ಸ್ಮೃತಿ ಇರಾನಿಯ ಶೈಕ್ಷಣಿಕ ದಾಖಲೆಗಳನ್ನು ದಿಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಿದ ಚುನಾವಣಾ ಆಯೋಗ

ಹೊಸದಿಲ್ಲಿ, ಅ.15:ಸಚಿವೆ ಸ್ಮೃತಿ ಇರಾನಿ ಅವರ ಶೈಕ್ಷಣಿಕ ಅರ್ಹತೆಗೆ ಸಂಬಂಧಿಸಿದ ದಾಖಲೆಗಳನ್ನು ದಿಲ್ಲಿ ಚುನಾವಣಾ ಆಯೋಗವು ದಿಲ್ಲಿಯ ಪಟಿಯಾಲ ಹೌಸ್ ಕೋರ್ಟಿಗೆ ಸಲ್ಲಿಸಿದೆ. ಸ್ಮೃತಿ ಅವರ ವಿರುದ್ಧ ದಾಖಲಾಗಿರುವ ನಕಲಿ ಡಿಗ್ರಿ ಹಗರಣ ಸಂಬಂಧದ ಪ್ರಕರಣ ಪ್ರಸಕ್ತ ನ್ಯಾಯಾಲಯದಲ್ಲಿ ವಿಚಾರಣೆಗೆ ಕೈಗೆತ್ತಿಕೊಳ್ಳಲಾಗಿದೆ. ಈ ಪ್ರಕರಣದ ತೀರ್ಪನ್ನು ನ್ಯಾಯಾಲಯ ಅಕ್ಟೋಬರ್ 18 ರಂದು ನೀಡಲಿದೆ.
ಸಚಿವೆ 2014 ರ ಸಾರ್ವತ್ರಿಕ ಚುನಾವಣೆ ಸಂದರ್ಭ ಆಯೋಗಕ್ಕೆ ಸಲ್ಲಿಸಿದ್ದ ತನ್ನಶೈಕ್ಷಣಿಕ ಅರ್ಹತೆಯ ಸಂಬಂಧದ ದಾಖಲೆಗಳನ್ನು ಹಾಜರು ಪಡಿಸುವಂತೆ ಅಕ್ಟೋಬರ್ 6 ರಂದು ಸ್ಥಳೀಯ ನ್ಯಾಯಾಲಯ ದಿಲ್ಲಿ ರಾಜ್ಯ ಚುನಾವಣಾ ಆಯೋಗಕ್ಕೆ ಹೇಳಿತ್ತು. ಆಕೆ ಆಯೋಗಕ್ಕೆ ತನ್ನ ಶೈಕ್ಷಣಿಕ ಅರ್ಹತೆಯ ಬಗ್ಗೆ ತಪ್ಪು ಮಾಹಿತಿ ನೀಡಿದ್ದಾರೆಂದು ಫ್ರೀಲಾನ್ಸ್ ಲೇಖಕ ಅಹ್ಮರ್ ಖಾನ್ ದೂದು ದಾಖಲಿಸಿದ್ದರು. ಸ್ಮೃತಿ ಅವರು ಉದ್ದೇಶಪೂರ್ವಕವಾಗಿ ಚುನಾವಣಾ ಆಯೋಗಕ್ಕೆ ತಪ್ಪು ಮಾಹಿತಿ ನೀಡಿದ್ದರು ಎಂದೂ ಅವರು ಆರೋಪಿಸಿದ್ದರು.
ಸ್ಮೃತಿ ತನ್ನ ಎಪ್ರಿಲ್ 2004 ರ ಅಫಿಡವಿಟ್ ನಲ್ಲಿ ತನ್ನ ಬಿಎ ಪದವಿ 1996 ರಲ್ಲಿ ದಿಲ್ಲಿ ವಿಶ್ವವಿದ್ಯಾನಿಲಯ (ಸ್ಕೂಲ್ ಆಫ್ ಕರೆಸ್ಪಾಂಡೆನ್ಸ್)ದ ಮುಖಾಂತರ ಪೂರ್ಣಗೊಂಡಿದ್ದರೆ, ಗುಜರಾತ್ ನಿಂದ ರಾಜ್ಯ ಸಭೆಗೆ ಸ್ಪರ್ಧಿಸುವ ಸಂದರ್ಭ ಜುಲೈ 11ಮ 2011 ರಲ್ಲಿ ಸಲ್ಲಿಸಿರುವ ಅಫಿಡವಿಟ್ ನಲ್ಲಿ ತಾನು ಬಿ.ಕಾಂ ಪಾರ್ಟ್ 1 ಪದವಿಯನ್ನು ಸ್ಕೂಲ್ ಆಫ್ ಕರೆಸ್ಪಾಂಡೆನ್ಸ್,ದಿಲ್ಲಿ ವಿಶ್ವವಿದ್ಯಾಲಯದಲ್ಲಿ ಪೂರ್ತಿಗೊಳಿಸಿರುವುದಾಗಿ ಹೇಳಿದ್ದರು.
ಈ ಸಂಬಂಧ ಸ್ಮೃತಿ ಇರಾನಿಯವರಿಗೆ ಸಮನ್ಸ್ ಕಳುಹಿಸಬೇಕೇ ಅಥವಾ ಬೇಡವೇ ಎಂಬುದನ್ನು ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಹರ್ವಿಂದರ್ ಸಿಂಗ್ ನಿರ್ಧರಿಸಲಿದ್ದಾರೆ. ಈ ಹಿಂದೆ ಚುನಾವಣಾ ಆಯೋಗದ ಅಧಿಕಾರಿಯೊಬ್ಬರು ಕೋರ್ಟಿನ ಮುಂದೆ ತಮ್ಮ ಹೇಳಿಕೆಯಲ್ಲಿ ಸ್ಮೃತಿ ಅವರ ಶೈಕ್ಷಣಿಕ ಅರ್ಹತೆಗೆ ಸಂಬಂಧಿಸಿದ ದಾಖಲೆಗಳು ಕಾಣುತ್ತಿಲ್ಲವೆಂದು ಹೇಳಿದ್ದರು. ಈ ಹಿಂದಿನ ಕೋರ್ಟಿನ ನಿರ್ದೇಶನದನ್ವಯ ದಿಲ್ಲಿ ವಿಶ್ವವಿದ್ಯಾನಿಲಯ ಕೂಡ ತನಗೆ ಸ್ಮೃತಿ ಅವರು 1996 ರಲ್ಲಿ ಪೂರ್ತಿಗೊಳಿಸಿದ ಬಿಎ ಕೋರ್ಸ್ ಸಂಬಂಧದ ದಾಖಲೆಗಳು ಲಭ್ಯವಿಲ್ಲ ಎಂದು ಹೇಳಿತ್ತು.







