ಪೆಟ್ರೋಲ್ ರಾಮರ್ ಪಿಳ್ಳೆಗೆ 3ವರ್ಷ ಕಠಿಣ ಶಿಕ್ಷೆ

ಚೆನ್ನೈ, ಅಕ್ಟೋಬರ್ 15: ಹಸಿರೆಲೆಗಳಿಂದ ಪೆಟ್ರೋಲ್ ನಿರ್ಮಿಸಲು ಸಾಧ್ಯವಿದೆ ಎಂದು ಸಂಶೋಧನೆ ನಡೆಸಿ ವಿವಾದ ಸೃಷ್ಟಿಸಿದ್ದ ರಾಮರ್ ಪಿಳ್ಳೆ ಮತ್ತು ಇತರ ನಾಲ್ವರ ವಿರುದ್ಧ ಸಿಬಿಐ ದಾಖಲಿಸಿದ್ದ ಹಸಿರಲೆ ಪ್ರೆಟ್ರೋಲ್ ವಂಚನೆ ಪ್ರಕರಣದಲ್ಲಿ ಮೂರು ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಲಾಗಿದೆ ಎಂದು ವರದಿಯಾಗಿದೆ. ವಾಗ್ಮೋರ್ ಅಡಿಷನಲ್ ಚೀಫ್ ಮ್ಯಾಜಿಸ್ಟ್ರೇಟ್ ಕೋರ್ಟು ಜಡ್ಜ್ ಬಾಲಸುಬ್ರಹ್ಮಣ್ಯಂ ರಾಮರ್ ಪಿಳ್ಳೆ, ಸಂಗಡಿಗರಾದ ಆರ್.ವೇಣು ದೇವಿ, ಎಸ್. ಚಿನ್ನಸ್ವಾಮಿ, ಆರ್. ರಾಜಶೇಖರನ್, ಎ.ಕೆ.ಕೆ ಭರತ್ ಎಂಬ ನಾಲ್ವರಿಗೆ ಮೂರುವರ್ಷ ಕಠಿಣ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಹಸಿರೆಲೆ ಪೆಟ್ರೋಲ್ ಎಂದು ಪೆಟ್ರೋಲಿಯಂ ಉತ್ಪನ್ನಗಳನ್ನು ಬೆರಕೆ ಮಾಡಿ ಮಾರಾಟ ಮಾಡಿ ವಂಚನೆ ನಡೆಸಿದ ಆರೋಪದಲ್ಲಿ ಸಿಬಿಐ ಕೇಸು ದಾಖಲಿಸಿತ್ತು.
ಪ್ರಕೃತಿ ಉತ್ಪನ್ನಗಳಿಂದಲೂ ಪೆಟ್ರೋಲ್ ನಿರ್ಮಿಸಬಹುದು ಎಂದು 1996-2000 ಇಸವಿಯಲ್ಲಿ ರಾಮರ್ ಮತ್ತು ಸಂಗಡಿಗರು ರಂಗಪ್ರವೇಶಿಸಿದ್ದರು. ಆದರೆ ವೈಜ್ಞಾನಿಕ ಪರೀಕ್ಷೆಯಲ್ಲಿ ಟೊಲುವಿನ್ ,ನಾಫ್ತ್ ಮಿಶ್ರಣ ಮಾಡಿರುವುದು ಹಸಿರೆಲೆ ಪೆಟ್ರೋಲ್ ಎಂದು ಪತ್ತೆಯಾಗಿತ್ತು.
ಔಟ್‌ಲೆಟ್‌ಗಳನ್ನು ಸ್ಥಾಪಿಸಲು ಪೆಟ್ರೋಲ್ ಬಂಕ್ ಮಾಲಕರುಗಳಿಂದ 2.27 ಕೋಟಿ ರೂಪಾಯಿ ಪಡೆದು ವಂಚಿಸಿದ ಆರೋಪ ರಾಮರ್ ಪಿಳ್ಳೆ ಸಂಗಡಿಗರ ಮೇಲೆ ಹೊರಿಸಲಾಗಿತ್ತು. ಸಿಬಿಐ ವಂಚನೆ ಪ್ರಕರಣ ದಾಖಲಿಸಿತ್ತು. ನಂತರ ಹನ್ನೊಂದು ಚಿಲ್ಲರೆ ಮಾರಾಟ ಕೇಂದ್ರಗಳಿಂದ ವಾಹನದ ಇಂಜಿನ್‌ಗಳಿಗೆ ಹಾನಿಯೊಡ್ಡುವ ರಾಮರ್ ಪಿಳ್ಳೆಯ 1500 ಲೀಟರ್ ಪೆಟ್ರೋಲನ್ನು ವಶಪಡಿಸಿಕೊಳ್ಳಲಾಗಿತ್ತು ಎಂದು ವರದಿ ತಿಳಿಸಿದೆ.







