ಅಫ್ರಿದಿಗೆ ದಾವೂದ್ ಇಬ್ರಾಹಿಂ ಧಮ್ಕಿ!

ಕರಾಚಿ, ಅ.15: ಪಾಕಿಸ್ತಾನದ ಆಲ್‌ರೌಂಡರ್ ಶಾಹಿದ್ ಅಫ್ರಿದಿ ಹಾಗೂ ಮಾಜಿ ಕ್ರಿಕೆಟಿಗ ಜಾವೇದ್ ಮಿಯಾಂದಾದ್ ನಡುವಿನ ವಾಕ್ಸಮರ ತಾರ್ಕಿಕ ಅಂತ್ಯಕ್ಕೆ ತಲುಪಿದ್ದು, ಬಾಯಿ ಮುಚ್ಚಿ ಕುಳಿತುಕೊಳ್ಳುವಂತೆ ಭೂಗತ ದೊರೆ ದಾವೂದ್ ಇಬ್ರಾಹಿಂ ಅಫ್ರಿದಿಗೆ ಬೆದರಿಕೆ ಹಾಕಿರುವುದಾಗಿ ವರದಿಯಾಗಿದೆ.
ಅಫ್ರಿದಿ ವಿದಾಯದ ಪಂದ್ಯ ಆಡುವುದರೊಂದಿಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್‌ಬೈ ಹೇಳುವ ಬಯಕೆ ವ್ಯಕ್ತಪಡಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಪಾಕ್‌ನ ಕ್ರಿಕೆಟ್ ದಂತಕತೆ ಮಿಯಾಂದಾದ್, ಅಫ್ರಿದಿ ಕೇವಲ ಹಣಕ್ಕಾಗಿಯೇ ವಿದಾಯದ ಪಂದ್ಯ ಆಡಲು ಬಯಸುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದರು.
ತನ್ನ ಚೊಚ್ಚಲ ಏಕದಿನ ಇನಿಂಗ್ಸ್‌ನಲ್ಲಿ 37 ಎಸೆತಗಳಲ್ಲಿ ಶತಕ ಬಾರಿಸಿ ದಾಖಲೆ ಬರೆದಿದ್ದ ಅಫ್ರಿದಿ ಅವರು ಮಿಯಾಂದಾದ್ ಹೇಳಿಕೆಗೆ ಗರಂ ಆಗಿದ್ದು,‘‘ಮಿಯಾಂದಾದ್ ಯಾವಾಗಲೂ ಹಣದ ಹಿಂದೆ ಬಿದ್ದವರು. ಅವರು ಭಾಗಿಯಾಗಿದ್ದ ಮ್ಯಾಚ್ ಫಿಕ್ಸಿಂಗ್ ಪ್ರಕರಣವೇ ಇದಕ್ಕೆ ಸಾಕ್ಷಿ ಎಂದು ಹೇಳಿದ್ದರು.
ಈ ಇಬ್ಬರ ನಡುವೆ ಟ್ವೀಟರ್‌ನಲ್ಲಿ ಸರಣಿ ಆರೋಪ-ಪ್ರತ್ಯಾರೋಪಗಳು ನಡೆದಿವೆ. ಮಿಯಾಂದಾದ್ ಸಂಬಂಧಿ ದಾವೂದ್ ಇಬ್ರಾಹಿಂ ಈ ಗಲಾಟೆಯಲ್ಲಿ ಮಧ್ಯಪ್ರವೇಶಿಸಿದ್ದು, ಬಾಯಿ ಮುಚ್ಚಿಕೊಂಡು ಇರುವಂತೆ ಅಫ್ರಿದಿಗೆ ಧಮ್ಕಿ ಹಾಕಿದ್ದಾನೆ ಎನ್ನಲಾಗಿದೆ.
ದಾವೂದ್ ಪುತ್ರಿಯನ್ನು ಮಿಯಾಂದಾದ್ ಮಗ ಮದುವೆಯಾಗಿದ್ದಾನೆ. ಈ ಹಿನ್ನೆಲೆಯಲ್ಲಿ ದಾವೂದ್ ಅಫ್ರಿದಿಗೆ ಯಾವುದೇ ಹೇಳಿಕೆ ನೀಡದಂತೆ ಎಚ್ಚರಿಕೆ ನೀಡಿದ್ದಾಗಿ ವರದಿಯಾಗಿದೆ.







