ಯಾಕೆ ಈ ಹರಸಾಹಸ ಎಂದು ನೀವು ಪ್ರಶ್ನಿಸಬಹುದು. ಆದರೆ ನನ್ನ 55 ವರ್ಷಗಳ ರಾಜಕೀಯ ಜೀವನದಲ್ಲಿ ಪ್ರಾಂತೀಯ ಪಕ್ಷ ಅತೀ ಮುಖ್ಯ ಎಂದು ನಾನು ಗ್ರಹಿಸಿದ್ದೇನೆ. ರಾಜಕೀಯ ತಜ್ಞರು, ಬುದ್ಧಿವಂತರೂ ಈ ಮಾತನ್ನು ಒಪ್ಪುತ್ತಾರೆ. ಹಾಗಾಗಿ ಇದೀಗ ಪ್ರಾಂತೀಯ ನಾಯಕತ್ವವನ್ನು ಉಳಿಸಿ ಬೆಳೆಸುವ ಕಾರ್ಯ ಆಗಬೇಕಾಗಿದೆ. ಜೆಡಿಎಸ್ ಬಗ್ಗೆ ಜನರಿಗೆ ಇಂದಿಗೂ ಸದ್ಭಾವನೆ ಇದೆ. ಅದನ್ನು ಪುನರ್‌ಸಂಘಟಿಸುವ ಕೆಲಸವನ್ನು ಮಾಡಲಿದ್ದೇನೆ’’ಎಂದು ದೇವೇಗೌಡ ಆತ್ಮವಿಶ್ವಾಸ ಪ್ರದರ್ಶಿಸಿದರು.
ನಂಬಿಕೆ ಇದ್ದವರು ಉಡುಪಿ ಕೃಷ್ಣ ಮಠಕ್ಕೆ ಹೋಗಲಿ!
ಉಡುಪಿ ಕೃಷ್ಣ ಮಠದ ಕುರಿತಂತೆ ಪ್ರಸ್ತುತ ಎದ್ದಿರುವ ವಿವಾದ ಕುರಿತು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಉಡುಪಿ ಕೃಷ್ಣ ಮಠಕ್ಕಿಂತಲೂ ಮಹತ್ತರವಾದ ಸಮಸ್ಯೆ ನಮ್ಮ ಸಮಾಜದಲ್ಲಿದೆ. ಎಷ್ಟೋ ಹಳ್ಳಿಗಳಲ್ಲಿ ಕುಡಿಯಲು ನೀರಿಲ್ಲ, ರೈತರ ಆತ್ಮಹತ್ಯೆ ಈ ಎಲ್ಲಾ ವಿಷಯಗಳ ಬಗ್ಗೆ ಗಮನ ಹರಿಸಬೇಕು. ಅದು ಬಿಟ್ಟು, ನಂಬಿಕೆ ಇದ್ದರೆ ಹೋಗಿ. ಯಾರನ್ನೂ ಒತ್ತಾಯಪಡಿಸಲಾಗದು. ಪ್ರತಿಯೊಬ್ಬರಿಗೂ ಅವರದ್ದೇ ಆದ ಹಕ್ಕಿದೆ ಎಂದು ಹೇಳಿದರು. ನಾನು ಕಟೀಲು ದುರ್ಗಾ ಪರಮೇಶ್ವರಿ, ಉಳ್ಳಾಲ ದರ್ಗಾ, ಚರ್ಚ್‌ಗಳಿಗೆ ಭೇಟಿ ನೀಡುತ್ತೇನೆ. ಯಾರೂ ನನ್ನನ್ನು ಒತ್ತಾಯ ಮಾಡಿಲ್ಲ. ಕೃಷ್ಣ ಮಠಕ್ಕೆ ಸಂಬಂಧಿಸಿಯೂ ನಂಬಿಕೆ ಇದ್ದರೆ ಭೇಟಿ ನೀಡಬಹುದು ಎಂದು ಅವರು ಹೇಳಿದರು







